ಬೆಂಗಳೂರು,ನ.5- ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್‍ನ ಒಬ್ಬ ಶಾಸಕನನ್ನೂ ಸೆಳೆಯಲು ಬಿಜೆಪಿಯವರು ಯತ್ನಿಸಿದರೆ ಬಿಜೆಪಿ-ಜೆಡಿಎಸ್‍ನಿಂದ 25 ಶಾಸಕರು ಕಾಂಗ್ರೆಸ್‍ಗೆ ಬರಲು ಸಿದ್ದರಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೂ ಬರ ಇದೆ. ರಾಜ್ಯ ಬಿಜೆಪಿಯಲ್ಲೂ ನಾಯಕತ್ವದ ಬರ ಇದೆ ಎಂದು ಲೇವಡಿ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ನಡೆದು ಆರು ತಿಂಗಳಾಗಿದೆ. ಬಜೆಟ್ ಅವೇಶನ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಮುಗಿದಿವೆ. ಆದರೆ ಈವರೆಗೂ ವಿಧಾನಸಭೆ-ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕರ ಆಯ್ಕೆಯಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರನ್ನೇ ನೇಮಿಸಲಾಗಿಲ್ಲ. ಹೈಕಮಾಂಡ್ ನಾಯಕರು ರಾಜ್ಯದ ಬಿಜೆಪಿಗರನ್ನು ಹತ್ತಿರಕ್ಕೂ ಸೇರಿಸುತ್ತಿಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿಯಲ್ಲಿ ನಾಯಕತ್ವದ ದಾರಿದ್ರ್ಯ ಇದೆ ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲು ಹೇಳಲಾಗುತ್ತಿದೆ. ಬಿಜೆಪಿಯ ಬಸವರಾಜ ಬೊಮ್ಮಾಯಿ, ಅಶ್ವಥ್ ನಾರಾಯಣ, ಬಸನಗೌಡ ಪಾಟೀಲ್ ಯತ್ನಾಳ್, ವಿ.ಸುನೀಲ್ ಕುಮಾರ್ ಸೇರಿದಂತೆ ಎಲ್ಲರೂ ಅಸಮರ್ಥರೇ.ವಿರೋಧ ಪಕ್ಷದ ನಾಯಕನಾಗಲು ಇವರ್ಯಾರು ಲಾಯಕ್ಕಿಲ್ಲವೇ ಎಂದು ಪ್ರಶ್ನಿಸಿದರು.
1 ಶತಕೋಟಿ ಡಾಲರ್‌ಗಿಂತ ಹೆಚ್ಚು ಆದಾಯ ಕಳೆದುಕೊಂಡ ಅಫ್ಘಾನಿಸ್ತಾನ
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದಾದರೆ ಜೆಡಿಎಸ್‍ನ 19 ಶಾಸಕರು ಬೇಷರತ್ ಬೆಂಬಲ ನೀಡಲಿದ್ದಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ನಾಟಕೀಯವಾಗಿದೆ. ಅವರ ಹೇಳಿಕೆಗೆ ಅವರೇ ಸ್ಪಷ್ಟನೆ ನೀಡಬೇಕು. ನಮ್ಮಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವ ಅವರು ಯಶಸ್ವಿಯಾಗುವುದಿಲ್ಲ ಎಂದರು.
ಕಾಂಗ್ರೆಸ್‍ನ 50 ಶಾಸಕರು ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಶಾಸಕ ಮುರುಗೇಶ್ ನಿರಾಣಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ನಿರಾಣಿ ಸೋತು ಸುಣ್ಣವಾಗಿದ್ದಾರೆ. ಈಗ ಅವರು ಶಾಸಕರೂ ಕೂಡ ಅಲ್ಲ. ನಮ್ಮ ಶಾಸಕರ ಬಗ್ಗೆ ಅವರಿಗೇನು ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಮೊದಲು ಅವರ ಮನೆಯನ್ನು ನೋಡಿಕೊಳ್ಳಲಿ. ನಮ್ಮ ಪಕ್ಷದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ನಿಲ್ಲಿಸಲಿ. ಕಾಂಗ್ರೆಸ್‍ನ ಒಬ್ಬ ಶಾಸಕರನ್ನು ಸೆಳೆಯಲು ಯತ್ನಿಸಿದರೆ, ನಮ್ಮ ಕಡೆಗೆ ಅವರಿಂದ ಐದಾರು ಮಂದಿ ಬರುತ್ತಾರೆ. ಈಗಾಗಲೇ ಜೆಡಿಎಸ್-ಬಿಜೆಪಿಯ 25 ಶಾಸಕರು ಕಾಂಗ್ರೆಸ್‍ಗೆ ಬರಲು ತಯಾರಿರುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‍ನ 60 ಮಂದಿ ಶಾಸಕರನ್ನು ಸೆಳೆಯುವುದು ಸರಳವಲ್ಲ,ಅಸಾಧ್ಯ ಎಂದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 20 ಕ್ಷೇತ್ರಗಳನ್ನು ಗೆಲ್ಲಬೇಕಿದೆ ಎಂದು ಹೈಕಮಾಂಡ್ ನಮಗೆ ಗುರಿ ನಿಗದಿ ಮಾಡಿದೆ. ಕನಿಷ್ಟ 18ರಿಂದ 20 ಶಾಸಕರನ್ನು ಗೆಲ್ಲಲು ನಾವು ಕೂಡ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಸಚಿವರ ನೇತೃತ್ವದ ವೀಕ್ಷಕರ ಸಮಿತಿಗಳು ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುತ್ತಿವೆ ಎಂದು ಹೇಳಿದರು.
ಬಿಜೆಪಿಯವರು ಬರ ಅಧ್ಯಯನ ಮಾಡುವ ಬದಲು ದೆಹಲಿಗೆ ಹೋಗಿ ಪ್ರಧಾನಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನ ಮಾಡಲಿ. ಕೇಂದ್ರ ಸರ್ಕಾರ ಎನ್‍ಡಿಆರ್‍ಎಫ್‍ನಡಿ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಉದಾಹರಣೆಗೆ ವಿಜಯಪುರ ಜಿಲ್ಲೆಯಲ್ಲಿ 7800 ಕೋಟಿ ರೂ. ಬೆಳೆ ನಷ್ಟವಾಗಿದೆ. ಕೇಂದ್ರ ನೀಡುವ ಪರಿಹಾರ 480ರಿಂದ 500 ಕೋಟಿ ರೂ. ಇದು ಯಾವುದಕ್ಕೂ ಸಾಲುವುದಿಲ್ಲ.
ಕನಿಷ್ಟ ಅರ್ಧದಷ್ಟಾದರೂ ಪರಿಹಾರ ಕೊಡಬೇಕು. ಎನ್‍ಡಿಆರ್‍ಎಫ್‍ನ ನಿಯಮಾವಳಿಗಳನ್ನು ಪರಿಷ್ಕರಣೆ ಮಾಡುವಂತೆ ಮುಖ್ಯಮಂತ್ರಿಯವರ ಮೂರು ತಿಂಗಳಿಂದಲೂ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ರಾಜ್ಯ ಬಿಜೆಪಿಗರು ಮೊದಲು ಆ ಕಡೆ ಗಮನಹರಿಸಲಿ ಎಂದು ಹೇಳಿದರು.