ಜೋಹಾನ್ಸ್ ಬರ್ಗ್,ಜೂ.12- ನಕಲಿ ಪ್ರಯಾಣ ದಾಖಲೆಗಳು ಮತ್ತು ವೀಸಾಗಳನ್ನು ಹೊಂದಿದ್ದು, ದಕ್ಷಿಣ ಆಫ್ರಿಕಾಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ಒಂಬತ್ತು ಬಾಂಗ್ಲಾ ದೇಶೀಗರನ್ನು ಗಡಿ ಅಧಿಕಾರಿಗಳು ತಡೆದ ಘಟನೆ ಟ್ಯಾಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ದೈನಂದಿನ ತಪಾಸಣೆ ಪ್ರಕ್ರಿಯೆ ವೇಳೆ ಈ ಗುಂಪು ಹಾಜರುಪಡಿಸಿದ ದಾಖಲೆಗಳು ನಕಲಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಗಡಿ ನಿರ್ವಹಣಾ ಪ್ರಾಧಿಕಾರ(ಬಿಎಂಎ)ದ ಅಧಿಕಾರಿಗಳು ಈ ಬಾಂಗ್ಲಾ ದೇಶಿಗರನ್ನು ತಡೆದರು.
ಇದು ಒಂಬತ್ತು ಮಂದಿಯ ಗುಂಪಾಗಿದ್ದು, ಈ ಪೈಕಿ ಮೂವರು ಮಹಿಳಾ ಪ್ರಯಾಣಿಕರು ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹಾಜರುಪಡಿಸಿದರು. ಉಳಿದ ಆರು ಪುರುಷ ಪ್ರಯಾಣಿಕರು ಬಾಂಗ್ಲಾದೇಶ ಪಾಸ್‌ಪೋರ್ಟ್‌ಗಳನ್ನು ಹಾಜರುಪಡಿಸಿದರು. ಆದರೆ ಅವು ನಕಲಿ ಎಂಬುದು ಪತ್ತೆಯಾಯಿತು.
ವಲಸೆ ಅಧಿಕಾರಿಗಳು ಈ ಅಕ್ರಮ ವಲಸಿಗ ಬಾಂಗ್ಲಾದೇಶಿಗರನ್ನು ದೇಶದೊಳಗೆ ಬರಲು ಬಿಡದೆ ವಾಪಸ್ ಕಳುಹಿಸಿದ್ದಾರೆ. ಬಾಂಗ್ಲಾ ದೇಶಕ್ಕೆ ಹಿಂದಿರುಗಲು ಸೂಕ್ತ ವ್ಯವಸ್ಥೆ ಮಾಡಿದ್ದಾರೆ ಎಂದು ಬಿಎಂಎ ಕಮೀಷನರ್ ಡಾ.ಮೈಕೇಲ್ ಮಸಿಯಾಪಟೋ ತಿಳಿಸಿದ್ದಾರೆ.
ಕ್ರಿಮಿನಲ್‌ಗಳ ಸಿಂಡಿಕೇಟ್‌ಗಳು ವಲಸೆ ನಿಯಂತ್ರಣದಿಂದ ನುಣುಚಿಕೊಳ್ಳಲು ಹೊಸ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಆದರೆ ಅಧಿಕಾರಿಗಳು ನಕಲಿ ದಾಖಲೆಗಳನ್ನು ಪತ್ತೆ ಮಾಡಲು ಮತ್ತು ದೇಶಕ್ಕೆ ಅಕ್ರಮ ಪ್ರವೇಶವನ್ನು ತಡೆಗಟ್ಟಲು ಸರ್ವ ಸನ್ನದ್ಧರಾಗಿದ್ದಾರೆ ಎಂದು ಮೈಕೇಲ್ ಹೇಳಿದ್ದಾರೆ.
ಈ ನಕಲಿ ಪಾಸ್‌ಪೋರ್ಟ್‌ಗಳು ಮತ್ತು ವೀಸಾಗಳ ಮೂಲ ಯಾವುದು? ಈ ಪ್ರಯಾಣಿಕರು ಅಂತಾರಾಷ್ಟ್ರೀಯ ಅಪರಾಧಿ ಗುಂಪುಗಳ ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನು ಪತ್ತೆ ಮಾಡಲು ತನಿಖೆ ಮುಂದುವರೆದಿದೆ ಎಂದು ಅವರು ವಿವರಿಸಿದ್ದಾರೆ. ಪಶ್ಚಿಮ ಬಂಗಾಳದ ಈ ಹಿಂದಿನ ಸರ್ಕಾರ ಬಾಂಗ್ಲಾದೇಶಿ ವಲಸಿಗರಿಗೆ ಪೂರ್ವಾಪರ ಪರಿಶೀಲಿಸದೆ ಆಧಾರ್ ಕಾರ್ಡ್‌ಗಳನ್ನು ವಿವರಿಸುತ್ತಿತ್ತು ಎಂಬ ಆರೋಪ ಇಲ್ಲಿ ಉಲ್ಲೇಖನೀಯ.
