ಬೆಂಗಳೂರು,ಫೆ.8- ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿರುವ ಮೆಟ್ರೋ ರೈಲು ದರ ಪರಿಷ್ಕರಣೆ ಗೊಂದಲ ಸಾರ್ವಜನಿಕರಲ್ಲಿ ಈಗಲೂ ಮುಂದುವರೆದಿದೆ. ಕೇಂದ್ರ ಸರ್ಕಾರ ತಡೆ ನೀಡಿದೆ ಎಂದು ಹೇಳಿದರೂ ಇಲ್ಲಿಯವರೆಗೆ ಕೇಂದ್ರದಿಂದ ಬೆಂಗಳೂರು ಮೆಟ್ರೋ ರೈಲ್ ಲಿಮಿಟೆಡ್‌ಗೆ (ಬಿ.ಎಂ.ಆರ್.ಸಿ.ಎಲ್)ಯಾವುದೇ ಅಧಿಕೃತ ಪತ್ರ ಬಂದಿಲ್ಲ.
ಅಧಿಕೃತ ಪತ್ರ ಬಂದರಷ್ಟೇ ದರ ಇಳಿಕೆಯಾಗಲಿದೆ. ಇಲ್ಲಿಯವರೆಗೆ ಯಾವುದೇ ಅಧಿಕೃತ ಆದೇಶದ ಪತ್ರ ಬಾರದೇ ಇದ್ದರೆ ದರ ಏರಿಕೆಯಾಗಲಿದೆ. ಸೋಮವಾರದಿಂದ ಮೆಟ್ರೋ ರೈಲು ದರ ಪರಿಷ್ಕರಣೆ ಆಗುವುದಿಲ್ಲ ಎಂದು ಬಿಜೆಪಿ ಸಂಸದರು ಹೇಳಿಕೊಂಡಿದ್ದರೆ, ನಮಗೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಪರಿಷ್ಕತ ದರ ಸೋಮವಾರದಿಂದ ಅನ್ವಯವಾಗಲಿದೆ ಎಂಬುದು ಮೆಟ್ರೋ ಅಧಿಕಾರಿಗಳ ಹೇಳಿಕೆ.
ಇದರ ನಡುವೆ ದರ ಪರಿಷ್ಕರಣೆ ಸಂಬಂಧ ಬಿಜೆಪಿ ಸಂಸದರು ನನಗೆ ಪತ್ರ ಬರೆಯಲಿ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವರು ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೀಗಾಗಿ ಸೋಮವಾರದಿಂದ ಮೆಟ್ರೋ ದರ ಪರಿಷ್ಕರಣೆ ಆಗಲಿದೆಯೇ ಇಲ್ಲದೆ ಎಂಬ ಗೊಂದಲ ಈಗಲೂ ಮುಂದುವರೆದಿದೆ.
ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪಿ.ಸಿ.ಮೋಹನ್ ಅವರು ನೀಡಿರುವ ಹೇಳಿಕೆಯಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆ, ಮೆಟ್ರೋ ದರ ಪರಿಷ್ಕರಣೆ ಮಾಡದಂತೆ ಬಿ ಎಂ ಆರ್ ಸಿ ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕೇಂದ್ರ ನಗರ ಅಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಜೊತೆ ನಡೆಸಿದ ಮಾತುಕತೆ ಪರಿಣಾಮ ಪರಿಷ್ಕತ ದರವನ್ನು ತಡೆಹಿಡಿಯಲು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಹೀಗಾಗಿ ಸೋಮವಾರದಿಂದ ದರ ಪರಿಷ್ಕರಣೆ ಆಗುವುದಿಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದೆಂದು ಈ ಇಬ್ಬರೂ ಸಂಸದರು ಮನವಿ ಮಾಡಿದ್ದಾರೆ. ಸಾಲದ್ದಕ್ಕೆ ತೇಜಸ್ವಿ ಸೂರ್ಯ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರತ್ಯೇಕವಾಗಿ ತಮ ಸಾಮಾಜಿಕ ಜಾಲತಾಣ ಎಕ್‌್ಸ ನಲ್ಲಿ ಕೂಡ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರ ಜೊತೆ ನಡೆಸಿದ ಮಾತುಕತೆಯಿಂದಾಗಿ ಬೆಂಗಳೂರಿನ ಜನರಿಗೆ ಹೊರೆಯಾಗುತ್ತಿದ್ದ ಮೆಟ್ರೋ ದರ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ರಾಜ್ಯ ಸರ್ಕಾರದ ಗೊಂದಲದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಜನರಿಗೆ ಹೊರೆಯಾಗುತ್ತಿದ್ದುದನ್ನು ತಪ್ಪಿಸಲು ನಾವು ಕೇಂದ್ರ ಸಚಿವರ ಜೊತೆ ನಿರಂತರವಾಗಿ ಸಂಪರ್ಕ ಸಾಧಿಸಿದ ಪರಿಣಾಮ ಪರಿಷ್ಕೃತ ದರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ರಾಜ್ಯ ಸರ್ಕಾರ, ಕೇಂದ್ರದ ಗಮನಕ್ಕೆ ತರದೆ ಏಕಪಕ್ಷೀಯವಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ಬಿಜೆಪಿ ಆರೋಪವಾಗಿದೆ.
ಆದರೆ ಪರಿಷ್ಕತ ತಡೆಹಿಡಿದಿರುವುದರಿಂದ ಬಗ್ಗೆ ನಮಗೆ ಕೇಂದ್ರದಿಂದ ಈ ಕ್ಷಣದವರೆಗೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಮೆಟ್ರೋ ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಜನರಲ್ಲಿ ಮತ್ತಷ್ಟು ಗೊಂದಲವನ್ನು ಸೃಷ್ಟಿಸಿದೆ. ನಾವು ಈಗಾಗಲೇ ದರವನ್ನು ಪರಿಷ್ಕರಣೆ ಮಾಡಿದ್ದೇವೆ. ಇದರಂತೆ ಸೋಮವಾರದಿಂದಲೇ ನೂತನ ದರ ಜಾರಿಯಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳ ಸಮರ್ಥನೆಯಾಗಿದೆ.
ದರವನ್ನು ಪರಿಷ್ಕರಣೆ ಮಾಡಲು ನಾವು ಬಿಎಂಆರ್‌ಸಿಎಲ್‌ಗೆ ಯಾವುದೇ ರೀತಿಯ ಸೂಚನೆ ಕೊಟ್ಟಿಲ್ಲ, ಕೇಂದ್ರ ಸರ್ಕಾರವೇ ದರ ಹೆಚ್ಚಳ ಮಾಡಿದೆ ಎಂಬುದು ಕಾಂಗ್ರೆಸ್ ಪಕ್ಷದ ಆರೋಪ. ಒಂದು ವೇಳೆ ಬೆಂಗಳೂರಿನ ಜನರ ಬಗ್ಗೆ ಅಷ್ಟೊಂದು ಕಳಕಳಿ ಇದ್ದರೆ, ಮೂವರು ಸಂಸದರು ದರ ಪರಿಷ್ಕರಣೆ ಮಾಡಬಾರದೆಂದು ನನಗೆ ಪತ್ರ ಬರೆಯಲಿ. ನಾನು ಕೇಂದ್ರ ನಗರಭಿವೃದ್ಧಿ ಸಚಿವರು, ಅಧಿಕಾರಿಗಳು ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ನಂತರ ನಿರ್ಧಾರ ಪ್ರಕಟಿಸುತ್ತೇವೆ ಎಂದು ಡಿಸಿ ಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸೋಮವಾರದಿಂದ ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ ದರ ಹೆಚ್ಚಳದ ಪ್ರಸ್ತಾಪ ಇಟ್ಟಿತ್ತು. ನಾವು, ಸಾರ್ವಜನಿಕರು ಇದರ ವಿರುದ್ಧ ಧ್ವನಿ ಎತ್ತಿದ್ದೆವು. ಈಗಾಗಲೇ ದೇಶದ ದುಬಾರಿ ಮೆಟ್ರೋ ಎನ್ನುವ ಕುಖ್ಯಾತಿ ಇದೆ. ಕೇಂದ್ರ ಸಚಿವ ಮನೋಹರ ಲಾಲ್ ಖಟ್ಟರ್ ಜೊತೆ ನಾನು, ವಿಪಕ್ಷ ನಾಯಕ ಆರ್ ಅಶೋಕ್, ಸಂಸದ ಪಿ.ಸಿ.ಮೋಹನ್ ಅವರು ಮಾತಾಡಿದ್ದೆವು. ನಗರಾಭಿವೃದ್ಧಿ ಇಲಾಖೆಯ ಸೆಕ್ರೆಟರಿ ಅವರಿಗೆ ತಾತ್ಕಾಲಿಕವಾಗಿ ದರ ಏರಿಕೆಯನ್ನು ನಿಲ್ಲಿಸಲು ಸೂಚಿಸಿದ್ದಾಗಿ ಹೇಳಿದ್ದಾರೆ. ಆದರೆ ಇದು ತಾತ್ಕಾಲಿಕ ಅಷ್ಟೇ, ನಾವು ಯದ್ದ ಪೂರ್ತಿಯಾಗಿ ಗೆದ್ದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಹೊಸ ಫೇರ್ ಫಿಕ್ಸೇಷನ್ ಕಮಿಟಿ ರಚಿಸಿಲು ಪತ್ರ ಬರೆದರೆ, ನಾವು ಅದನ್ನ ಪರಿಗಣಿಸುತ್ತೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಈಗ ಬಾಲ್ ಸಿಎಂ ಮತ್ತು ಡಿಸಿಎಂ ಅಂಗಳದಲ್ಲಿ ಇದೆ. ಈಗ ಒಂದು ಪತ್ರ ಬರೆಯಿರಿ ಎಂದು ಹೇಳಿದ್ದಾರೆ. ಮರುಪರಿಷ್ಕರಣೆ ಮಾಡಿ ಎಂದು ಪತ್ರ ಬರೆದರೆ ಹೊಸ ಕಮಿಟಿ ರಚನೆ ಮಾಡುತ್ತಾರೆ. ಪತ್ರ ಬರೆದರೂ ಕಮಿಟಿ ಮಾಡಿಲ್ಲ ಎಂದರೆ ಕೇಂದ್ರದ ತಪ್ಪು. ಇವರು ಪತ್ರ ಬರೆದಿಲ್ಲ ಎಂದರೆ ಇವರ ತಪ್ಪು, ಏನು ಮಾಡುತ್ತಾರೆ ನೋಡೋಣ.
ಟೆಕ್ನಿಕಲ್ ಆಗಿ ಈಗಲೂ ಸಹ ತಡೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನಾವೆಲ್ಲಾ ಒತ್ತಡ ಹೇರಿದ್ದರಿಂದ ತಾತ್ಕಾಲಿಕವಾಗಿ ಮಾಡಿದ್ದಾರೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಕಮಿಟಿ ರಚಿಸಲು ಹೇಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಒಂದು ವರ್ಷದ ಹಿಂದಷ್ಟೇ ಪ್ರಯಾಣ ದರವನ್ನು ಶೇ.71.5 ರಷ್ಟು ಹೆಚ್ಚಳ ಮಾಡಿದ್ದ ಬಿಎಂಆರ್‌ಸಿಎಲ್ ಶೇ. ಈಗ 5 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿತ್ತು. ಸೋಮವಾರ ಪರಿಷ್ಕೃತ ದರ ಜಾರಿಗೆ ಬರಲಿದೆ ಇಲ್ಲವೇ, ಹಳೆ ದರ ಮುಂದುವರೆಯಲಿದಿಯೇ ಎಂಬ ಗೊಂದಲದಲ್ಲಿ ಪ್ರಯಾಣಿಕರಿದ್ದಾರೆ.
ಪರಿಷ್ಕತ ಮೆಟ್ರೋ ದರ ಪಟ್ಟಿ :
0-2 ಕಿ.ಮೀ- ರೂ.10 ರಿಂದ ರೂ.11ಕ್ಕೆ ಏರಿಕೆ
2-4 ಕಿ.ಮೀ- ರೂ.20 ರಿಂದ ರೂ.21ಕ್ಕೆ ಏರಿಕೆ
4-6 ಕಿ.ಮೀ- ರೂ.30 ರಿಂದ ರೂ.32ಕ್ಕೆ ಏರಿಕೆ
6-8 ಕಿ.ಮೀ- ರೂ.40 ರಿಂದ ರೂ.42ಕ್ಕೆ ಏರಿಕೆ
8-10 ಕಿ.ಮೀ- ರೂ.50 ರಿಂದ ರೂ.53ಕ್ಕೆ ಏರಿಕೆ
10-15 ಕಿ.ಮೀ- ರೂ.60 ರಿಂದ ರೂ.63ಕ್ಕೆ ಏರಿಕೆ
15-20 ಕಿ.ಮೀ- ರೂ.70 ರಿಂದ ರೂ.74ಕ್ಕೆ ಏರಿಕೆ
20-25 ಕಿ.ಮೀ- ರೂ.80 ರಿಂದ ರೂ.84ಕ್ಕೆ ಏರಿಕೆ
25 ಕಿ.ಮೀ ಮೇಲ್ಪಟ್ಟು- ರೂ.90 ರಿಂದ ರೂ.95ಕ್ಕೆ ಏರಿಕೆ
