ಬೆಳಗಾವಿ,ನ.28- ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಯುವಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗುಂಡೇಟಿನಿಂದ ಗಾಯಗೊಂಡಿರುವ ಬೆಳಕವಾಡಿಯ ದ್ವಾರಕಾನಗರದ ನಿವಾಸಿ ಪ್ರಣೀತ್ಕುಮಾರ್(31)ನನ್ನು ಬಿಮ್ಸೌ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಣೀತ್ಕುಮಾರ್ ನಿನ್ನೆ ಸಂಜೆ ಕೆಎಂಎಫ್ ಡೈರಿ ಬಳಿಯ ಸ್ನೇಹಿತೆ ಮನೆಗೆ ಊಟಕ್ಕೆ ಹೋಗಿದ್ದಾಗ ಹಳೆ ಪ್ರೇಮದ ಬಗ್ಗೆ ಪ್ರಸ್ತಾಪವಾಗಿದೆ.
ಸ್ನೇಹಿತೆ ಆತನಿಗೆ ಸಮಾಧಾನಪಡಿಸಿ ನಿನ್ನ ಹಳೆ ಗೆಳತಿ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಅಷ್ಟರೊಳಗೆ ಹಳೆಯ ಗೆಳತಿ ಹಾಗೂ ಇನ್ನಿತರರು ಸ್ಥಳಕ್ಕೆ ಬಂದು ಪ್ರಣೀತ್ಕುಮಾರ್ ಜೊತೆ ಜಗಳವಾಡಿ ಏಕಾಏಕಿ ಗುಂಡು ಹಾರಿಸಿದಾಗ ಒಂದು ಗುಂಡು ಪ್ರಣೀತ್ ತೊಡೆಗೆ ತಾಗಿದರೆ, ಮತ್ತೊಂದು ಗುಂಡು ಕಿವಿಗೆ ತಾಗಿ ಗಾಯಗೊಂಡಿದ್ದಾರೆ.
ಈ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಪ್ರಣೀತ್ನನ್ನು ತಕ್ಷಣ ಬಿಮ್ಸೌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕೊಡಿಸಲಾಗುತ್ತಿದೆ.
ಗುಂಡಿನ ದಾಳಿ ವಿಷಯ ತಿಳಿದು ಮಾಳಮಾರುತಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಯಡಾಮಾರ್ಟಿನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪ್ರಣೀತ್ನ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಗುಂಡು ಹಾರಿಸಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ
ನಗರದಲ್ಲಿ ಪ್ರಣೀತ್ ಕುಮಾರ್ ಮೇಲಿನ ಗುಂಡಿನ ದಾಳಿಗೆ ಪ್ರೇಮ ವ್ಯವಹಾರವೇ ಕಾರಣ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮರ್ಬನಿಂಗ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮಹಂತೇಶ್ನಗರದಲ್ಲಿ ನಡೆದ ಗುಂಡಿನ ದಾಳಿಯ ಕುರಿತು ಸ್ಪಷ್ಟನೆ ನೀಡಿದ್ದು, ಸಂತ್ರಸ್ತ ಪ್ರಣೀತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಘಟನೆಯ ಹಿಂದೆ ಪ್ರೇಮ ವ್ಯವಹಾರ ಕಾರಣವಿದೆ. ಯುವತಿಯೊಬ್ಬರ ಜೊತೆ 4 ವರ್ಷದಿಂದಲೂ ಸಹಜೀವನ ನಡೆಸುತ್ತಿದ್ದು, ಇತ್ತೀಚೆಗೆ ಮನಸ್ತಾಪ ಬಂದಿದೆ. ನಿನ್ನೆ ಸ್ನೇಹಿತರೊಬ್ಬರ ಮನೆಗೆ ಊಟಕ್ಕೆ ಹೋದಾಗ ತಮ ಹಳೆ ಪ್ರೇಮ ವ್ಯವಹಾರದ ಬಗ್ಗೆ ಹೇಳಿಕೊಂಡಿದ್ದಾರೆ. ಆ ವೇಳೆ ಸ್ನೇಹಿತ ಆಕೆಯ ಮೊಬೈಲ್ ನಂಬರ್ ಕೊಟ್ಟರೆ ಮಾತನಾಡಿ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಮೊಬೈಲ್ ನಂಬರ್ ಪಡೆದು ಯುವತಿಗೆ ಕರೆ ಮಾಡಿದ್ದು, ಆಕೆಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಈ ನಡುವೆ ಪ್ರಣೀತ್ ಮತ್ತು ಯುವತಿ ನಡುವೆ ಕಾವೇರಿದ ಮಾತುಕತೆಗಳು ನಡೆದಿವೆ. ಆ ವೇಳೆ ಆಕೆಯ ಇಬ್ಬರು ಸಂಬಂಧಿಕರು ಸ್ಥಳಕ್ಕೆ ಬಂದಿದ್ದಾರೆ. ಕಾವೇರಿದ ಮಾತುಕತೆಯ ಸಂದರ್ಭದಲ್ಲಿ ಆರೋಪಿಗಳು ಪಿಸ್ತೂಲಿನಿಂದ ಪ್ರಣೀತ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವಿವರಿಸಿದರು.
ಎಲ್ಲಾ ಘಟನೆಗಳೂ ಪ್ರಣೀತ್ ಅವರ ಸ್ನೇಹಿತನ ಮನೆಯಲ್ಲಿ ನಡೆದಿದೆ. ಆತ ಇತ್ತೀಚೆಗೆ ಬೇರೆಯವರ ಜೊತೆ ಸಂಪರ್ಕದಲ್ಲಿರುವ ಕಾರಣಕ್ಕಾಗಿ ಯುವತಿ ರೊಚ್ಚಿಗೆದ್ದು ಗಲಾಟೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಎಷ್ಟು ಸುತ್ತಿನ ಗುಂಡು ಹಾರಿಸಲಾಗಿದೆ, ಕೃತ್ಯಕ್ಕೆ ಬಳಸಿದ ಪಿಸ್ತೂಲು ಅಕ್ರಮವೇ, ಸಕ್ರಮವೇ? ಎಂಬೆಲ್ಲಾ ವಿಚಾರಗಳನ್ನು ಪರಿಶೀಲಿಸಲಾಗುತ್ತದೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಪ್ರಣೀತ್ ದೇಹದಲ್ಲಿ ಯಾವುದೇ ಗುಂಡುಗಳಿಲ್ಲ. ಒಂದಷ್ಟು ಗಾಯಗಳಾಗಿವೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಯುಕ್ತರು ತಿಳಿಸಿದರು.ಬೆಳಗಾವಿ ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ ಎಂಬ ಆರೋಪ ಸರಿಯಲ್ಲ. ಕಳೆದ ವರ್ಷಕ್ಕಿಂತಲೂ ಕಡಿಮೆ ಪ್ರಕರಣಗಳು ಈ ಬಾರಿ ಬಂದಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಗಸ್ತು ಹಾಗೂ ಅಗತ್ಯ ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದು ಹೇಳಿದರು.