ಬೆಂಗಳೂರು,ನ.13- ರಾಜ್ಯ ಸರ್ಕಾರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟೆಚ್ಚರದ ಹೊರತಾಗಿಯೂ ನಿನ್ನೆ ಮತ್ತೆ ರಾಸಾಯನಿಕ ಪಟಾಕಿಗಳೇ ಅಬ್ಬರಿಸಿವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅ.17ರಂದು ಸುತ್ತೋಲೆ ಹೊರಡಿಸಿ ಪಟಾಕಿಗಳ ಬಳಕೆ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿತ್ತು.
ಸುಪ್ರೀಂಕೋರ್ಟ್ 2018ರಲ್ಲಿ ನೀಡಿದ್ದ ನಿರ್ದೇಶನಗಳ ಪ್ರಕಾರ ಶಬ್ದ ಹಾಗೂ ವಾಯುಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳನ್ನು ಬಳಸಲು ಅವಕಾಶ ಇಲ್ಲ. ಜೊತೆಗೆ ರಾತ್ರಿ 8ರಿಂದ 10 ಗಂಟೆವರೆಗೂ ಮಾತ್ರ ಹಸಿರು ಪಟಾಕಿಗಳನ್ನು ಸ್ಪೋಟಿಸಲು ಅವಕಾಶ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳು, ಎಸ್ಪಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಕಾರಿಗಳನ್ನೊಳಗೊಂಡ ವಿಶೇಷ ಕಾರ್ಯಪಡೆಗಳನ್ನು ರಚಿಸಿತ್ತು. ಈ ಕಾರ್ಯಪಡೆಗಳು ರಾಜ್ಯಾದ್ಯಂತ ಪರಿಶೀಲನೆ ನಡೆಸಿ ಪರಿಸರಕ್ಕೆ ಹಾನಿ ಮಾಡುವ ಪಟಾಕಿಗಳ ಸಂಗ್ರಹವನ್ನು ತಡೆಯಲು ಯತ್ನಿಸಿದರು.
ದೀಪಾವಳಿ ‘ಗಿಫ್ಟ್’ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ
ಹಸಿರು ಪಟಾಕಿಗಳ ಪತ್ತೆಹಚ್ಚುವಿಕೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಆದರೆ ಈ ಎಲ್ಲ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅಧಿಕಾರಿಗಳ ಕಠಿಣ ನಿಯಮಾವಳಿಗಳು ಎಂದಿನಂತೆ ಜನಸಾಮಾನ್ಯರಿಗೆ ಬರೆ ಎಳೆದಿದೆ. ಸರ್ಕಾರದ ನಿಯಮಗಳನ್ನು ಮುಂದಿಟ್ಟುಕೊಂಡು ಮಾರಾಟಗಾರರು ಪಟಾಕಿಯ ದರಗಳನ್ನು ಏರಿಕೆ ಮಾಡಿಕೊಂಡಿದ್ದಾರೆ. ಹಸಿರು ಪಟಾಕಿಗಳು ದುಬಾರಿ ಯಾಗಿರುವುದರಿಂದ ಮತ್ತು ಅವುಗಳು ದೀಪಾವಳಿಯ ಅಬ್ಬರಕ್ಕೆ ಪೂರಕವಾಗಿ ಇಲ್ಲದಿರುವುದರಿಂದ ಸಾರ್ವಜನಿಕರು ಮತ್ತೆ ರಾಸಾಯನಿಕ ಮಿಶ್ರಿತ ಪಟಾಕಿಗಳ ಮೊರೆ ಹೋಗಿದ್ದಾರೆ.
ನಿನ್ನೆ ತಡರಾತ್ರಿಯವರೆಗೂ ಪಟಾಕಿಗಳ ಅಬ್ಬರಿಸಿವೆ. ವಾಯು ಮಾಲಿನ್ಯ ಉಸಿರುಗಟ್ಟಿಸುವಂತಾಗಿತ್ತು. ಹಸಿರು ಪಟಾಕಿಗಳ ಬಳಕೆ ಕ್ಷೀಣವಾಗಿತ್ತು. ಇಂದು ಮತ್ತು ನಾಳೆ ದೀಪಾವಳಿಯ ಸಂಭ್ರಮ ಬಾಕಿಯಿದ್ದು, ಪಟಾಕಿಗಳ ಅಬ್ಬರ ಖಾಯಂ ಎಂಬಂತಾಗಿದೆ.
ಈ ಹಿಂದೆ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿಗೆ ಬೆಂಕಿ ಬಿದ್ದು ದುರಂತ ಸಂಭವಿಸಿದ್ದರಿಂದಾಗಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ನಿಯಮಾವಳಿಗಳನ್ನು ಬಿಗಿಗೊಳಿಸಿತ್ತು. ಆದರೆ ಅದು ನಿರೀಕ್ಷಿತ ಪರಿಣಾಮ ಬೀರಿಲ್ಲ. ಭಾವನಾತ್ಮಕ ವಿಷಯಗಳಾಗಿರುವುದರಿಂದ ಅಧಿಕಾರಿಗಳು ಕೂಡ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕರು ಪರಿಸರ ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದೆ ದೀಪಾವಳಿಯ ಸಂಭ್ರಮದಲ್ಲಿ ಮುಳುಗಿದ್ದಾರೆ.