Wednesday, December 4, 2024
Homeರಾಜ್ಯಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಚಳಿ ಬಿಡಿಸಲು ಪ್ರತಿಪಕ್ಷ ಸಜ್ಜು

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಚಳಿ ಬಿಡಿಸಲು ಪ್ರತಿಪಕ್ಷ ಸಜ್ಜು

ಬೆಂಗಳೂರು, ನ.13-ಡಿಸೆಂಬರ್‌ನಲ್ಲಿ ನಡೆಯಲಿರುವ ಬೆಳಗಾವಿ ಅಧಿವೇಶನಕ್ಕೆ ಒಂದೆಡೆ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ತಯಾರಾಗುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಹೊರತುಪಡಿಸಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳತ್ತಿಲ್ಲ ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡುತ್ತಿವೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್‌ನಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಧಿವೇಶನದ ಪೂರ್ವ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ. ರಾಜ್ಯದಲ್ಲಿ ತೀವ್ರವಾಗಿರುವ ಬರಪೀಡಿತ ಪ್ರದೇಶಗಳಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪ್ರವಾಸ ಕೈಗೊಂಡಿವೆ.

ಪ್ರವಾಸದ ಸಂದರ್ಭದಲ್ಲಿ ವಾಸ್ತವ ಪರಿಸ್ಥಿತಿಯ ಮಾಹಿತಿಯನ್ನು ಕಲೆ ಹಾಕುತ್ತಿವೆ. ಚಳಿಗಾಲದ ಅಧಿವೇಶನದಲ್ಲಿ ಬರಪರಿಸ್ಥಿತಿ ನಿರ್ವಹಣೆಯನ್ನೇ ಪ್ರಮುಖ ಅಸ್ತ್ರವಾಗಿ ವಿರೋಧ ಪಕ್ಷಗಳು ಬಳಸಲಿವೆ. ಜೆಡಿಎಸ್ ಎನ್‍ಡಿಎ ಮೈತ್ರಿಕೂಟ ಸೇರಿರುವುದರಿಂದ ಬಿಜೆಪಿ ಜತೆಗೂಡಿ ಅಧಿವೇಶನದಲ್ಲಿ ಹೋರಾಟ ನಡೆಸಲಿದೆ. ಬಿಜೆಪಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರು ಬದಲಾಗಿದ್ದಾರೆ. ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ಹಾಲಿ ಶಾಸಕರೇ ಆಗಿದ್ದಾರೆ. ಹೀಗಾಗಿ ಉಭಯ ಪಕ್ಷಗಳು ಜಂಟಿಯಾಗಿ ಸರ್ಕಾರದ ವಿರುದ್ಧ ಸದನದಲ್ಲಿ ವಾಗ್ದಾಳಿ ನಡೆಸುವ ಸಾಧ್ಯತೆಯೇ ಹೆಚ್ಚಾಗಿದೆ.

ಮಳೆ ಕೊರತೆಯಿಂದ ತೀವ್ರ ಸ್ವರೂಪದ ಬರವಿದ್ದರೂ ಬೆಳೆಹಾನಿಯಾದ ರೈತರಿಗೆ ಬೆಳೆ ಪರಿಹಾರ ನೀಡಿಲ್ಲ. ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಸಿ ರಾಜ್ಯ ಸರ್ಕಾರ ಕಾಯುತ್ತಾ ಕುಳಿತಿದೆ ಎಂದು ಈಗಾಗಲೇ ಆರೋಪಿಸಿವೆ. ಸಮರ್ಪಕ ಕುಡಿಯುವ ನೀರು ಪೂರೈಕೆ, ಜನರು ಗುಳೆ ಹೋಗದಂತೆ ಉದ್ಯೋಗ, ಬೆಳೆ ಹಾನಿಗೆ ಪರಿಹಾರ, ಜಾನುವಾರುಗಳಿಗೆ ಅಗತ್ಯ ಮೇವು ಒದಗಿಸಬೇಕು ಎಂಬ ಆಗ್ರಹವನ್ನು ಪ್ರತಿಪಕ್ಷಗಳು ಮಾಡುತ್ತಿವೆ.

ವಿದ್ಯುತ್ ಅಭಾವದಿಂದ ರೈತರು ಹಾಗೂ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆದ್ಯತೆ ಮೇಲೆ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗುತ್ತಿವೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿ ಭರವಸೆಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಗ್ಯಾರಂಟಿ ಅನುಷ್ಠಾನದಲ್ಲಿನ ಲೋಪ-ದೋಷಗಳನ್ನು ಮುಂದಿಟ್ಟುಕೊಂಡು ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ.

ದೀಪಾವಳಿ ‘ಗಿಫ್ಟ್’ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಬೆಳೆ ಪರಿಹಾರ, ವಿದ್ಯುತ್ ಸಮಸ್ಯೆ, ಕುಡಿಯುವ ನೀರು, ಬೆಲೆ ಏರಿಕೆ ಸೇರಿದಂತೆ ನಾಡಿನ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪ್ರತಪಕ್ಷಗಳು ಪ್ರಮುಖ ಅಸ್ತ್ರವಾಗಿ ಬಳಸಲು ತಯಾರಿ ನಡೆಸುತ್ತಿವೆ. ಸಚಿವರು ಕೂಡ ಈಗಾಗಲೇ ಬರಪೀಡ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ವಾಸ್ತವ ಸ್ಥಿತಿಗತಿಯ ಮಾಹಿತಿ ಪಡೆದಿದ್ದಾರೆ.

ಬೀಕರ ಬರಗಾಲವಿದ್ದರೂ ಕೇಂದ್ರ ಸರ್ಕಾರ ನೆರವಿಗೆ ಬಾರದಿರುವ ವಿಚಾರವನ್ನೇ ಪ್ರತಿಪಕ್ಷಗಳ ಅಸ್ತ್ರಕ್ಕೆ ಗುರಾಣಿಯಾಗಿ ಬಳಸಲು ಆಡಳಿತ ಪಕ್ಷ ಸಜ್ಜಾಗಿದೆ. ಅಲ್ಲದೆ, ಗ್ಯಾರಂಟಿ ಅನುಷ್ಠಾನ ಹಾಗೂ ಬರದ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸದನದ ಮುಂದಿಟ್ಟು ಬಲವಾಗಿ ಸಮರ್ಥಿಸಿಕೊಳ್ಳಲು ಸರ್ಕಾರವೂ ಕೂಡ ಸಿದ್ಧತೆ ನಡೆಸಿದೆ. ಮುಂಬರುವ ಲೋಕಸಭಾ ಚುನಾವಣೆ ತಯಾರಿಯ ಗುಂಗಿನಲ್ಲಿ ಮೂರು ಪಕ್ಷಗಳಿವೆ. ಹೀಗಾಗಿ ಅವೇಶನದ ವೇಳೆ ರಾಜಕೀಯ ಚಟುವಟಿಕೆಗಳು ಹೆಚ್ಚಾಗಲಿವೆ ಎಂಬ ಅಭಿಪ್ರಾಯವಿದೆ.

ಒಟ್ಟಾರೆ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆಯುವ ರಾಜ್ಯ ವಿಧಾನಮಂಡಲದ ಅಧಿವೇಶನವುಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಆರೋಪ- ಪ್ರತ್ಯಾರೋಪಗಳಿಗೆ ವೇದಿಕೆಯಾಗಲಿದೆ.

RELATED ARTICLES

Latest News