ಗುವಾಹಟಿ, ನ.16- ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಆರೋಪದ ಮೇಲೆ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ವಜಾಗೊಳಿಸಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಅಸ್ಸಾಂ ಘಟಕಗಳು ಒತ್ತಾಯಿಸಿವೆ.
ಈ ವಿಷಯದ ಬಗ್ಗೆ ಕಟಾರಿಯಾ ಅಥವಾ ಅಸ್ಸಾಂ ಗವರ್ನರ್ ಕಚೇರಿಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆಗಳು ದೊರೆತಿಲ್ಲ. ಸಾಂವಿಧಾನಿಕ ಹುದ್ದೆ ರಾಜ್ಯಪಾಲರಾಗುವ ಮೊದಲು ರಾಜಕೀಯ ಪಕ್ಷದ ಎಲ್ಲಾ ಹೊಣೆಗಾರಿಕೆಗಳನ್ನು ತ್ಯಜಿಸಿರಬೇಕಾಗುತ್ತದೆ. ಆದರೆ ಗುಲಾಬ್ ಚಂದ್ ಕಟಾರಿಯಾ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿರುವುದು ಸಂವಿಧಾನ ಬಾಹಿರವಗಿದೆ, ಅವರನ್ನು ಹುದ್ದೆಯಿಂದ ವಜಾಗೊಳಿಸಲು ರಾಷ್ಟ್ರಪತಿ ಮತ್ತು ಭಾರತೀಯ ಚುನಾವಣಾ ಆಯೋಗದ ಮಧ್ಯಪ್ರವೇಶ ಮಾಡಬೇಕು ಎಂದು ಉಭಯ ಪಕ್ಷಗಳು ಆಗ್ರಹಿಸಿವೆ.
ಗುಲಾಬ್ ಚಂದ್ ಕಟಾರಿಯಾ ರಾಜಸ್ಥಾನದ ಉದಯಪುರದಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ನಿರತರಾಗಿದ್ದರು, ಇದು ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ, ಭಾರತೀಯ ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಸ್ಸಾಂ ಟಿಎಂಸಿ ಅಧ್ಯಕ್ಷ ರಿಪುನ್ ಬೋರಾ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಂವಿಧಾನದ ಪಾಲಕರಾಗಿದ್ದರೂ ಕಟಾರಿಯಾ ಅವರು ಬಿಜೆಪಿ ಪರ ಪ್ರಚಾರ ನಡೆಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಕೂಡಲೇ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಬೋರಾ ಆಗ್ರಹಿಸಿದ್ದಾರೆ.
ದೇಶ ತೊರೆಯಲು ಭಾರತೀಯ ಪಡೆಗಳಿಗೆ ಮಾಲ್ಡೀವ್ಸ್ ಸೂಚನೆ
ಸಂವಿಧಾನ ಹುದ್ದೆಯ ಘನತೆ ಮರೆತು ಬಿಜೆಪಿ ಅಭ್ಯರ್ಥಿ ತಾರಾಚನ್ ಜೈನ್ ಪರ ಪ್ರಚಾರ ನಡೆಸಿ ಚುನಾವಣಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಟಿಎಂಸಿ ಆಕ್ರೋಶ ವ್ಯಕ್ತ ಪಡಿಸಿದೆ. ಅಸ್ಸಾಂನ ಟಿಎಂಸಿ ಘಟಕ ಪತ್ರಿಕಾ ಹೇಳಿಕೆ ನೀಡಿ, ಕೆಲವು ದಿನಗಳ ಹಿಂದೆ ಅಸ್ಸಾಂ ವಿಧಾನಸಭೆಯ ಉಪ ಸ್ಪೀಕರ್ ನುಮಲ್ ಮೊಮಿನ್ ಮಿಜೋರಾಂನಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದರು. ಈಗ ಕಟಾರಿಯಾ ಸರದಿಯಾಗಿದೆ.
ಇದು ಸಾಂವಿಧಾನಿಕ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ರಾಜ್ಯದ ಮುಖ್ಯಸ್ಥರಾಗಿ, ರಾಜ್ಯಪಾಲರು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಬಾರದಿತ್ತು. ನಿರಂಕುಶ ಮತ್ತು ಪ್ರಜಾಪ್ರಭುತ್ವ ವಿರೋಧಿ ಸರ್ಕಾರವನ್ನು ನಡೆಸಲು ಬಿಜೆಪಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದನ್ನು ಈ ಎರಡು ಉದಾಹರಣೆಗಳು ತೋರಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಎಎಪಿ ಅಸ್ಸಾಂ ಸಂಯೋಜಕ ಭಾಬೆನ್ ಚೌಧರಿ ಮಾತನಾಡಿ, ರಾಜ್ಯಪಾಲರು ಜಾತಿ, ಮತ ಮತ್ತು ಧರ್ಮವನ್ನು ಲೆಕ್ಕಿಸದೆ ಸಂವಿಧಾನವನ್ನು ಎತ್ತಿಹಿಡಿಯಬೇಕು ಮತ್ತು ರಾಜಕೀಯದಿಂದ ದೂರವಿರಬೇಕು. ಆದಾಗ್ಯೂ, ಕಟಾರಿಯಾ ಅವರು ಚುನಾವಣೆಯಲ್ಲಿ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವ ಮೂಲಕ ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದು ರಾಜ್ಯಪಾಲರ ಹುದ್ದೆಯನ್ನು ಕೀಳಾಗಿ ಮಾಡಿದೆ. ಇದು ಭಾರತದ ರಾಜಕೀಯವನ್ನು ಕರಾಳಗೊಳಿಸಿದೆ ಎಂದು ಅವರು ಹೇಳಿದ್ದು, ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.