ತಿರುವನಂತಪುರಂ, ಸೆ. 21- ಕೇರಳದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಭೂಕುಸಿತ ಹಾಗೂ ದಿಢೀರ್ ಪ್ರವಾಹಕ್ಕೆ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಲಪ್ಪುರಂ ಜಿಲ್ಲೆಯ ನೀಲಂಬೂರ್-ಅಮರಂಬಲಂ ಪ್ರದೇಶದಲ್ಲಿ ದಿಢೀರ್ ಪ್ರವಾಹ ಸಂಭವಿಸಿದೆ. ನೀರಿನ ಹರಿವು ಏಕಾಏಕಿ ಹೆಚ್ಚಾದ ಪರಿಣಾಮ ನದಿಗೆ ಇಳಿದಿದ್ದ ಆರು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ.
ಈ ಪೈಕಿ ಐವರ ಮೃತದೇಹಗಳು ಪತ್ತೆಯಾಗಿದ್ದು, ಮತ್ತೊಬ್ಬರಿಗಾಗಿ ರಕ್ಷಣಾ ತಂಡಗಳು ಶೋಧ ನಡೆಸುತ್ತಿವೆ. ಘಟನೆ ಬಳಿಕ ವಿಶೇಷ ವಿಪತ್ತು ನಿರ್ವಹಣಾ ಪಡೆ ತಂಡವನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ನದಿಯ ನೀರಿನ ಮಟ್ಟ ಏಕಾಏಕಿ ಏರಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಡುಕ್ಕಿ ಜಿಲ್ಲೆಯಲ್ಲಿ ಮಳೆಯ ನಡುವೆ ಭೂಕುಸಿತ ಸಂಭವಿಸಿ ಶೆಡ್‌ವೊಂದರ ಮೇಲೆ ಮಣ್ಣು ಬಿದ್ದಿದೆ. ಮಳೆಯಿಂದ ತಪ್ಪಿಸಿಕೊಳ್ಳಲು ಮಧ್ಯಾಹ್ನ ಸುಮಾರು 3.30ರ ವೇಳೆಗೆ ಮೂವರು ಶೆಡ್‌ನಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಭೂಕುಸಿತ ಸಂಭವಿಸಿ ಶೆಡ್ ಹಾನಿಗೊಂಡಿದ್ದು, ಅದರೊಳಗೆ ಸಿಲುಕಿದ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಮಹಿಳೆ ಗಾಯಗೊಂಡಿದ್ದಾರೆ.
ಕೊಟ್ಟಾಯಂ ಜಿಲ್ಲೆಯಲ್ಲೂ ಭೂಕುಸಿತ ಸಂಭವಿಸಿದ್ದು, ತಮಿಳುನಾಡಿನ 35 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಚೆನ್ನೈ ನಿವಾಸಿ ಸಂಗೀತಾ ಸ್ನೇಹಿತೆಯೊಂದಿಗೆ ತಮಿಳುನಾಡಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆಗೆ ಮಣ್ಣು ಕುಸಿದು ಬಿದ್ದ ಪರಿಣಾಮ ಸಂಗೀತಾ ಮೃತಪಟ್ಟಿದ್ದಾರೆ. ಅವರ ಸ್ನೇಹಿತೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಇಂದು ಕೇರಳದ ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಪತ್ತನಂತಿಟ್ಟ, ಆಳಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಹಾಗೂ ತ್ರಿಶೂರ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯ ಜೊತೆಗೆ ಗಂಟೆಗೆ 40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯೂ ಇದೆ. ಕೊಲ್ಲಂ, ಪಾಲಕ್ಕಾಡ್ ಹಾಗೂ ಕಣ್ಣೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಮಳೆಯ ಪರಿಸ್ಥಿತಿಯನ್ನು ಗಂಟೆಗೊಮ್ಮೆ ಪರಿಶೀಲಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲಾಧಿಕಾರಿಗಳೊಂದಿಗೆ ವಿಪತ್ತು ನಿರ್ವಹಣಾ ಆಯುಕ್ತೆ ವಿಘ್ನೇಶ್ವರಿ ಐಎಎಸ್ ಸಭೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಜನರಿಗೆ ಎಸ್‌ಎಂಎಸ್ ಮೂಲಕ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ. ಅಗತ್ಯವಿದ್ದರೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.
