ಬೆಂಗಳೂರು, ಫೆ.10- ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿ ಅಧಿಕಾರ ಗದ್ದುಗೆ ಹಿಡಿಯಬೇಕೆಂಬ ಬಿಜೆಪಿ – ಜೆಡಿಎಸ್ ಮೈತ್ರಿ ಕೂಟದಲ್ಲಿ ದಿನದಿಂದ ದಿನಕ್ಕೆ ಬಿರುಕು ಮೂಡುತ್ತಿದೆ. ಒಳಗೆ ದೋಸ್ತಿ ಹೊರಗೆ ಕುಸ್ತಿ ಎಂಬಂತೆ, ಮೇಲ್ನೋಟಕ್ಕೆ ಮಾತ್ರ ನಾವು ಒಂದಾಗಿದ್ದೇವೆ ಎಂದು ಹೇಳುತ್ತಿದ್ದರೂ ವಾಸ್ತವ ಮಾತ್ರ ಬೇರೆಯದ್ದೇ
ಇದೆ. ಎರಡು ಪಕ್ಷಗಳ ನಾಯಕರು ಸೇರಿಗೆ ಸವ್ವಾ ಸೇರು ಎನ್ನುವಂತೆ ಆರೋಪ- ಪ್ರತ್ಯಾರೋಪ ಮಾಡುತ್ತಿರುವುದು ಮೈತ್ರಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವಂತೆ ಕಾಣುತ್ತಿದೆ. ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕೆಲವರು ಜೆಡಿಎಸ್ ಜೊತೆ ಮೈತ್ರಿಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಭಾವಗೊಂಡಿದ್ದ ಬಿಜೆಪಿಯ ಕೆಲವು ನಾಯಕರು ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಬೇಡ ಎನ್ನುತ್ತಿದ್ದಾರೆ.ಇದು ಎರಡು ಪಕ್ಷಗಳಲ್ಲಿ ಗೊಂದಲ ಸೃಷ್ಟಿ ಸಿದೆೆ. ವಿಶೇಷವಾಗಿ ಮಂಡ್ಯ, ಹಾಸನ , ತುಮಕೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿ ನಾಯಕರು ಸುತರಾಂ ಒಪ್ಪುತ್ತಿಲ್ಲ.
ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ತಮ ರಾಜಕೀಯ ಅಸ್ತಿತ್ವವೇ ಉಳಿಯುವುದಿಲ್ಲ ಎಂಬ ಆತಂಕದಿಂದ ತೆನೆ ಹೊತ್ತ ಮಹಿಳೆ ಜೊತೆ ಮೈತ್ರಿ ಏಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ಏನೇ ವೈಮನಸ್ಸು ಭಿನ್ನಾಭಿಪ್ರಾಯ ಇದ್ದರೂ ಎಲ್ಲವನ್ನೂ ಸಹಿಸಿಕೊಂಡು ಕಾಂಗ್ರೆಸ್ ಪಕ್ಷ ಸೋಲಿಸಲು ಎಲ್ಲರೂ ಒಗ್ಗಟ್ಟಾಗಬೇಕೆಂದು ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಿದ್ದರೂ ಮೈತ್ರಿ ಧರ್ಮವನ್ನು ಯಾರೂ ಪಾಲನೆ ಮಾಡುತ್ತಿಲ್ಲ.
ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದಿಂದ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಮಾಜಿ ಸಚಿವ ನಾರಾಯಣಗೌಡ ಅವರು ಮೈತ್ರಿಗೆ ಒಪ್ಪುತ್ತಿಲ್ಲ. ಕಾರಣ, ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೆ ತಾವು ರಾಜಕೀಯವಾಗಿ ಮೂಲೆಗುಂಪು ಆಗಬೇಕಾಗುತ್ತದೆ ಎಂಬ ಆತಂಕ ಅವರಲ್ಲಿದೆ. ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಂಸದೆ ಸುಮಲತಾ ಅಂಬರೀಶ್ ತಮ ಪುತ್ರ ಅಭಿಷೇಕ್ ಅವರನ್ನು ಅಖಾಡಕ್ಕಿಳಿಸಲು ಸಜ್ಜಾಗುತ್ತಿದ್ದಾರೆ. ತಮ ಪುತ್ರನಿಗೆ ಶತಾಯಗತಾಯ ಟಿಕೆಟ್ ಕೊಡಿಸಲು ಹರ ಸಾಹಸ ಪಡುತ್ತಿರುವ ಸುಮಲತಾ ಮದ್ದೂರಿನಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಅಪಸ್ವರ ತೆಗೆದಿದ್ದಾರೆ.
ಮದ್ದೂರು ಹೇಳಿ ಕೇಳಿ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರವಾಗಿದೆ. ಒಂದು ವೇಳೆ ಜೆಡಿಎಸ್ ಗೆ ಇಲ್ಲಿ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಮಗನ ರಾಜಕೀಯ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ ಎಂಬ ಆತಂಕ ಸುಮಲತಾ ಅಂಬರೀಷ್ ಅವರದ್ದು. ಇದೇ ರೀತಿ ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 40 ಸಾವಿರ ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದ ಸಚ್ಚಿದಾನಂದಮೂರ್ತಿ ಕೂಡ ಈ ಕ್ಷೇತ್ರದ ಪ್ರಬಲ ಆಕಾಂಕ್ಷಿ. ಆದರೆ ಜೆಡಿಎಸ್ ಮಾಜಿ ಶಾಸಕ ರವೀಂದ್ರ ಶ್ರೀಕಂಠೇಗೌಡ ಪ್ರಬಲ ಆಕಾಂಕ್ಷಿ.
ಹಾಸನ ಜಿಲ್ಲೆಗೆ ಬಂದರೆ ಮಾಜಿ ಶಾಸಕ ಪ್ರೀತಂ ಗೌಡ ಇಲ್ಲಿ ಒಂದು ಬಾರಿ ಗೆದ್ದು ಕಳೆದ ಬಾರಿ ಪರಾಭವಗೊಂಡಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಹಾಲಿ ಶಾಸಕ ಸ್ವರೂಪ್ ಪ್ರಕಾಶ್ ಇರುವುದರಿಂದ ಬಿಜೆಪಿಗೆ ಸ್ಥಾನ ಬಿಟ್ಟು ಕೊಡುವುದು ಅಷ್ಟು ಸುಲಭವಲ್ಲ. ಹಾಸನದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಂದು ರೀತಿ ಹಾವು ಮುಂಗಸಿಯಂತೆ ಇದ್ದಾರೆ. ಇನ್ನು ಸಕಲೇಶಪುರ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರಗಳ ಪರಿಸ್ಥಿತಿಯೂ ಇದೇ ರೀತಿ ಇದೆ.
ಒಲ್ಲದ ಮೈತ್ರಿ
2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೀನಾಯ ಸೋಲಿನ ಬೆನ್ನಲ್ಲೇ ರಾಜ್ಯದಲ್ಲಿ ಕಮಲ-ತೆನೆ ಮೈತ್ರಿ ನಡೆದಿತ್ತು. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಈ ಮೈತ್ರಿಯಿಂದ ಬಿಜೆಪಿಗೆ ಆಗಿರುವ ಲಾಭಕ್ಕಿಂತ ಜೆಡಿಎಸ್ ಗೆ ಲಾಭ ಆಗಿದ್ದೇ ಹೆಚ್ಚು ಎಂಬ ನಿಟ್ಟಿನಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆದಿದ್ದವು. ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.ಚುನಾವಣಾ ಫಲಿತಾಂಶದ ಬಳಿಕ ರಾಜ್ಯದಲ್ಲಿ ಕಮಲ ಹಾಗೂ ದಳ ಮೈತ್ರಿ ಮತ್ತಷ್ಟು ಗಟ್ಟಿಯಾದವು. ಎಚ್.ಡಿ. ಕುಮಾರಸ್ವಾಮಿಗೆ ಕೇಂದ್ರದಲ್ಲಿ ಸಚಿವ ಸ್ಥಾನವನ್ನು ನೀಡಲಾಯ್ತು. ಅದೂ ಪ್ರಭಾವಿ ಖಾತೆಯನ್ನೇ ನೀಡಲಾಯ್ತು. ಈ ಮೂಲಕ ಇಬ್ಬರ ನಡುವಿನ ಮೈತ್ರಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಪಡಲಿದೆ ಎಂಬ ಸಂದೇಶವೂ ರವಾನೆ ಆಯ್ತು. ಆದರೆ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಹಾಗೂ ಜೆಡಿಎಸ್‌ನಲ್ಲಿ ಭಿನ್ನ ನಿಲುವುಗಳು ಇದ್ದವು ಎಂಬುವುದು ವಾಸ್ತವ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಮಾತುಕತೆಯ ಫಲವಾಗಿತ್ತು. ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ನೇರವಾಗಿ ದೆಹಲಿ ಮಟ್ಟದಲ್ಲಿ ಬಿಜೆಪಿ ಪ್ರಮುಖರ ಜೊತೆಗೆ ಮಾತುಕತೆ ನಡೆಸಿ ಮೈತ್ರಿ ಕುದುರಿಸಿಕೊಂಡಿದ್ದರು. ಆದರೆ ಈ ಮೈತ್ರಿಗೆ ರಾಜ್ಯ ಬಿಜೆಪಿ ನಾಯಕರ ಬಹುತೇಕ ಅಸಮತಿ ಇತ್ತು. ಈ ಮೈತ್ರಿಯ ಅಗತ್ಯ ಏನಿದೆ? ಎಂಬ ಪ್ರಶ್ನೆಯನ್ನು ನಾಯಕರು ಎತ್ತಿದ್ದರು.ಆದರೆ ರಾಷ್ಟ್ರೀಯ ಮಟ್ಟದಲ್ಲಿ ನಿಗದಿಯಾದ ಮೈತ್ರಿಯ ಕಾರಣದಿಂದಾಗಿ ರಾಜ್ಯ ನಾಯಕರು ಮೌನಕ್ಕೆ ಶರಣಾಗಿದ್ದರು.
ಹೆಚ್ಚಾದ ಅಂತರಕೆಲವೊಂದು ಅಸಮಾಧಾನಗಳ ನಡುವೆಯೂ ಮೈತ್ರಿಗೆ ಓಕೆ ಅಂದರು. ಜತೆಗೂಡಿ ಕೆಲವೊಂದು ಹೋರಾಟಗಳಲ್ಲೂ ಭಾಗಿಯಾದರು. ಇದರಲ್ಲಿ ಪ್ರಮುಖವಾಗಿದ್ದು ಬೆಂಗಳೂರು ಟು ಮೈಸೂರು ಪಾದಯಾತ್ರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಪಾದಯಾತ್ರೆಯನ್ನು ನಡೆಸಿದ್ದವು. ಹಳೆ ಮೈಸೂರು ಭಾಗದಲ್ಲಿ ನಡೆದ ಪಾದಯಾತ್ರೆಯಲ್ಲಿ ಜೆಡಿಎಸ್ ತನ್ನ ಅಸ್ತಿತ್ವ ಬಿಟ್ಟುಕೊಡಲು ಸಿದ್ಧ ಇರಲಿಲ್ಲ. ಉಪ ಚುನಾವಣೆಯ ಸಂದರ್ಭದಲ್ಲೇ ನಡೆದ ಈ ಪಾದಯಾತ್ರೆಯಲ್ಲಿ ಜೆಡಿಎಸ್ ಸಕ್ರಿಯವಾಗಿ ಭಾಗಿಯಾಗಿತ್ತು. ತಮ ಬಲ ಇರುವ ಪ್ರದೇಶಗಳಲ್ಲಿ ಬಿಜೆಪಿಯ ಜೊತೆಗೆ ಅಂತರ ಕಾಯ್ದುಕೊಂಡು ಶಕ್ತಿ ಪ್ರದರ್ಶನಕ್ಕೆ ಮುಂದಾಗಿತ್ತು. ಪಾದಯಾತ್ರೆಯಲ್ಲೇ ಎರಡು ಪಕ್ಷಗಳ ನಡುವಿನ ಅಂತರ ಕೆಲವು ಸಂದರ್ಭಗಳಲ್ಲಿ ಗೋಚರಿಸುತ್ತಿತ್ತು.
ಇನ್ನು ಜೆಡಿಎಸ್ ನಾಯಕರು ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುತ್ತಿಲ್ಲ ಎಂಬ ಆರೋಪ ಒಂದು ಕಡೆಯಾದರೆ, ಬಿಜೆಪಿ ನಾಯಕರು ಜೆಡಿಎಸ್ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಮತ್ತೊಂದು ಕಡೆ ಇದೆ. ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ನಾಯಕರ ಜೊತೆಗೆ ಮಾತುಕತೆ ನಡೆಸುವುದಕ್ಕಿಂತ ಹೆಚ್ಚಾಗಿ ನೇರವಾಗಿ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಎಲ್ಲಾ ನಿರ್ಧಾರಗಳನ್ನು ಅಲ್ಲೇ ತೆಗೆದುಕೊಳ್ಳುತ್ತಾರೆ ಎಂಬ ಆರೋಪ ಇದೆ.
ಇದರ ನಡುವೆ ರಾಜ್ಯದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯ ಬಗ್ಗೆ ಕೆಲವು ಬಿಜೆಪಿ ನಾಯಕರಿಗೂ ಅಸಮಾಧಾನ ಇದೆ. ಈ ಮೈತ್ರಿಯ ಅಗತ್ಯ ಏನಿದೆ ಎಂಬ ಪ್ರಶ್ನೆಯನ್ನು ಅವರು ಆಂತರಿಕವಾಗಿ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿಗೆ ಹೆಚ್ಚು ಲಾಭ ಇಲ್ಲ ಎಂಬ ವಾದ ಅವರದ್ದು. ಅದರಲ್ಲೂ ಬಿಜೆಪಿ ಒಕ್ಕಲಿಗ ನಾಯಕರಿಗೆ ಈ ಮೈತ್ರಿ ಬೇಡವಾಗಿದೆ.ಈ ನಡುವೆ ಬಿಜೆಪಿ ಬೆಲೆ ಏರಿಕೆ ವಿರುದ್ಧ ಅಹೋರಾತ್ರಿ ಧರಣಿ ಹಮಿಕೊಂಡಿತ್ತು. ಆದರೆ ಇದರಲ್ಲಿ ಜೆಡಿಎಸ್ ಭಾಗಿಯಾಗಿರಲಿಲ್ಲ. ಜೆಡಿಎಸ್ ಪಕ್ಷದ ನಾಯಕರಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಲು ಆಹ್ವಾನ ಇರಲಿಲ್ಲ ಎಂಬ ವಿಚಾರವನ್ನು ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮೈತ್ರಿ ಕಿತ್ತಾಟ ಮತ್ತೊಮೆ ಬಹಿರಂಗಗೊಂಡಿದೆ.
