ಹುಬ್ಬಳ್ಳಿ,ಫೆ.8- ದೇಶದ ವಿವಿಧೆಡೆ ನಡೆದಿರುವ ಹಲವು ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ವರ್ಗಾವಣೆಗೆ ಇಲ್ಲಿನ ಕೇಶ್ವಾಪುರದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಆಟೋ ಚಾಲಕನ ಬಾಂಕ್ ಖಾತೆಹಲವಾರು ಬಾರಿ ಬಳಕೆಯಾಗಿರುವುದು ಬಯಲಾಗಿದೆ.
ಈ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡ ಆಟೋ ಚಾಲಕನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ನಗರದ ಕೇಶ್ವಾಪುರದಲ್ಲಿನ ಬ್ಯಾಂಕ್ ಆಫ್ ಬರೋಡಾದ ಖಾತೆಯಿಂದ ದೇಶದ ವಿವಿಧ ಬ್ಯಾಂಕ್‌ಗಳ ಖಾತೆಗಳು ಮತ್ತು ಹಲವು ಬ್ಯಾಂಕ್‌ಗಳಿಂದ ಈ ಖಾತೆಗೆ ಹಣ ವರ್ಗಾವಣೆಯಾಗಿದೆ. ಎರಡು ವರ್ಷಗಳಿಂದ ಈ ಖಾತೆ ಸಕ್ರಿಯವಾಗಿತ್ತು. ಸದ್ಯ ಸ್ಥಗಿತಗೊಳಿಸಲಾಗಿದೆ.
ಖಾತೆಯನ್ನು ಹೊಂದಿರುವ ಇಲ್ಲಿನ ಗೋಪನಕೊಪ್ಪದ ನಿವಾಸಿ ಇರ್ಫಾನ್ ಎಂಬವನನ್ನು ಸೈಬರ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಇದಲ್ಲದೆ ಈಗ ತನಿಖೆ ಚುರುಕು ಗೊಳಿಸಿರುವ ತನಿಖಾ ತಂಡ ಇರ್ಫಾನ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಖಾತೆ ತೆರೆದಿರುವ ಆರಂಭದಿಂದ ಕೊನೆ ವಹಿವಾಟಿನವರೆಗೆ ನಡೆದಿರುವ ಹಣಕಾಸಿನ ವ್ಯವಹಾರದ ಸಂಪೂರ್ಣ ವಿವರವನ್ನು ನೀಡುವಂತೆ ಪೊಲೀಸರು ಬ್ಯಾಂಕ್ ಶಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು, ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದ ಪ್ರಕರಣಗಳಲ್ಲಿ ಹಲವಾರು ಮಂದಿ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ಈ ಖಾತೆಗೇ ಹಣ ವರ್ಗಾವಣೆ ಆಗಿರುವ ಬಗ್ಗೆ ಡಿಜಿಟಲ್ ಸಾಕ್ಷ್ಯಸಹಿತ ದೂರು ನೀಡಿದ್ದಾರೆ.
ಕುಕ್ಕಿಂಗ್ ವಿತ್ ಕೇಟರಿಂಗ್ ಹೆಸರಿನಲ್ಲಿ ಬ್ಯಾಂಕ್ ಆಫ್ ಬರೋಡಾದ ಶಾಖೆಯಲ್ಲಿ ಇರ್ಫಾನ್ ಈ ಖಾತೆ ತೆರೆದಿದ್ದರು. ಖಾತೆ ಮೂಲಕ 50ಕ್ಕೂ ಹೆಚ್ಚು ಬಾರಿ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ, ವಿವಿಧ ಬ್ಯಾಂಕ್‌ಗಳ ಖಾತೆಯಿಂದ ಅದಕ್ಕೆ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿದೆ. ಬೆಂಗಳೂರಿನಿಂದ ಅಲ್ಲದೇ ದೆಹಲಿ, ಮುಂಬೈ, ಒಡಿಶಾ ಸೇರಿ ಇತರ ಹೊರ ರಾಜ್ಯಗಳಿಂದ ಹತ್ತಾರು ಪ್ರಕರಣಗಳು ಈ ಖಾತೆ ವಿರುದ್ಧ ದಾಖಲಾಗಿವೆ. ಈ ನಿಟ್ಟಿನಲ್ಲಿ ತನಿಖಾ ತಂಡದವರು ಪರಿಶೀಲನೆ ನಡೆಸಿ ದಾಖಲೆಗಳನ್ನು ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
