Homeರಾಜ್ಯಸಚಿವರ ನಡವಳಿಕೆ ವಿರುದ್ಧ ಹೈಕಮಾಂಡ್‌ ಅಸಮಾಧಾನ

ಸಚಿವರ ನಡವಳಿಕೆ ವಿರುದ್ಧ ಹೈಕಮಾಂಡ್‌ ಅಸಮಾಧಾನ

ಬೆಂಗಳೂರು, ಸೆ.17- ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಬಾಕಿಯಿರುವ ಸಂದರ್ಭದಲ್ಲೇ ಕಾಂಗ್ರೆಸ್‌‍ ಹೈಕಮಾಂಡ್‌ ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಕೆಲ ಸಚಿವರ ನಡವಳಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್‌ ರಚನೆ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ನೀಡಿದ್ದ ಸೂಚನೆಯನ್ನು ಕಡೆಗಣಿಸಿ ಕೆಲ ಸಚಿವರು ತಮ ಮನಸ್ಸೋ ಇಚ್ಛೆ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ನಿನ್ನೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಿವೆ.

ಬರ ನಿರ್ವಹಣೆ ವಿಚಾರದಲ್ಲಿ ಹಣಕಾಸು ಸೌಲಭ್ಯ ಒದಗಿಸುವ ಬದಲಾಗಿ ಬೇರೆ ಬೇರೆ ಯೋಜನೆಗಳತ್ತ ಗಮನಹರಿಸುವುದು ಅನಪೇಕ್ಷಣಿಯ. ಬರ ಪರಿಸ್ಥಿತಿಯಂತಹ ಸೂಕ್ಷ್ಮ ಸಂದರ್ಭದಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಕೆಲ ಸಚಿವರು ಇನ್ನೂ ಕಾರ್ಯನಿರ್ವಹಣೆಯನ್ನು ಆರಂಭಿಸಿಲ್ಲ. ಇನ್ನೂ ಕೆಲವರು ತಮ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ ಎಂದು ಶಾಸಕರು ಆರೋಪಿಸುತ್ತಿದ್ದಾರೆ.

ಕೆಲವು ಗುತ್ತಿಗೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಡಳಿತ ಪಕ್ಷದ ಶಾಸಕರೇ ಬಹಿರಂಗ ಪತ್ರ ಬರೆಯುತ್ತಿದ್ದಾರೆ. ಹೀಗಿದ್ದಾಗ ವಿರೋಧ ಪಕ್ಷದವರು ಸುಮನೆ ಇರುತ್ತಾರೆಯೇ? ಚುನಾವಣೆಯ ಸಮೀಪದ ವೇಳೆಯಲ್ಲಿ ಪ್ರತಿಯೊಂದು ವಿಚಾರದ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು ಎಂದು ವೇಣುಗೋಪಾಲ್‌ ತಾಕೀತು ಮಾಡಿದ್ದಾರೆ.

ಮುಂದಿನ ಅವಧಿಗೆ ಸರ್ಕಾರ ಮರಳಿ ಅಧಿಕಾರಕ್ಕೆ ಬರಲೇಬೇಕು. ಇಲ್ಲದೇ ಹೋದರೆ ಕಾಂಗ್ರೆಸ್‌‍ಗೆ ರಾಷ್ಟ್ರ ಮಟ್ಟದಲ್ಲಿ ಅಳಿವು-ಉಳಿವಿನ ಪ್ರಶ್ನೆ ಎದುರಾಗಲಿದೆ.
ಶಾಸಕರು, ಸಚಿವರು ಪಕ್ಷದ ಸೂಚನೆಗೆ ಸ್ಪಂದಿಸದೇ ಇದ್ದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ಬಾರಿ ಪ್ರಭಾವಗಳಿಗೆ ಮಣಿಯುವುದಿಲ್ಲ, ಶಾಸಕರ, ಸಚಿವರ ಕಾರ್ಯನಿರ್ವಹಣೆ, ಸಕ್ರಿಯ ಭಾಗವಹಿಸುವಿಕೆ ಹಾಗೂ ಪಕ್ಷ ನಿಷ್ಠೆಯನ್ನು ಪ್ರಮುಖ ವಿಚಾರವನ್ನಾಗಿ ಪರಿಗಣಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಎಸ್‌‍ಐಆರ್‌ ವಿಚಾರವಾಗಿ ಮತ್ತಷ್ಟು ಜಾಗ್ರತೆ ವಹಿಸುವಂತೆ ಪ್ರಧಾನ ಕಾರ್ಯದರ್ಶಿಗಳು ತಾಕೀತು ಮಾಡಿದ್ದಾರೆ. ಗಣೇಶೋತ್ಸವ, ದಸರಾ ಆಚರಣೆ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಬಿಜೆಪಿ ಕೋಮು ಸಂಘರ್ಷದ ಮೂಲಕ ಶಾಂತಿಭಂಗ ಉಂಟುಮಾಡುವ ಸಾಧ್ಯತೆ ಇದೆ. ಇದನ್ನು ತಡೆಯಲು ಸಾಕಷ್ಟು ಮುಂಜಾಗ್ರತೆ ಅಗತ್ಯ.

ಗೃಹ ಇಲಾಖೆ ಅತ್ಯಂತ ಎಚ್ಚರಿಕೆಯಿಂದ ಇದ್ದು, ಜನರ ನೆಮದಿಗೆ ಭಂಗ ಉಂಟಾಗದಂತೆ ಕ್ರಮಕೈಗೊಳ್ಳಬೇಕು. ಸಮಾಜ ಘಾತಕ ಶಕ್ತಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಅನಗತ್ಯ ವಿವಾದಗಳಿಗೆ ತಲೆ ಹಾಕಬಾರದು ಎಂದು ಸಲಹೆ ನೀಡಿರುವುದಾಗಿ ತಿಳಿದು ಬಂದಿದೆ.
ಕೆಲ ಸಚಿವರು ಶಾಸಕರಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳ ಬಗ್ಗೆ ಕೆ.ಸಿ.ವೇಣುಗೋಪಾಲ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವಿಚಾರದಲ್ಲಿ ಮುಖ್ಯಮಂತ್ರಿಯವರು ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಅಂತಹ ಸಚಿವರ ಕುರಿತಂತೆ ಹೈಕಮಾಂಡ್‌ಗೆ ವರದಿ ನೀಡುವಂತೆ ಸಲಹೆ ನೀಡಿದ್ದಾರೆ.

ನಿಗಮ ಮಂಡಳಿಗಳ ನೇಮಕಾತಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭ್ಯರ್ಥಿಗಳ ಆಯ್ಕೆ ವೇಳೆ ಪಕ್ಷ ನಿಷ್ಠಾವಂತರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.ಕಳೆದ ಮೂರು ತಿಂಗಳಲ್ಲಿ ಹೈಕಮಾಂಡ್‌ ನಾಯಕರು ರಾಜ್ಯಕ್ಕಾಗಮಿಸಿ, ಸರ್ಕಾರವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ. ಆರಂಭದಿಂದಲೂ ಕೆಲ ಸಚಿವರ ನಡವಳಿಕೆಗಳು ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌‍ನ ಹಿರಿಯ ನಾಯಕರಿಗೆ ಬಿಸಿ ತುಪ್ಪವಾಗಿದೆ. ಇದಕ್ಕಾಗಿ ಮೊದಲ ಹಂತದ ಸಭೆಯಲ್ಲೇ ಹೈಕಮಾಂಡ್‌ ಕಠಿಣ ಎಚ್ಚರಿಕೆಯನ್ನು ರವಾನಿಸಿದೆ.

RELATED ARTICLES
spot_img

Latest News