ಬೆಂಗಳೂರು, ಮಾ.14- ಮೈಸೂರು ಕಾಗದದ ಕಾರ್ಖಾನೆ ತೀವ್ರತರದ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು, ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲವೆಂದು ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಎಂ.ಬಿ. ಪಾಟೀಲ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾರ್ಖಾನೆಯ ಕಾರ್ಯಚಟುವಟಿಕೆಗಳನ್ನು ಖಾಸಗಿಯ ವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ಮಾನಿಸಲಾಗಿದೆ.
2015-16ರಿಂದ ಕಾರ್ಖಾನೆಯ ಎಲ್ಲಾ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. 2024ರ ಜೂನ್ 30ರ ಅಂತ್ಯಕ್ಕೆ 1541.54 ಕೋಟಿ ರೂ. ನಷ್ಟು ನಷ್ಟದಲ್ಲಿದೆ ಎಂದು ಹೇಳಿದರು.
ಮೈಸೂರು ಕಾಗದ ಕಾರ್ಖಾನೆಗೆ ಸಂಬಂಧಿಸಿದಂತೆ ಎಫ್‌ಆರ್‌ಕ್ಯೂಗೆ ಯಾವುದೇ ಅರ್ಜಿ ಸ್ವೀಕೃತವಾಗಿಲ್ಲ. ಇ-ಟೆಂಟರ್ ಕರೆದಾಗಲೂ ಯಾವುದೇ ಬಿಡ್‌ಗಳು ಸ್ವೀಕೃತವಾಗಿಲ್ಲ.
2023ರ ನ. 17ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅರಣ್ಯ ಇಲಾಖೆಯ ತಜ್ಞರ ಸಮಿತಿಯು ನೀಲಗಿರಿ ಬೆಳೆಯಲು ಕಾರ್ಖಾನೆಗೆ ಮೀಸಲಾತಿ ನೀಡುವ ಸಂಬಂಧ ಪರಿಶೀಲನೆ ವರದಿ ನೀಡಬೇಕಾಗಿದೆ ಎಂಬ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ವಿದ್ಯುತ್ ಬಿಲ್‌ನ ಅಸಲಿ ಮತ್ತು ಬಡ್ಡಿ ಮೊತ್ತವನ್ನು ಮೆಸ್ಕಾಂ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ರಾಜ್ಯದಲ್ಲಿ ನೀಲಗಿರಿ ಬೆಳೆಯಲು ಕಾರ್ಖಾನೆಗೆ ವಿನಾಯಿತಿ ಬಯಸುತ್ತಾರೆ. ಹೀಗಾಗಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
2021ರ ಅಕ್ಟೋಬರ್ 7ರ ಆದೇಶದ ಪ್ರಕಾರ ಕಾರ್ಖಾನೆಯ ಎಲ್ಲಾ ಉತ್ಪಾದನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಪರಿಹಾರವನ್ನು ಹಾಗೂ ಇತರ ಕಾನೂನು ಬಾಕಿಗಳನ್ನು ಕಂಪೆನಿಯು ಅವರವರ ಬ್ಯಾಂಕ್ ಖಾತೆಗೆ ಪಾವತಿಸುವ ಮೂಲಕ 202 ಉದ್ಯೋಗಿಗಳ ಸೇವೆಯನ್ನು ಕೊನೆಗೊಳಿಸಲಾಗಿದೆ ಎಂದರು.
ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕಾರ್ಮಿಕ ಸಂಘ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದು ನಿಯೋಜನೆ ಹೊಂದದೆ ಉಳಿದಿದ್ದವರಿಗೆ ನಿಗಮ ಮಂಡಳಿಗಳಲ್ಲಿ ನಿಯೋಜನೆ, ವಿಲೀನದ ಆಧಾರದ ಮೇಲೆ ಉದ್ಯೋಗ ನೀಡಬೇಕೆಂದು ಆದೇಶಿಸಲಾಗಿದ್ದು, ಅದರಂತೆ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.