ನವದೆಹಲಿ,ಆ.7- ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಯುಜಿ- 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿರುವ ಆರೋಪಪಟ್ಟಿ ಹಲವು ಆತಂಕಕಾರಿ ಅಂಶಗಳನ್ನು ಬೆಳಕಿಗೆ ತಂದಿದೆ. ಪರೀಕ್ಷೆ ನಡೆಯುವ ಮುನ್ನವೇ ಪ್ರಶ್ನೆಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಗೌಪ್ಯ ಪ್ರಕ್ರಿಯೆಯಿಂದ ಹೊರಬಂದು, ಕೈಬರಹದ ಟಿಪ್ಪಣಿಗಳು, ರಹಸ್ಯ ಪರಿಷ್ಕರಣಾ ತರಗತಿಗಳು, ಛಾಯಾಚಿತ್ರಗಳು ಮತ್ತು ಟೆಲಿಗ್ರಾಮ್ ಮೂಲಕ ವಿವಿಧ ರಾಜ್ಯಗಳಿಗೆ ತಲುಪಿದ್ದವು ಎಂದು ತನಿಖೆ ತಿಳಿಸಿದೆ.
ಸಿಬಿಐ ಆರೋಪಪಟ್ಟಿಯ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆ ಮುದ್ರಣ ಹಂತದಲ್ಲಿ ನಡೆದದ್ದಲ್ಲ; ಪ್ರಶ್ನೆಪತ್ರಿಕೆಗಳ ಅನುವಾದ, ಬ್ಯಾಕ್-ಅನುವಾದ ಹಾಗೂ ಪ್ರೂಫ್‌ರೀಡಿಂಗ್ ಹಂತದಲ್ಲೇ ನಡೆದಿದೆ. ಈ ಕಾರ್ಯದಲ್ಲಿ ತೊಡಗಿದ್ದ ಮೂವರು ವಿಷಯ ತಜ್ಞರು ಪ್ರಶ್ನೆಗಳನ್ನು ಅನಧಿಕೃತವಾಗಿ ಹೊರತೆಗೆದಿದ್ದಾರೆ ಎನ್ನಲಾಗಿದೆ. ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗದ ಮನಿಷಾ ಗುರುನಾಥ್ ಮಂಧಾರೆ, ರಸಾಯನಶಾಸ್ತ್ರ ವಿಭಾಗದ ಪ್ರಹ್ಲಾದ್ ವಿಠಲರಾವ್ ಕುಲಕರ್ಣಿ ಹಾಗೂ ಭೌತಶಾಸ್ತ್ರ ವಿಭಾಗದ ಮನಿಷಾ ಸಂಜಯ್ ಹವಾಲ್ದಾರ್ ಅವರ ಹೆಸರು ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ.
ರಹಸ್ಯ ಪರಿಷ್ಕರಣಾ ತರಗತಿಗಳಲ್ಲಿ ಪ್ರಶ್ನೆಗಳ ಬೋಧನೆಏಪ್ರಿಲ್ ತಿಂಗಳಲ್ಲಿಯೇ ಪುಣೆಯಲ್ಲಿರುವ ಖಾಸಗಿ ನಿವಾಸಗಳಲ್ಲಿ ವಿಶೇಷ ಪರಿಷ್ಕರಣಾ ಅಧಿವೇಶನಗಳನ್ನು ಆಯೋಜಿಸಿ, ಅಭ್ಯರ್ಥಿಗಳಿಗೆ ನಿಖರವಾದ ಪ್ರಶ್ನೆಗಳು, ಬಹು ಆಯ್ಕೆ ಉತ್ತರಗಳು ಹಾಗೂ ಸರಿಯಾದ ಉತ್ತರಗಳನ್ನು ಮೌಖಿಕವಾಗಿ ತಿಳಿಸಲಾಗುತ್ತಿತ್ತು. ಅಭ್ಯರ್ಥಿಗಳು ಅವುಗಳನ್ನು ತಮ ನೋಟ್‌ಬುಕ್‌ಗಳಲ್ಲಿ ಕೈಬರಹದಲ್ಲಿ ದಾಖಲಿಸಿಕೊಂಡಿದ್ದರು ಎಂದು ತನಿಖೆ ಹೇಳಿದೆ.
ಭೌತಶಾಸ್ತ್ರದ ಪ್ರಶ್ನೆಗಳು ಮತ್ತೊಂದು ಮಾರ್ಗದಲ್ಲಿ ಸೋರಿಕೆಯಾಗಿದ್ದು, ಕೋಚಿಂಗ್ ಅಧ್ಯಾಪಕರ ಮೂಲಕ ಕೈಬರಹದ ಪ್ರತಿಗಳನ್ನು ಸಿದ್ಧಪಡಿಸಿ, ನಂತರ ಅವುಗಳ ಛಾಯಾಚಿತ್ರಗಳನ್ನು ತೆಗೆದು ಮುಂದಕ್ಕೆ ರವಾನಿಸಲಾಗಿತ್ತು. ಆರೋಪಿಗಳ ನಡುವಿನ ಹಣಕಾಸು ವ್‌ಯವಹಾರಗಳ ಡಿಜಿಟಲ್ ದಾಖಲೆಗಳನ್ನೂ ಸಿಬಿಐ ಪತ್ತೆ ಹಚ್ಚಿದೆ.
ಆಸ್ಪತ್ರೆಯಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆಗಳ ಕಂಠಪಾಠಆರೋಪಪಟ್ಟಿಯ ಮತ್ತೊಂದು ಪ್ರಮುಖ ಅಂಶವೆಂದರೆ, ಕೆಲವು ಅಭ್ಯರ್ಥಿಗಳನ್ನು ಲಾತೂರ್‌ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೋರಿಕೆಯಾದ ಪ್ರಶ್ನೆಗಳನ್ನು ಪರೀಕ್ಷೆಗೆ ಮುನ್ನ ಕಂಠಪಾಠ ಮಾಡಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಗಳ ಬಳಿ ನಗದು ಹಣವೂ ವಶಪಡಿಸಿಕೊಳ್ಳಲಾಗಿದೆ. ಟೆಲಿಗ್ರಾಮ್ ಮೂಲಕ ರಾಜ್ಯಾಂತರ ಪ್ರಸಾರಸೋರಿಕೆಯಾದ ಪ್ರಶ್ನೆಗಳು ನಂತರ ಪಿಡಿಎಫ್ ರೂಪಕ್ಕೆ ಪರಿವರ್ತನೆಯಾಗಿ ಟೆಲಿಗ್ರಾಮ್ ಮೂಲಕ ಮಹಾರಾಷ್ಟ್ರದಿಂದ ಹರಿಯಾಣ ಹಾಗೂ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಗೆ ಕಳುಹಿಸಲಾಗಿತ್ತು. ಅಲ್ಲಿಂದ ಮುದ್ರಿತ ಪ್ರತಿಗಳನ್ನು ಅಭ್ಯರ್ಥಿಗಳು, ಖಾಸಗಿ ತರಬೇತಿ ಸಂಸ್ಥೆಗಳು ಹಾಗೂ ಮಧ್ಯವರ್ತಿಗಳಿಗೆ ವಿತರಿಸಲಾಗಿತ್ತು ಎಂದು ತನಿಖೆ ತಿಳಿಸಿದೆ.
ವಿಧಿವಿಜ್ಞಾನ ಪರೀಕ್ಷೆಯಲ್ಲಿ ದೃಢೀಕರಣದಾಳಿಯ ವೇಳೆ ವಶಪಡಿಸಿಕೊಂಡ ನೋಟ್‌ಬುಕ್‌ಗಳಲ್ಲಿದ್ದ ಕೈಬರಹದ ಪ್ರಶ್ನೆಗಳನ್ನು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಸರ್ಕಾರಿ ಪ್ರಶ್ನಾರ್ಹ ದಾಖಲೆಗಳ ಪರೀಕ್ಷಕರು ಪರಿಶೀಲಿಸಿದ್ದು, ಅವು ಮೇ 3ರಂದು ನಡೆಯಬೇಕಿದ್ದ ಮೂಲ – ಪ್ರಶ್ನೆಪತ್ರಿಕೆಯೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿವೆ ಎಂದು ದೃಢಪಟ್ಟಿದೆ.
ಪರೀಕ್ಷೆ ರದ್ದು ಮರು ಪರೀಕ್ಷೆ :
ಮೇ 3ರಂದು ನಡೆದ – 2026 ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರದ್ದುಗೊಳಿಸಿತ್ತು. ಬಳಿಕ ಜೂನ್ 21ರಂದು ದೇಶದಾದ್ಯಂತ ಎಲ್ಲಾ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಯಿತು. ಭಾರತದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹೊಸದೇನಲ್ಲ. ಕಳೆದ ಕೆಲವು ವರ್ಷಗಳಲ್ಲಿ ಹಲವು ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳು ಸೋರಿಕೆ ಆರೋಪಗಳಿಂದ ವಿವಾದಕ್ಕೀಡಾಗಿವೆ.
2024 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದೇಶವ್ಯಾಪಿ ಚರ್ಚೆಗೆ ಕಾರಣವಾಗಿ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದಿತ್ತು. ಯುಜಿಸಿ-ನೆಟ್ 2024 ಪರೀಕ್ಷೆಯನ್ನು ಅಕ್ರಮಗಳ ಶಂಕೆಯಿಂದ ಕೇಂದ್ರ ಸರ್ಕಾರ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಿತ್ತು.
ವಿವಿಧ ರಾಜ್ಯಗಳಲ್ಲಿ ಪೊಲೀಸ್ ನೇಮಕಾತಿ, ಶಿಕ್ಷಕರ ನೇಮಕಾತಿ ಹಾಗೂ ಸಾರ್ವಜನಿಕ ಸೇವಾ ಆಯೋಗಗಳ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದವು. ಪ್ರಸ್ತುತ ಸಂದರ್ಭ ಮತ್ತು ಪರಿಣಾಮಸಿಬಿಐ ತನಿಖೆಯಿಂದ ಬಹಿರಂಗವಾದ ಮಾಹಿತಿಯು ಪರೀಕ್ಷಾ ಭದ್ರತಾ ವ್‌ಯವಸ್ಥೆಯಲ್ಲಿ ಇರುವ ದೌರ್ಬಲ್ಯಗಳನ್ನು ಸ್ಪಷ್ಟಪಡಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ಅಭ್ಯರ್ಥಿಗಳ ಭವಿಷ್ಯವನ್ನಷ್ಟೇ ಅಲ್ಲ, ದೇಶದ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯ ವಿಶ್ವಾಸವನ್ನೂ ಹಾಳುಮಾಡುವ ಗಂಭೀರ ಅಪರಾಧವಾಗಿದೆ.
ತಜ್ಞರ ಅಭಿಪ್ರಾಯದಂತೆ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಪ್ರತಿಯೊಂದು ಹಂತದಲ್ಲೂ ಡಿಜಿಟಲ್ ನಿಗಾವ್ಯವಸ್ಥೆ, ಸಿಬ್ಬಂದಿಯ ಕಟ್ಟುನಿಟ್ಟಿನ ಪರಿಶೀಲನೆ, ಬಹುಹಂತದ ಭದ್ರತಾ ಕ್ರಮಗಳು ಹಾಗೂ ಸೈಬರ್ ಮೇಲ್ವಿಚಾರಣೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸವನ್ನು ಮರುಸ್ಥಾಪಿಸುವುದು ಕೇಂದ್ರ ಮತ್ತು ಸಂಬಂಧಿತ ಸಂಸ್ಥೆಗಳ ಮುಂದಿರುವ ಪ್ರಮುಖ ಸವಾಲಾಗಿದೆ.
