Friday, November 22, 2024
Homeರಾಜ್ಯಸುಳ್ಳಿನ ಕಂತೆಗಳ ಸಂಚಿನ ವಿಫಲ ಯತ್ನ: ಎಚ್‍ಡಿಕೆಗೆ ಸಿಎಂ ತಿರುಗೇಟು

ಸುಳ್ಳಿನ ಕಂತೆಗಳ ಸಂಚಿನ ವಿಫಲ ಯತ್ನ: ಎಚ್‍ಡಿಕೆಗೆ ಸಿಎಂ ತಿರುಗೇಟು

ಬೆಂಗಳೂರು,ನ.18- ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪದೇ ಪದೇ ಸುಳ್ಳು ಕತೆಗಳ ಸಂಚು ರೂಪಿಸುವ ವಿಫಲ ಯತ್ನ ನಡೆಸುತ್ತಿದ್ದಾರೆ. ಸೋಲು, ವೈಫಲ್ಯಗಳಿಂದ ಹತಾಶರಾಗಿರುವ ಅವರು ಹಿಸ್ಟ್ರಿಯಾನಿಕ್ ಪರ್ಸನಾಲಿಟಿ ಡಿಸಾರ್ಡರ್ ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಮೊಬೈಲ್‍ನಲ್ಲಿ ಮಾತನಾಡುವಾಗ ವಿವೇಕಾನಂದ ಎಂಬುವರ ಹೆಸರನ್ನು ಪ್ರಸ್ತಾಪಿಸಿದ್ದರು. ಇದನ್ನು ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ನಡೆದ ಮಾತುಕತೆ ಎಂದು ಕುಮಾರಸ್ವಾಮಿ ಮೊದಲಿನಿಂದಲೂ ಆರೋಪ ಮಾಡುತ್ತಲೇ ಇದ್ದಾರೆ. ನಿನ್ನೆ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಾಗಿದ್ದು ಅದರಲ್ಲಿ ವಿವೇಕಾನಂದ ಎಂಬ ಅಧಿಕಾರಿಯನ್ನು ಮೈಸೂರಿನ ವಿ.ವಿ.ಪುರಂ ಠಾಣೆಗೆ ನಿಯೋಜಿಸಲಾಗಿದೆ. ಅದನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಇಂದು ಸರಣಿ ಟ್ವಿಟ್‍ಗಳ ಮೂಲಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಪ್ರತಿಯಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೀವಮಾನದಲ್ಲಿಯೇ ಮತ್ತೆ ಅಧಿಕಾರ ಕೈಗೆ ಬಾರದು ಎಂಬ ರಾಜಕೀಯ ವಾಸ್ತವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನಿದ್ದೆಗೆಡಿಸಿ ಮಾನಸಿಕ ಸ್ವಾಸ್ತ್ಯವನ್ನು ಕಲಕಿದ ಹಾಗೆ ಕಾಣುತ್ತಿದೆ. ಸುಳ್ಳುಕೋರನೆಂಬ ಅಪಖ್ಯಾತಿಯನ್ನು ಸ್ವಯಂ ತಾನೇ ಸಾಬೀತುಪಡಿಸುವ ಪೈಪೋಟಿಗೆ ಬಿದ್ದಿರುವ ಈ ಮಾಜಿಮುಖ್ಯಮಂತ್ರಿ ಇಂದು ಬೆಳ್ಳಂಬೆಳಗೆ ಎದ್ದು ಮತ್ತೊಂದಷ್ಟು ಸುಳ್ಳುಗಳನ್ನು ಉದುರಿಸಿದ್ದು ನೋಡಿದರೆ ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿದ್ದು ಸ್ಪಷ್ಟವಾಗಿದೆ. ಯಾರಾದರೂ ಹಿತೈಷಿಗಳು ಇವರಿಗೆ ಸರಿಯಾದ ಚಿಕಿತ್ಸೆಗೆ ವ್ಯವಸ್ಥೆ ಮಾಡಬಾರದೇ ಎಂದು ಮರುಕ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಶಮಿ ಹುಟ್ಟೂರಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

ಮಾಜಿ ಶಾಸಕ ಡಾ.ಯತೀಂದ್ರ ಅವರ ಜೊತೆಗಿನ ನನ್ನ ಸಂಭಾಷಣೆ ವರುಣ ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಂಬಂಧಪಟ್ಟಿದ್ದು ಎನ್ನುವುದನ್ನು ದಾಖಲೆ ಸಮೇತ ಸಾಬೀತುಪಡಿಸಿದ್ದರೂ ಹೆಚ್.ಡಿ.ಕುಮಾರಸ್ವಾಮಿ ಇಂದು ಮತ್ತೊಂದು ಸುಳ್ಳನ್ನು ಸೃಷ್ಟಿಸ ಜನತೆಯ ದಾರಿ ತಪ್ಪಿಸಲು ಹೆಣಗಾಡಿದ್ದಾರೆ. ನಮ್ಮ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿರುವ ವಿವೇಕಾನಂದ ಅವರು ಮೈಸೂರು ತಾಲೂಕಿನ ಬಿಇಒ ಎನ್ನುವುದು ಸ್ಪಷ್ಟವಾಗಿದ್ದರೂ ಯಾವುದೋ ವರ್ಗಾವಣೆಯ ಪಟ್ಟಿಯಲ್ಲಿನ ವಿವೇಕಾನಂದ ಎಂಬ ಅಧಿಕಾರಿಯ ಹೆಸರು ಹುಡುಕಿ ತನ್ನ ಸುಳ್ಳಿಗೆ ಸಾಕ್ಷಿ ನೀಡುವ ಹತಾಶ ಪ್ರಯತ್ನ ಮಾಡಿದ್ದಾರೆ. ಇದನ್ನು ಮಾನಸಿಕ ಅಸ್ವಸ್ಥತೆ ಎನ್ನದೆ ಬೇರೆ ಏನು ಹೇಳಲು ಸಾಧ್ಯ?

ರಾಜ್ಯದಲ್ಲಿ ಕುಮಾರಸ್ವಾಮಿ ಎಂಬ ಹೆಸರಿನವರು ಸಾವಿರಾರು ಮಂದಿ ಇದ್ದಾರೆ. ಅವರಲ್ಲಿಯೂ ಒಂದಷ್ಟು ಪಕ್ಕಾ ಕ್ರಿಮಿನಲ್ ಗಳೂ ಇದ್ದಾರೆ. ಹೆಸರಿನ ಕಾರಣಕ್ಕಾಗಿ ಅವರೆಲ್ಲರ ಪಾಪಕರ್ಮಗಳ ಹೊರೆಯನ್ನು ಹೆಚ್.ಡಿ.ಕುಮಾರಸ್ವಾಮಿಯವರ ತಲೆ ಮೇಲೆ ಹೊರಿಸಲಿಕ್ಕೆ ಆಗುತ್ತದೆಯೇ, ಚೆಕ್ ಬೌನ್ಸ್ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಶಿಕ್ಷೆಗೆ ಗುರಿಯಾಗಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿಗೆ ಶಿಕ್ಷೆಯಾಗಿದೆ ಎಂದು ನಾವು ಹೇಳಿದ್ದೇವೆಯೇ? ಎಲ್ಲಿದಿಯಪ್ಪಾ ನಿಖಿಲ್ ಎಂದು ಸಾರ್ವಜನಿಕ ಸಭೆಯಲ್ಲಿ ಕುಮಾರಸ್ವಾಮಿ ಕೂಗಿದಾಗ ಅಲ್ಲಿ ಎಷ್ಟು ಮಂದಿ ಆ ಹೆಸರಿನವರಿದ್ದರೋ ಏನೋ? ಓಗೊಟ್ಟಿದ್ದು ಇವರ ಮಗ ಮಾತ್ರ ಅಲ್ಲವೇ? ಉಳಿದವರು ಓಗೊಟ್ಟಿದ್ದರೂ ಅವರನ್ನು ಮಕ್ಕಳು ಎಂದು ಇವರು ಒಪ್ಪಿಕೊಳ್ಳುತ್ತಿದ್ದರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಒಬ್ಬ ಜವಾಬ್ದಾರಿಯುತ ರಾಜಕೀಯ ನಾಯಕನಾಗಿ ಕುಮಾರಸ್ವಾಮಿಯವರು ವಿಶ್ವಾಸಾರ್ಹ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕೇ ಹೊರತು ತಾವೇ ಸೃಷ್ಟಿಸಿರುವ ಸುಳ್ಳಿನ ಕಂತೆಗಳನ್ನಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೊತೆಗೆ ರಾಜಕೀಯವಾಗಿ ನನಗೆ ಭಿನ್ನಾಭಿಪ್ರಾಯಗಳಿವೆ. ಆದರೆ ಅವರೆಂದೂ ಈ ರೀತಿಯ ಸಡಿಲ ಮಾತುಗಳನ್ನು ಆಡಿಲ್ಲ. ಕುಮಾರಸ್ವಾಮಿಯವರು ಕನಿಷ್ಠ ಅವರ ಅಣ್ಣ ಹೆಚ್.ಡಿ.ರೇವಣ್ಣ ಅವರಿಂದಾದರೂ ಒಂದಿಷ್ಟು ರಾಜಕೀಯ ನಡವಳಿಕೆಯನ್ನು ಕಲಿಯಬಾರದಾ?

ಜವಾಬ್ದಾರಿಯುತ ರಾಜಕೀಯ ನಾಯಕರಾಗಿ ಸತ್ಯಗಳನ್ನು ಪ್ರಸ್ತುತಪಡಿಸಬೇಕು, ಪಿತೂರಿ ಸಿದ್ಧಾಂತಗಳನ್ನಲ್ಲ. ಕುಮಾರಸ್ವಾಮಿಯವರ ಈ ಸರಣಿ ವಿಫಲ ಹತಾಶ ಪ್ರಯತ್ನಗಳು ಅವರ ಬೇಜವಾಬ್ದಾರಿಯನ್ನು ತೋರಿಸುತ್ತವೆ. ದುಃಖಕರವೆಂದರೆ ಜನರ ಗಮನ ಸೆಳೆಯುವುದಕ್ಕಾಗಿ ಅವರು ಮತ್ತಷ್ಟು ಅಳಲು ಮುಂದುವರೆಸಿದ್ದಾರೆ. ಸುಳ್ಳು ನಿರೂಪಣೆಗಳ ಮೂಲಕ ಸಮಯವನ್ನು ವ್ಯರ್ಥ ಮಾಡುವ ಬದಲು, ತಮ್ಮ ಮೈತ್ರಿ ಪಾಲುದಾರರೊಂದಿಗೆ ಮಾತನಾಡಿ ವಿವಿಧ ವಿಷಯಗಳಲ್ಲಿ ಕರ್ನಾಟಕಕ್ಕೆ ನ್ಯಾಯ ದೊರೆಕಿಸುವ ಪ್ರಯತ್ನ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಡಾ.ಯತೀಂದ್ರ ವಿರುದ್ದ ತಾನು ಮಾಡಿರುವ ಆರೋಪ ಸುಳ್ಳು ಎನ್ನುವುದು ಹೆಚ್.ಡಿ.ಕುಮಾರಸ್ವಾಮಿವಯರಿಗೆ ಖಂಡಿತ ಮನವರಿಕೆ ಆಗಿದೆ. ಈಗಲೂ ಕಾಲ ಮಿಂಚಿಲ್ಲ. ತಪ್ಪನ್ನು ಒಪ್ಪಿಕೊಂಡರೆ ಯಾರೂ ಸಣ್ಣವರಾಗುವುದಿಲ್ಲ. ಒಂದು ಸುಳ್ಳನ್ನು ಸಮರ್ಥಿಸಲು ನೂರು ಸುಳ್ಳುಗಳನ್ನು ಹೇಳುವುದರ ಬದಲಿಗೆ ಮಾಡಿದ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳುವುದು ಉತ್ತಮ ನಡೆ. ಆ ಸದ್ಬುದ್ದಿ ಅವರಿಗೆ ಬರಲಿ ಎಂದು ಹಾರೈಸುತ್ತೇನೆ.

RELATED ARTICLES

Latest News