ಬೆಂಗಳೂರು,ಜ.20- ಸೈಬರ್ ಅಪರಾಧಕ್ಕೊಳಗಾದವರು ತಕ್ಷಣ ಒಂದು ಗಂಟೆಯೊಳಗಾಗಿ ದೂರು ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಇಂದಿಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಧ ನಡೆದ ಒಂದು ಗಂಟೆ ಗೋಲ್ಡನ್ ಅವರ್ ಆಗಿರುತ್ತದೆ. ಅಷ್ಟರೊಳಗೆ ನಮಗೆ ಮಾಹಿತಿ ನೀಡಿದರೆ ತಕ್ಷಣ ಅದನ್ನು ಪತ್ತೆಹಚ್ಚಲು ನೆರವಾಗುತ್ತದೆ ಎಂದು ವಿವರಿಸಿದರು.
ಡಾ.ರೆಡ್ಡೀಸ್ ಲ್ಯಾಬೋರೇ ಟರೀಸ್ ಔಷಧಿ ಕಂಪನಿಯ ಇ-ಮೇಲ್ ಐಡಿಯನ್ನು ಬಳಸಿ 2.16 ಕೋಟಿ ಹಣವನ್ನು ಗುಜರಾತ್ ರಾಜ್ಯದ ಅಹಮದಬಾದ್ ಮ್ಯೂಲ್ ಬ್ಯಾಂಕ್ ಖಾತೆಗೆ ಹೋಗಿರುವುದು ಗೊತ್ತಾದ ತಕ್ಷಣ ದೂರುದಾರರು ಕೇವಲ 15 ನಿಮಿಷದೊಳಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದರು.
ಹಾಗಾಗಿ ನಮ ಪೊಲೀಸರು ಕ್ಷಣಾರ್ಧದಲ್ಲಿ ಕಾರ್ಯಾಚರಣೆ ಕೈಗೊಂಡು ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಯ ವಿವರ ಪಡೆದು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಫ್ರೀಜ್ ಮಾಡಿಸಿದ್ದರಿಂದ ವಂಚಕರ ಖಾತೆಗೆ ಹಣ ಹೋಗದೆ ಉಳಿದಿದೆ ಎಂದು ಈ ಪ್ರಕರಣವನ್ನು ವಿವರಿಸಿದರು.
ಹಣ ಅಹಮದಬಾದ್‌ನ ಮಹಿಳೆಯೊಬ್ಬರ ಖಾತೆಗೆ ಹೋಗಿರುವುದನ್ನು ಪತ್ತೆ ಹಚ್ಚಲಾಗಿದೆ. ಆ ಮಹಿಳೆಯನ್ನು ಶೀಘ್ರದಲ್ಲಿ ಬಂಧಿಸುತ್ತೇವೆ. ವಿದೇಶದಲ್ಲಿ ಕುಳಿತು ಸೈಬರ್‌ಕ್ರೈಂ ವಂಚಕರು ವಂಚನೆ ಮಾಡಿರುವುದು ಗೊತ್ತಾಗಿದೆ. ಹಾಗಾಗಿ ಅವರ ಬಂಧನಕ್ಕೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ಒಂದು ವೇಳೆ ಸಾರ್ವಜನಿಕರು ಸೈಬರ್ ವಂಚನೆಗೊಳಗಾದಲ್ಲಿ ಮೊದಲ 1 ಗಂಟೆಯೊಳಗೆ ದೂರು ನೀಡಬೇಕೆಂದು ಸಾರ್ವಜನಿಕರಲ್ಲಿ ಆಯುಕ್ತರು ಮನವಿ ಮಾಡಿದ್ದಾರೆ. ಮಾದಕ ವಸ್ತು ಮಾರಾಟ ಹಾಗೂ ಸಾಗಾಣೆ ಮಾಡುವವರ ವಿರುದ್ಧ ತೀವ್ರ ನಿಗಾ ವಹಿಸಲಾಗಿದೆ. ಡ್ರಗ್ಸ್ ಮಾರಾಟ ಜಾಲದಲ್ಲಿ ತೊಡಗಿ ಬಂಧನಕ್ಕೊಳಗಾದ ನಂತರವೂ ಜೈಲಿನಿಂದ ಹೊರಬಂದು ಮತ್ತೆ ಪದೇಪದೇ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು. ಬಂಡೇಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.
