ಬೆಂಗಳೂರು,ನ.2- ಹಿಂದುಳಿದ ವರ್ಗಗಳ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷ ಈ ರೀತಿ ನಡೆಸಿಕೊಳ್ಳುತ್ತಿರುವುದು, ಅವರ ವಿರುದ್ದ ಕಾಂಗ್ರೆಸ್ ಗುಂಪುಗಾರಿಕೆ ನೋಡಿದರೆ ಲೋಕಸಭೆಯ ನಂತರ ಅವರ ಕುರ್ಚಿಗೆ ಕಂಟಕವೆಂದು ತೋರುತ್ತಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪಾಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅವರ ಸರ್ಕಾರದಲ್ಲೇ ನಡೆಯುತ್ತಿರುವ ಷಡ್ಯಂತ್ರವನ್ನು ನೋಡಿದರೆ ನಮಗೆ ಅಯ್ಯೋ ಅನ್ನಿಸುತ್ತಿದೆ. ಸಿದ್ದರಾಮಯ್ಯನವರು ಹಿಂದಿವಾಲಾ ಸುರ್ಜೆವಾಲಾ ಅವರನ್ನು ಸಮಸ್ಯೆ ಬಗೆಹರಿಸಲು ಕರ್ನಾಟಕಕ್ಕೆ ಸ್ವಾಗತಿಸಿರುವುದು ಅವರ ಅಸಹಾಯಕತೆಯನ್ನು ತೋರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮೊದಲು ಇದ್ದ ಎರಡು ಗುಂಪುಗಳು ಈಗ 5 ಆಗಿದ್ದು, ಎಲ್ಲಾ ಗುಂಪಿನ ನಾಯಕರು ಬೇರೆ ಬೇರೆ ರಾಜ್ಯಗಳಲ್ಲಿ ರೆಸಾರ್ಟ್ ಬುಕ್ ಮಾಡಿ ಕಾಯುತ್ತಿರುವಂತೆ ಇದೆ ಎಂದು ಟೀಕಿಸಿದ್ದಾರೆ. ರಾಜ್ಯದ ಜನರಿಗೆ ಇವರ ಅಗ್ರಿಮೆಂಟ್ ಎಷ್ಟು ವರ್ಷಕ್ಕೆ ಎಂದು ಕಾಂಗ್ರೆಸ್ ಪಕ್ಷ ಹಾಗು ಸಿದ್ದರಾಮಯ್ಯನವರು ಸ್ಪಷ್ಟಪಡಿಸಲಿ, ಒಂದು ವರ್ಷವೋ, ಎರಡೋ ! ನಂತರ ಯಾರು? ಈ ಮಂತ್ರಿ ಮಂಡಲ ಒಂದು ವರ್ಷಕ್ಕೋ , ಎರಡೋ ಅಥವಾ ಮೂರೋ! ಈ ಸರ್ಕಾರ ಒಂದು ವರ್ಷಕ್ಕೋ , ಎರಡೂ ಅಥವಾ ಮೂರೋ ಎಂದು ಕುಹುಕವಾಡಿದ್ದಾರೆ.
ಮಸೂದೆಗೆ ಅಂಗೀಕಾರ ನೀಡದ ರಾಜ್ಯಪಾಲರ ವಿರುದ್ಧ ಸುಪ್ರೀಂಗೆ ದೂರು
ಕಾಂಗ್ರೆಸ್ ಕಚೇರಿಯಲ್ಲಿ 3 ಗಂಟೆ ನಡೆದ ರಾಜಿಸಂಧಾನ ವಿಫಲವಾಗಿರುವುದರ ಹಿಂದೆ ಯಾರು ಕೊಟ್ಟಿರುವ ಉಡುಗೊರೆಗಳು ಕಾರಣ ಎಂದು ಕಾಂಗ್ರೆಸ್ ಕಚೇರಿಯ ಗೋಡೆಗಳೂ ಕೂಗುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣೆಯ ಸಂಧರ್ಭದಲ್ಲಿ ಪಿಎಸ್‍ಐ ಸ್ಕ್ಯಾಮ್ ಬಗ್ಗೆ ಬಾಯಿ ಬಡಿದುಕೊಂಡಿದ್ದ ಕಾಂಗ್ರೆಸ್ ನಾಯಕರು, ಈಗ ಅವರ ತನಿಖೆ ಎಲ್ಲಿಗೆ ಬಂದಿದೆ ಎಂದು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯನವರು ಬೇಷರತ್ ಕ್ಷಮೆಯಾಚಿಸಬೇಕು. ಎಷ್ಟು ಜನರನ್ನು ಬಂಧಿಸಲಾಗಿದೆ? ಇವರ ತನಿಖೆಯಿಂದ ಯಾರ ಹೆಸರು ಈ ಹಗರಣದಲ್ಲಿ ಬೆಳಕಿಗೆ ಬಂದಿದೆ? ಇವೆಲ್ಲವನ್ನೂ ಬಹಿರಂಗಪಡಿಸಲಿ. ದಿನಕ್ಕೊಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ನಾಯಕರು ಈಗ ಎಲ್ಲಿ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್‍ನಲ್ಲಿ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ರಾಜ್ಯದ 200ಕ್ಕೂ ಅಧಿಕ ತಾಲ್ಲೂಕುಗಳು ಬರದ ಬೇಗೆಯಲ್ಲಿ ನಲುಗುತ್ತಿದೆ, ಬರ ಪರಿಹಾರ ಕೊಡಿ ಅಂದರೆ ಸರಕಾರದಲ್ಲಿ ಹಣ ಇಲ್ಲ. ರಾಜ್ಯ ವಿದ್ಯುಚ್ಛಕ್ತಿ ಕೊರತೆಯಿಂದ ನರಳುತ್ತಿದೆ , ವಿದ್ಯುತ್ ಕೊಂಡುಕೊಳ್ಳಲು ಸರಕಾರದಲ್ಲಿ ಹಣ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರೆಸಿ ಎಂದರೆ, ಅಭಿವೃದ್ಧಿ ಕಾಮಗಾರಿಗೆ ಸರಕಾರದಲ್ಲಿ ಹಣ ಇಲ್ಲ. ಅಂಗನವಾಡಿ ಮಕ್ಕಳಿಗೆ ನೀಡುತ್ತಿದ್ದ ಹಾಲು ಮೊಟ್ಟೆ ಕಡಿತ, ಯಾಕೆಂದರೆ ಮೊಟ್ಟೆ ನೀಡಲು ಸರಕಾರದಲ್ಲಿ ಹಣವಿಲ್ಲ ಎಂದು ಕಿಡಿಕಾರಿದ್ದಾರೆ. ಹೇಳುವುದಕ್ಕೆ ಸಮಾಜವಾದಿ, ಆದರೆ ಸ್ವ – ಮಜಾವಾದಿ !! ಎಂದು ಲೇವಡಿ ಮಾಡಿದ್ದಾರೆ.