ಬೆಂಗಳೂರು,ಫೆ.2-ಬಿಲ್ಡರ್ ಶಿವಕುಮಾರ್ ಮನೆಯಲ್ಲಿ ನಗದು ಸೇರಿದಂತೆ 18 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಕೆಲಸಕ್ಕಿದ್ದ ದಂಪತಿ ನೇಪಾಳಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಒಂದು ತಂಡ ನೇಪಾಳ ಗಡಿ ಭಾಗದಲ್ಲಿ ಶೋಧ ನಡೆಸುತ್ತಿದೆ.
ಆರೋಪಿ ದಂಪತಿಯ ಬಂಧನಕ್ಕಾಗಿ ಈಗಾಗಲೇ ಏಳು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ನೇಪಾಳ ಗಡಿ ಭಾಗದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರೆ, ಮತ್ತೊಂದು ತಂಡ ದೆಹಲಿಯ ರೈಲ್ವೆ ನಿಲ್ದಾಣಗಳಲ್ಲಿ , ಇನ್ನಿತರೆ ತಂಡಗಳು ಬಾಂಬೆ, ಕೊಲ್ಕತ್ತಾ, ಮಹಾರಾಷ್ಟ್ರ ಹಾಗೂ ಇನ್ನಿತರ ಕಡೆಗಳಲ್ಲಿ ಶೋಧ ಕಾರ್ಯಕೈಗೊಂಡಿವೆ ಯಾದರೂ ಇದುವರೆಗೂ ದಂಪತಿ ಸುಳಿವು ಸಿಕ್ಕಿಲ್ಲ.
ಈ ಹಿಂದೆ ನೇಪಾಳ ಮೂಲದ ದಂಪತಿ ಮಹಾರಾಷ್ಟ್ರದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು ಅಲ್ಲಿ ಆಧಾರ್‌ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್‌ಗಳು ಇರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಈ ದಂಪತಿ ತಮ ಹೆಸರನ್ನು ಕಮಲ, ದಿನೇಶ ಹೀಗೆ ಬೇರೆ ಬೇರೆ ಹೆಸರುಗಳನ್ನು ಆಗಾಗ್ಗೆ ಬದಲಿಸಿಕೊಂಡು ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು.
ಮಹಾರಾಷ್ಟ್ರದಲ್ಲಿದ್ದಾಗ ಇದೇ ರೀತಿ ಅಲ್ಲಿಯೂ ಬಿಲ್ಡರ್‌ಹಾಗೂ ಉದ್ಯಮಿ ಮನೆಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ.ಘಟನೆ ಹಿನ್ನಲೆ: ಯಮಲೂರಿನ ನಿವಾಸಿ, ಬಿಲ್ಡರ್ ಶಿವಕುಮಾರ್ ಎಂಬುವವರ ಮನೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೆ ನೇಪಾಳ ಮೂಲದ ದಿನೇಶ್ ಮತ್ತು ಕಮಲ ಎಂಬ ದಂಪತಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.
ಜ.25 ರಂದು ಶಿವಕುಮಾರ್ ಕುಟುಂಬದವರೆಲ್ಲಾ ಹೊರಗೆ ಹೋಗಿದ್ದಾಗ ಇವರ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿ ನೆಲಮಹಡಿ ಹಾಗೂ ಮೊದಲ ಮಹಡಿಯ ಲಾಕರ್ ಮುರಿದು ಒಳ ನುಗ್ಗಿ ವಾರ್ಡ್‌ರೂಬ್‌ನಲ್ಲಿದ್ದ 11.5 ಲಕ್ಷ ನಗದು, 5 ಕೆಜಿ ಬೆಳ್ಳಿ ವಸ್ತುಗಳು ಹಾಗೂ 11 ಕೆಜಿ ಚಿನ್ನ, ವಜ್ರಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಕೆಲ ಸಮಯದ ಬಳಿಕ ಇವರ ಮನೆಯ ಇತರೆ ಕೆಲಸಗಾರರು ಗಮನಿಸಿ ಮನೆಯಲ್ಲಿ ಕಳ್ಳತನವಾಗಿದೆ ಎಂದು ಮಾಲೀಕರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ತಕ್ಷಣ ಶಿವಕುಮಾರ್ ಅವರು ಮನೆಗೆ ವಾಪಸ್ ಆಗಿ ನೋಡಿದಾಗ ಲಾಕರ್‌ಗಳನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಹಣ ಹಾಗೂ ಚಿನ್ನಾಭರಣ ಕಳ್ಳತನವಾಗಿರುವುದು ಕಂಡು ಬಂದಿದೆ.
ಕಳ್ಳತನವಾಗಿರುವ ಆಭರಣಗಳ ಒಟ್ಟು ಮೌಲ್ಯ 18 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
