ಬೆಂಗಳೂರು, ಫೆ.13-ಚಿನಿವಾರ ಪೇಟೆಯಲ್ಲಿ ಮತ್ತೆ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಂಡಿವೆ. ಬೆಳ್ಳಿ ಪ್ರತಿ ಕೆ.ಜಿ.ಗೆ 15 ಸಾವಿರ ರೂಪಾಯಿ ಇಳಿಕೆಯಾಗಿದ್ದರೆ, 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 262 ರೂ. ಕಡಿಮೆಯಾಗಿದೆ.
ಫೆ.7ರಿಂದ ನಿರಂತರ ಏರಿಕೆಯಾಗಿದ್ದ ಚಿನ್ನವು ನಿನ್ನೆಯಿಂದ ಇಳಿಮುಖವಾಗಿದೆ. 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ನಿನ್ನೆ 120 ರೂ. ಹಾಗೂ ಇಂದು 262 ರೂ. ಕಡಿಮೆಯಾಗಿದೆ. 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ನಿನ್ನೆ 110 ರೂ. ಹಾಗೂ ಇಂದು 240 ರೂ. ಇಳಿಕೆಯಾಗಿದೆ. ಇದರಿಂದ 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂ 15,578 ರೂ. ಹಾಗೂ 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 14,280ರೂ.ಗೆ ಕುಸಿತವಾಗಿದೆ.
ಅದೇ ರೀತಿ 18 ಕ್ಯಾರೆಟ್‌ನ ಆಭರಣ ಚಿನ್ನ ಪ್ರತಿ ಗ್ರಾಂಗೆ 196 ರೂ. ಕಡಿಮೆಯಾಗಿದೆ. 11,684 ರೂ.ಗೆ ತಲುಪಿದೆ.ನಾಗಾಲೋಟದಲ್ಲಿ ಏರಿಳಿತವಾಗುತ್ತಿರುವ ಬೆಳ್ಳಿಯು ಇಂದು ಕುಸಿತವಾಗಿದ್ದು, ಪ್ರತಿ ಕೆ.ಜಿ.ಗೆ 15 ಸಾವಿರ ರೂ. ನಷ್ಟು ಇಳಿಕೆಯಾಗಿ 2.80 ಲಕ್ಷ ರೂ.ನಷ್ಟಿದೆ. ಫೆ.7ರಂದು ರಂದು 10 ಸಾವಿರ ರೂ. ಏರಿಕೆಯಾಗಿತ್ತು. ಮತ್ತು ಫೆ.9ರಂದ 15 ಸಾವಿರ ರೂ. ಹಾಗೂ ನಿನ್ನೆ ಐದು ಸಾವಿರ ರೂ. ನಷ್ಟು ಏರಿಕೆಯಾಗಿತ್ತು. ಫೆ.10ರಂದು ಮಾತ್ರ 10 ಸಾವಿರ ರೂ. ನಷ್ಟು ಇಳಿಕೆಯಾಗಿತ್ತು.
ಈಗಾಗಲೇ ಚಿನ್ನ ಮತ್ತು ಬೆಳ್ಳಿ ದರಗಳು ಗರಿಷ್ಠ ದಾಖಲೆ ತಲುಪಿದ್ದು, ಗ್ರಾಹಕರ ಪಾಲಿಗೆ ತುಟ್ಟಿಯಾಗಿವೆ. ಸುರಕ್ಷತೆ ದೃಷ್ಟಿಯಿಂದ ಹೂಡಿಕೆದಾರರು ಹೆಚ್ಚು ಬಂಡವಾಳ ತೊಡಗಿಸುತ್ತಾರೆ. ಈಗಾಗಲೇ ಮದುವೆಗಳು ಪ್ರಾರಂಭವಾಗಿರುವುದರಿಂದ ಆಭರಣ ಖರೀದಿಸುವವರಿಗೆ ದುಬಾರಿಯಾಗಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಬದಲಾವಣೆಗಳಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲೂ ವ್ಯತ್ಯಾಸಗಳಾಗುತ್ತಿವೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ. ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಏರಿಳಿತಗಳು ಸಹಜವಾದರೂ ದೀರ್ಘಾವಧಿಯಲ್ಲಿ ಭಾರಿ ಪ್ರಮಾಣದ ಕುಸಿತವಾಗುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ.
