ಬೆಂಗಳೂರು,ಫೆ.2- ಶಾಸಕರಿಗೆ ಲ್ಯಾಪ್‌ಟಾಪ್ ಅಥವಾ ಐಫೋನ್ ನೀಡುವ ಆಲೋಚನೆ ತಮಗಿದೆ. ಅದನ್ನು ಶಾಸಕರು ಮಾತ್ರ ಬಳಕೆ ಮಾಡಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಷರತ್ತು ವಿಧಿಸಿದ್ದಾರೆ. ವಿಧಾನಸಭೆಯ ಕಲಾಪದ ಆರಂಭದಲ್ಲಿ ಬಿಜೆಪಿ ಶಾಸಕ ಪ್ರಭು ಚವ್ವಾಣ್ ಅವರು ಶಾಸಕರಿಗೆ ಲ್ಯಾಪ್‌ಟಾಪ್ ಕೊಡಿ ಎಂದು ಮನವಿ ಮಾಡಿದರು.
ಅದಕ್ಕೆ ಸ್ಪಂದಿಸಿದ ಸಭಾಧ್ಯಕ್ಷರು ತಮಗೆ ಲ್ಯಾಪ್‌ಟಾಪ್ ನೀಡುವ ಆಲೋಚನೆ ಇದೆ. ಆದರೆ ಅದನ್ನು ಶಾಸಕರು ತಾವು ಬಳಸದೆ ಸ್ನೇಹಿತರಿಗೆ, ಹಿತೈಷಿಗಳಿಗೆ, ಬಂಧುಗಳಿಗೆ, ಅಕ್ಕ-ತಮ , ಆಪ್ತ ಸಹಾಯಕರಿಗೆ ನೀಡುವುದಾದರೆ ಪ್ರಯೋಜನವಾಗುವುದಿಲ್ಲ. ಖುದ್ದಾಗಿ ಶಾಸಕರೇ ಬಳಸುವುದಾದರೆ ಕೊಡುತ್ತೇನೆ ಎಂದರು.
ಜೊತೆಗೆ ಲ್ಯಾಪ್‌ಟಾಪ್ ಬಳಕೆ ಮಾಡಲು ಶಾಸಕರಿಗೆ ಮೂರು ದಿನಗಳ ತರಬೇತಿ ನೀಡಲಾಗುವುದು. ಅದರಲ್ಲಿ ಭಾಗವಹಿಸಿದವರಿಗೆ ಮಾತ್ರ ಐಪಾಡ್ ನೀಡುತ್ತೇನೆ ಎಂದು ಸಭಾಧ್ಯಕ್ಷರು ಹೇಳಿದರು. ವಿಧಾನಸಭೆಯ ಕಲಾಪದ ಆರಂಭದಲ್ಲಿ ಸಚಿವರ, ಶಾಸಕರ ಹಾಜರಾತಿ ಕಡಿಮೆ ಇರುವುದು ವಿರೊಧ ಪಕ್ಷಗಳ ಕೆಂಗೆಣ್ಣಿಗೆ ಗುರಿಯಾಯಿತು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಆರಂಭದಲ್ಲೇ ಹಿಂದಿನ ದಿನ ಕಲಾಪಕ್ಕೆ ನಿಗದಿತ ಸಮಯಕ್ಕೆ ಹಾಜರಾದ ಶಾಸಕರ ಹೆಸರುಗಳನ್ನು ಪ್ರಕಟಿಸಿದರು. ಬಳಿಕ ವಿರೋಧ ಪಕ್ಷದ ನಾಯಕ ಅಶೋಕ್, ಸಚಿವರ ಸಾಲಿನಲ್ಲಿ ಯಾರೂ ಇಲ್ಲ. ಆಡಳಿತ ಪಕ್ಷದ ಸದಸ್ಯರ ಸಂಖ್ಯೆಯು ಕಡಿಮೆ ಇದೆ. ಟ್ರೆಜರಿ ಬ್ಯಾಂಕ್ ಸಂಪೂರ್ಣ ಖಾಲಿ ಇದೆ. ರಾಜ್ಯಪಾಲರ ಭಾಷಣದ ಮೇಲೆ ನಾವು ಚರ್ಚೆ ಮಾಡಿದರೂ ಅದನ್ನು ಬರೆದುಕೊಳ್ಳಲು ಯಾರೂ ಇಲ್ಲ ಎಂದು ಆಕ್ಷೇಪಿಸಿದರು.
ಸುರೇಶ್‌ಕುಮಾರ್ ಅವರು ನಮಗೆ ಮಾತನಾಡಲು ಸ್ಪೂರ್ತಿ ಬೇಕಾದರೆ ಅದನ್ನು ಕೇಳಿಸಿಕೊಳ್ಳಲು ಸಚಿವರು, ಶಾಸಕರು ಇರಬೇಕು. ಇಲ್ಲಿ ಯಾರೂ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸಂತೋಷ್ ಲಾಡ್ ಅವರು ಸದನದಲ್ಲಿದ್ದಾರೆ. ಉಳಿದವರು ಬರುತ್ತಾರೆ. ನೀವು ಮಾತನಾಡಿ ಎಂದು ಸಭಾಧ್ಯಕ್ಷರು ಸಲಹೆ ನೀಡಿದರು.
ಅಷ್ಟರಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಸದನದ ಒಳಗೆ ಕಾಲಿಟ್ಟರು. ಆಗ ಅಶೋಕ್ ಅವರು ಪಾಪ ಡಾಕ್ಟ್ರು ಅವರಲ್ಲದೇ ಬೇರೆ ಇನ್ಯಾರಾದರೂ ಗೃಹಸಚಿವರಾಗಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ಕೊಡಿಸುತ್ತಿದ್ದೆವು ಎಂದರು. ಸುಮಾರು ಆರು ಮಂದಿ ಸಚಿವರು ಸದನಕ್ಕೆ ಹಾಜರಾದ ಬಳಿಕ ಅಶೋಕ್ ತಮ ಚರ್ಚೆಯನ್ನು ಆರಂಭಿಸಿದರು.
