Thursday, April 16, 2026
Homeರಾಜ್ಯ400 ಕೋಟಿ ದರೋಡೆ ಪ್ರಕರಣ : ದರೋಡೆಕೋರರ ಸುಳಿವಿಲ್ಲ

400 ಕೋಟಿ ದರೋಡೆ ಪ್ರಕರಣ : ದರೋಡೆಕೋರರ ಸುಳಿವಿಲ್ಲ

400 crore robbery case: No clue about the robbers even after 20 days

ಬೆಂಗಳೂರು,ಜ.29- ಕರ್ನಾಟಕ ಮತ್ತು ಗೋವಾ ಗಡಿಯ ಚೋರ್ಲಾ ಘಾಟ್‌ ಬಳಿ ನಡೆದಿರುವ 400 ಕೋಟಿ ರೂ. ದರೋಡೆ ಪ್ರಕರಣ ದಾಖಲಾಗಿ 20 ದಿನಗಳು ಕಳೆದರೂ ಈವರೆಗೂ ದರೋಡೆಕೋರರ ಬಗ್ಗೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ದೂರುದಾರರಾದ ಸಂದೀಪ್‌ ಪಾಟೀಲ್‌ ಅವರು ದರೋಡೆ ಬಗ್ಗೆ ಖಾನಾಪುರ ಅಥವಾ ಬೆಳಗಾವಿಯಲ್ಲಿ ಹೊಸದಾಗಿ ದೂರು ದಾಖಲಿಸಲಿದ್ದಾರೆಂದು ತಿಳಿದು ಬಂದಿದೆ. ಎರಡು ಕಂಟೈನರ್‌ಗಳಲ್ಲಿ ಸಾಗಿಸಲಾಗುತ್ತಿದ್ದ 400 ಕೋಟಿ ಹಣ ಗಡಿಭಾಗದಲ್ಲಿ ದರೋಡೆ ಯಾಗಿರುವ ಬಗ್ಗೆ ನಾಸಿಕ್‌ ಪೊಲೀಸ್‌‍ ಠಾಣೆಗೆ ಸಂದೀಪ್‌ ಪಾಟೀಲ್‌ ಅವರು ದೂರು ನೀಡಿದ್ದರು.

ಈ ಬೃಹತ್‌ ಮೊತ್ತದ ಹಣ ದರೋಡೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ತನಿಖೆಗಾಗಿ ಎಸ್‌‍ಐಟಿ ರಚಿಸಿದೆ.ಎಸ್‌‍ಐಟಿ ಕಾರ್ಯಾಚರಣೆ ಕೈಗೊಂಡು ಈ ಪ್ರಕರಣದಲ್ಲಿ ಈಗಾಗಲೇ ಆರು ಮಂದಿಯನ್ನು ಬಂಧಿಸಿದೆ. ಇಬ್ಬರು ಕಂಟೈನರ್‌ ಚಾಲಕರನ್ನು ವಿಚಾರಣೆ ನಡೆಸಿದರಾದರೂ ಇದುವರೆಗೂ ಹಣದ ಬಗ್ಗೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ. ಹಾಗಾಗಿ ಎಸ್‌‍ಐಟಿ ಕಾರ್ಯವೈಖರಿ ಬಗ್ಗೆ ಸಂದೀಪ್‌ಪಾಟೀಲ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ಹೊಸದಾಗಿ ಬೆಳಗಾವಿಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಗೋವಾದಿಂದ ಮಹಾರಾಷ್ಟ್ರ ಮಾರ್ಗವಾಗಿ ಎರಡು ಕಂಟೈನರ್‌ಗಳಲ್ಲಿ 400 ಕೋಟಿ ಹಣವನ್ನು ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಗಡಿ ಭಾಗವಾದ ಚೋರ್ಲಾ ಘಾಟ್‌ ಬಳಿ ಈ ಹಣ ದರೋಡೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ.

ಇಷ್ಟೊಂದು ಬೃಹತ್‌ ಹಣ ಯಾರಿಗೆ ಸೇರಿದ್ದು ಎಂಬುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಹಣವನ್ನು ಯಾರು ದರೋಡೆ ಮಾಡಿ ಎಲ್ಲಿಗೆ ಸಾಗಿಸಿದ್ದಾರೆ ? ಹಣವಿದ್ದ ಕಂಟೈನರ್‌ಗಳು ಸಹ ಇನ್ನೂ ಪತ್ತೆಯಾಗಿಲ್ಲ. ಒಟ್ಟಾರೆ ಈ ದರೋಡೆ ನಿಗೂಢವಾಗಿದೆ.

RELATED ARTICLES

Latest News