Friday, April 17, 2026
Homeಜಿಲ್ಲಾ ಸುದ್ದಿಗಳುಬದುಕಿರುವಾಗಲೇ ತಿಥಿಗೆ ಅಧಿಕಾರಿಗಳನ್ನು ಆಹ್ವಾನಿಸಿದ ಶ್ರೀಗಂಧದ ಬೆಳೆಗಾರ : ಕಾರಣವೇನು ಗೊತ್ತೇ..?

ಬದುಕಿರುವಾಗಲೇ ತಿಥಿಗೆ ಅಧಿಕಾರಿಗಳನ್ನು ಆಹ್ವಾನಿಸಿದ ಶ್ರೀಗಂಧದ ಬೆಳೆಗಾರ : ಕಾರಣವೇನು ಗೊತ್ತೇ..?

Sandalwood grower invites officials to his death anniversary while still alive

ಚಿಕ್ಕಮಗಳೂರು,ಫೆ.9-ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತ ಬೆಳೆಗಾರನೊಬ್ಬ, ತಾನು ಬದುಕಿರುವಾಗಲೇ ತನ್ನ ಸಂತಾಪ ಸಭೆ ಹಾಗೂ ತಿಥಿ ಊಟಕ್ಕೆ ಅಧಿಕಾರಿಗಳಿಗೆ ಆಹ್ವಾನ ನೀಡಿರುವ ವಿಲಕ್ಷಣ ಹಾಗೂ ಆಘಾತಕಾರಿ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ತರೀಕೆರೆ ತಾಲೂಕಿನ ಗಂಧದ ಬೆಳೆಗಾರ ವಿಶುಕುಮಾರ್‌ ಅವರು ಈ ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದವರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಇವರ ಜಮೀನಿನಲ್ಲಿದ್ದ ಅಮೂಲ್ಯವಾದ ಶ್ರೀಗಂಧದ ಮರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಒಂದು ಶ್ರೀಗಂಧದ ಮರಕ್ಕೆ ಕೇವಲ 420 ರೂಪಾಯಿ ಪರಿಹಾರ ನಿಗದಿಪಡಿಸಿರುವುದು ಬೆಳೆಗಾರನ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳೆಗಾರ ವಿಶುಕುಮಾರ್‌ ಅವರ ಪ್ರಕಾರ, ಅಧಿಕಾರಿಗಳು ಇತರ ಮರಗಳಿಗೆ ಹೆಚ್ಚಿನ ದರ ನಿಗದಿಪಡಿಸಿ, ಅತ್ಯಂತ ಬೆಲೆಬಾಳುವ ಶ್ರೀಗಂಧಕ್ಕೆ ಕನಿಷ್ಠ ಬೆಲೆ ನೀಡಿದ್ದಾರೆ. ಒಂದು ಮಾವಿನ ಮರಕ್ಕೆ 63ಸಾವಿರ, ತೆಂಗಿನ ಮರ 37 ಸಾವಿರ, ಲಿಂಬೆ ಗಿಡ 3,400, ಬೇವು 2,200,ಶ್ರೀಗಂಧದ ಮರ ಕೇವಲ 420.

ಹಿಂದೆ ನ್ಯಾಯಾಲಯವು ಒಂದು ಶ್ರೀಗಂಧದ ಮರಕ್ಕೆ ಕನಿಷ್ಠ 25 ಸಾವಿರ ರೂಪಾಯಿ ನಿಗದಿಪಡಿಸಿ ವೈಜ್ಞಾನಿಕ ದರ ನೀಡುವಂತೆ ಸೂಚಿಸಿದ್ದರೂ, ಅಧಿಕಾರಿಗಳು ಅದನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಬೆಳೆಗಾರನ ಗಂಭೀರ ಆರೋಪವಾಗಿದೆ.ಅಧಿಕಾರಿಗಳ ನಡೆಗೆ ಬೇಸತ್ತ ವಿಶುಕುಮಾರ್‌, ವಾರದ ಹಿಂದೆಯಷ್ಟೇ ದಯಾಮರಣಕ್ಕೆ ಮನವಿ ಮಾಡಿದ್ದರು. ಅಲ್ಲದೆ ಸಿಸಿಎಫ್‌ ಭೇಟಿಗೆ ಅವಕಾಶ ನೀಡದಿದ್ದರೆ ಶಿವಮೊಗ್ಗ ಕಚೇರಿ ಮುಂಭಾಗವೇ ಆತಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದರು.

ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು, ಎನ್‌.ಎಚ್‌.ಎ.ಐ ಅಧಿಕಾರಿಗಳು, ಅರಣ್ಯ ಇಲಾಖೆಯ ಭ್ರಷ್ಟ ಅಧಿಕಾರಿಗಳು ಮತ್ತು ವಿಶೇಷ ಭೂಸ್ವಾಧೀನ ಅಧಿಕಾರಿಗಳನ್ನು ತಮ ತಿಥಿ ಊಟಕ್ಕೆ ಆಹ್ವಾನಿಸಿದ್ದಾರೆ.

ಇದೇ ವೇಳೆ ಪೊಲೀಸ್‌‍ ಇಲಾಖೆಯ ಪ್ರಾಮಾಣಿಕ ಅಧಿಕಾರಿಗಳಿಗೂ ಅವರು ಆಮಂತ್ರಣ ನೀಡಿದ್ದು, ವ್ಯವಸ್ಥೆಯ ವಿರುದ್ಧ ತನ್ನ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಘಟನೆಯು ಜಿಲ್ಲಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ರೈತರಿಗೆ ಸಿಗಬೇಕಾದ ನ್ಯಾಯಯುತ ಪರಿಹಾರದ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.

RELATED ARTICLES

Latest News