Homeರಾಜಕೀಯನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ : ದಿನೇಶ್‌ ಗುಂಡೂರಾವ್‌

ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ : ದಿನೇಶ್‌ ಗುಂಡೂರಾವ್‌

ಬೆಂಗಳೂರು, ಆ.6- ಸಚಿವ ಸ್ಥಾನ ವಂಚಿತರಾಗಿ ಅಸಮಾಧಾನ ಗೊಂಡಿರುವ ಶಾಸಕರೊಂದಿಗೆ ಪಕ್ಷದ ವರಿಷ್ಠರು ಮಾತುಕತೆ ನಡೆಸಬೇಕು ಎಂದು ತಾವು ಸಲಹೆ ನೀಡಿದ್ದಾಗಿ ಮಾಜಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರನ್ನು ಭೇಟಿಯಾಗಿ ಅವರ ಅಸಮಾಧಾನವನ್ನು ಆಲಿಸುವಂತೆ ಪಕ್ಷದ ವರಿಷ್ಠರಿಗೆ ನಾನು ಸಲಹೆ ನೀಡಿದ್ದೆ. ಅದರಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಬೆಂಗಳೂರಿಗೆ ಬಂದು ಅತೃಪ್ತ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರೂ ಅತೃಪ್ತ ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು.

ನನ್ನನ್ನು ಸಮಾಧಾನಪಡಿಸುವ ಅಗತ್ಯವೇನೂ ಇಲ್ಲ. ನಿನ್ನೆ ಕೆಪಿಸಿಸಿ ಅಧ್ಯಕ್ಷರು ನನ್ನ ಮನೆಗೆ ಬಂದು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ನನ್ನನ್ನು ಪ್ರತ್ಯೇಕವಾಗಿ ಭೇಟಿ ಮಾಡಲೇಬೇಕು ಎಂಬ ನಿರೀಕ್ಷೆಯೂ ಇಲ್ಲ ಎಂದರು.

ನನಗೆ ನನ್ನ ಕ್ಷೇತ್ರವಿದೆ. ಜನರ ನಡುವೆ ಕೆಲಸ ಮಾಡುತ್ತೇನೆ. ವಿಷಯಾಧಾರಿತ ಹೋರಾಟಗಳನ್ನು ಮುಂದುವರಿ ಸುತ್ತೇನೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಽಕಾರಕ್ಕೆ ತರುವ ಗುರಿಯೊಂದಿಗೆ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ ಸಿಗದಿರುವ ವಿಚಾರವನ್ನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದು ಈಗ ಮುಗಿದ ಅಧ್ಯಾಯ ಎಂದು ಹೇಳಿದರು.

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬಹಳ ವರ್ಷಗಳ ಬಳಿಕವೂ ಬ್ರಾಹ್ಮಣ ಸಮುದಾಯಕ್ಕೆ ಅವಕಾಶ ತಪ್ಪಿದೆ. ಜಾಪ್ರಭುತ್ವದಲ್ಲಿ ಎಲ್ಲ ಸಮುದಾಯಗಳಿಗೂ ಅವಕಾಶ ಕೇಳುವ ಹಕ್ಕಿದೆ. ಅದರಂತೆ ಬ್ರಾಹ್ಮಣ ಸಮುದಾಯವೂ ತನ್ನ ಬೇಡಿಕೆಯನ್ನು ಮುಂದಿಟ್ಟಿದೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದರು.

RELATED ARTICLES
spot_img

Latest News