Saturday, March 1, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಬಳ್ಳಾಪುರ | Chikkaballapurಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿಜ್ವರದ ಅಬ್ಬರ, ಆತಂಕಕ್ಕೊಳಗಾಗದಂತೆ ಜಿಲ್ಲಾಧಿಕಾರಿ ಮನವಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿಜ್ವರದ ಅಬ್ಬರ, ಆತಂಕಕ್ಕೊಳಗಾಗದಂತೆ ಜಿಲ್ಲಾಧಿಕಾರಿ ಮನವಿ

Bird flu outbreak in Chikkaballapur district

ಚಿಕ್ಕಬಳ್ಳಾಪುರ,ಮಾ.1 – ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರವನ್ನು ಹತೋಟಿಗೆ ತರಲು ತಾಲೂಕಿನ ವರದಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಿಯಂತ್ರಣ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಜನರು ಹೆಚ್ಚಿನ ಆತಂಕಕ್ಕೆ ಒಳಗಾಗದೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮನವಿ ಮಾಡಿದರು.

ಹಕ್ಕಿ ಜ್ವರ ನಿಯಂತ್ರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ಸೋಂಕು ನಿಯಂತ್ರಿಸುವ ಮೂಲಕ ರೋಗ ಬೇರೆಡೆಗೆ ಹರಡದಂತೆ ಹಲವು ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ, ಈಗಾಗಲೇ ವರದಹಳ್ಳಿಯಲ್ಲಿ ಸಾವನ್ನಪಿದ ಕೋಳಿಗಳಲ್ಲಿ ಹಕ್ಕಿಜ್ವರದ ಸೋಂಕು ಪತ್ತೆಯಾಗಿ ದೃಢಪಟ್ಟಿರುವ ಕಾರಣ ಈ ಗ್ರಾಮವನ್ನು ಕೇಂದ್ರವಾಗಿಸಿಕೊಂಡು ಸುತ್ತಲೂ 10 ಕಿಮೀ ವ್ಯಾಪ್ತಿಯಲ್ಲಿ ಕೋಳಿ ಸಾಗಾಣಿಕೆ ಮೇಲೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ಹೊರಗಡೆಯಿಂದ ವರದಹಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ಕೋಳಿಗಳನ್ನು ತರದಂತೆ ನಾಕಾಬಂದಿ ಹಾಕಲಾಗಿದೆ.

ವರದಹಳ್ಳಿಯಲ್ಲಿನ ಕೋಳಿಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದ್ದು, ರೋಗ ನಿಯಂತ್ರಣದ ಮುಂಜಾಗ್ರತಾ ಕ್ರಮದ ಭಾಗವಾಗಿ ಅವುಗಳನ್ನೆಲ್ಲ ಸರ್ಕಾರದ ಮಾರ್ಗಸೂಚಿಯಂತೆ ಸಾಮೂಹಿಕವಾಗಿ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಗ್ರಾಮದಲ್ಲಿನ ಕೋಳಿಗಳನ್ನು ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಇದುವರೆಗೆ ಗ್ರಾಮದ ಜನರಲ್ಲಿ ಯಾವುದೇ ಕೆಮ್ಮು,ಶೀತ ನೆಗಡಿ.ಜ್ವರದಂತಹ ಪ್ರಕರಣಗಳು ಕಂಡುಬಂದಿಲ್ಲ. ಆದರೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಪ್ರತಿ ಕುಟುಂಬದ ಆರೋಗ್ಯದ ಮೇಲೂ ನಿಗಾ ಇಡಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಮಾತನಾಡಿ, ಹಕ್ಕಿಜ್ವರವು H5NI ವೈರಸ್‌ನಿಂದ ಹರಡುವ ರೋಗವಾಗಿದ್ದು, ಇದು ಟರ್ಕಿ, ಕೋಳಿ, ಗಿನಿ ಕೋಳಿ, ಬಾತುಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಬರುವ ಸಾಂಕ್ರಾಮಿಕ ಖಾಯಿಲೆಯಾಗಿದೆ. ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಕೆಲವೊಮ್ಮೆ ರೋಗಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ರೋಗ ಪೀಡಿತ ಕೋಳಿ ಅಥವಾ ಹಕ್ಕಿಯ ಮಾಂಸವನ್ನು ಸರಿಯಾಗಿ ಬೇಯಿಸದೆ ತಿನ್ನುವುದರಿಂದ ಹಾಗೂ ಸೋಂಕಿರುವ ಹಸಿ ಮೊಟ್ಟೆಗಳನ್ನು ಸೇವಿಸುವುದರಿಂದ ಹಾಗೂ ಕೋಳಿಗಳ ಹಿಕ್ಕೆಗಳು, ತ್ಯಾಜ್ಯಗಳು ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಾಗ ಈ ಖಾಯಿಲೆ ಹರಡುತ್ತದೆ. ಮತ್ತು ಕೆಲವು ಸಂದರ್ಭದಲ್ಲಿ ಗಾಳಿಯ ಮೂಲಕವು ಮನುಷ್ಯರಿಗೆ ಹರಡುವ ಸಾಧ್ಯತೆ ಇರುತ್ತದೆ.

ರೋಗ ಲಕ್ಷಣಗಳು: ಈ ರೋಗ ಪೀಡಿತರಲ್ಲಿ ಜ್ವರ, ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಮತ್ತು ಭೇದಿಯೂ ಆಗಬಹುದು ಉಸಿರಾಟದಲ್ಲಿ ತೊಂದರೆ ಈ ಲಕ್ಷಣಗಳು ಕಾಣಿಸಿದ ಕೂಡಲೇ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ತಿಳಿಸಿದರು.

ತೆಗೆದುಕೊಳ್ಳಬೇಕಾದ ಮುನ್ನೆಚರಿಕೆ ಕ್ರಮಗಳು:
ಶಂಕಿತ ಹಕ್ಕಿಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಹಾಗೂ ಬಾತುಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸುವುದು. ಬೇರೆಯವರ ಮನೆಗೆ ಭೇಟಿ ನೀಡಿದಾಗ
ಅಲ್ಲಿರುವ ಶಂಕಿತ ಹಕ್ಕಿಜ್ವರ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಸ್ಪರ್ಶಿಸಬಾರದು. ಹಕ್ಕಿಜ್ವರ ಶಂಕಿತ ಅಥವಾ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು, ಹಕ್ಕಿಜ್ವರ ಹರಡಿರುವ ಫಾರಂನ ವಾತಾವರಣದ ಸಂಪರ್ಕಕ್ಕೆ ಬಂದಲ್ಲಿ ತಕ್ಷಣ ತಮ್ಮ ಕೈ-ಕಾಲು ಮತ್ತು ಮುಖವನ್ನು ತೊಳೆದುಕೊಂಡು ಬಟ್ಟೆಯನ್ನು ಬದಲಾಯಿಸಿಕೊಳ್ಳುವುದು ಮತ್ತು ಮುಂದಿನ 4 ದಿನಗಳವರೆಗೆ ತಮ್ಮ ದೇಹದ ಉಷ್ಣಾಂಶದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುವುದು. ಒಂದು ವೇಳೆದ ಜ್ವರದ ಲಕ್ಷಣಗಳು ಕಾಣಿಸಿಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸುವುದು. ಸೋಂಕಿರುವ ಪ್ರದೇಶದಲ್ಲಿ ಯಾವುದೇ ವಸ್ತುವನ್ನು ಮುಟ್ಟಿದಾಗ ಯಾವಾಗಲೂ ಕೈಗಳನ್ನು ಸೋಪಿನಿಂದ ತೊಳೆಯಬೇಕು ಎಂದು ಸಲಹೆ ನೀಡಿದರು.

ಸರಿಯಾಗಿ ಬೇಯಿಸಿದ ಕೋಳಿ ಮಾಂಸದ ಸೇವನೆಯಿಂದ ಹಕ್ಕಿಜ್ವರ ಬರುವುದಿಲ್ಲ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್‌ ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವಷ್ಟೇ ಸೇವಿಸಬೇಕು. ಅಡುಗೆಗಾಗಿ ಕೋಳಿ ಮಾಂಸವನ್ನು ಸಿದ್ಧಪಡಿಸಿದ ನಂತರ ಕೈಗಳನ್ನು ನಂಜುನಾಶಕದಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

ಸೋಂಕಿತ ಹಸಿ ಮೊಟ್ಟೆಯನ್ನು ಸೇವಿಸಬಾರದು. ಹಕ್ಕಿಜ್ವರವು ಮುನ್ನೆಚರಿಕೆಯಿಂದ ತಡೆಯಬಲ್ಲ ಖಾಯಿಲೆ ಆದ್ದರಿಂದ ಖಾಯಿಲೆಯ ಲಕ್ಷಣಗಳು ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಪಶು ವೈದ್ಯಕೀಯ ಆಸ್ಪತ್ರೆಗಳಿಗೆ ಮಾಹಿತಿಯನ್ನು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆಮಾಡಿ ಎಂದು ತಿಳಿಸಿದರು.

RELATED ARTICLES

Latest News