ನೆಲಮಂಗಲ,ಫೆ.9- ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಜೋರಾಗಿ ಅವರನ್ನು ತಳ್ಳಿದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹುಸ್ಕೂರು ಗ್ರಾಮದ ಜ್ಯೋತಿ (45) ಮೃತಪಟ್ಟ ಮಹಿಳೆ.ಜ್ಯೋತಿ ಅವರು ಇಂದು ಬೆಳಗ್ಗೆ ಮನೆ ಮುಂದೆ ಕಸ ಗುಡಿಸುತ್ತಿದ್ದಾಗ ಬೈಕ್ನಲ್ಲಿ ಇಬ್ಬರು ಸರಗಳ್ಳರು ಹಿಂದಿನಿಂದ ಬಂದು ಅವರ ಮುಖಕ್ಕೆ ಸೆ್ಪ್ರೕ ಹಾಕಿ ಮಾಂಗಲ್ಯಸರ ಕಿತ್ತುಕೊಂಡಿದ್ದಾರೆ.
ಆ ವೇಳೆ ಪ್ರತಿರೋಧ ವ್ಯಕ್ತಪಡಿಸಿ ಜ್ಯೋತಿ ಅವರಿಗೆ ಸರಗಳ್ಳರು ಕಪಾಳ ಮೋಕ್ಷ ಮಾಡಿ ತಳ್ಳಿದ್ದರಿಂದ ನಡು ರಸ್ತೆಯಲ್ಲೇ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಸರಗಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
