ಬೆಂಗಳೂರು, ಫೆ.13- ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಆಸೆಯನ್ನು ಜೀವಂತ ಉಳಿಸಿಕೊಂಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಭೇಟಿ ಬಳಿಕ ಆತ್ಮವಿಶ್ವಾಸ ಹೆಚ್ಚಳವಾದಂತಿದೆ ಎಂಬುದಕ್ಕೆ ಪ್ರತಿಕ್ರಿಯಿಸಿದರು. ಶ್ರಮಕ್ಕೆ ಫಲ ಯಾವತ್ತೂ ಇದೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ ಎಂದರು.
ದೆಹಲಿಯಲ್ಲಿ ಹೈಕಮಾಂಡ್ ಕೆಲ ವರಿಷ್ಠ ನಾಯಕರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದು, ನಾಯಕತ್ವ ಬದಲಾವಣೆ ವಿಚಾರ ಚರ್ಚೆ ನಡೆಸಿದ್ದಾರೆ. ಆದರೆ ಅದು ಸಕಾರಾತಕ ಫಲ ನೀಡಿಲ್ಲ ಎಂದು ಹೇಳಲಾಗಿತ್ತು. ಅದಕ್ಕೆ ಮತ್ತೆ ಮುಗುಮಾಗಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್ ಮುಂದೆ ತಮಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿರುವಂತೆ ಕಂಡು ಬಂದಿದೆ.
ನೊಣವಿನಕರೆಗೆ ಭೇಟಿ ನೀಡುವ ಸಂಬಂಧ ಪಟ್ಟಂತೆ ಸ್ಪಷ್ಟನೆ ನೀಡಿರುವ ಅವರು, ಅಲ್ಲಿ ಅಜ್ಜಯ್ಯನ ಜಾತ್ರೆ ಇದೆ. ಪ್ರತಿ ವರ್ಷವೂ ಹೋಗುತ್ತೇನೆ. ಈ ವರ್ಷವೂ ಹೋಗಿ ಅರ್ಧ ಗಂಟೆ ಇದ್ದು, ನಮಸ್ಕಾರ ಮಾಡಿ ಬರುತ್ತೆನೆ ಎಂದಿದ್ದಾರೆ.
ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜ್ ಬಂಧನದ ಬಗ್ಗೆ ನನಗೆ ಮಾಹಿತಿ ಇಲ್ಲ. ಅದನ್ನೆಲ್ಲಾ ಗೃಹ ಸಚಿವರು ನೋಡಿಕೊಳ್ಳುತ್ತಾರೆ. ನಾನು ಪತ್ರಿಕೆಗಳಲ್ಲಿ ಓದಿದ್ದು ಬಿಟ್ಟರೆ ಹೆಚ್ಚಿನ ವಿಚಾರ ಗೊತ್ತಿಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಂದಿಗೆ ಸಾವಿರ ದಿನ ತುಂಬಿದೆ. ನಾಳೆ ಹಾವೇರಿಯಲ್ಲಿ ಭೂಮಿ ಗ್ಯಾರಂಟಿ ಜಾರಿಗೊಳಿಸುತ್ತಿದ್ದೇವೆ. ಸಹಸ್ರ ದಿನಗಳ ಸಂಭ್ರಮವನ್ನು ಜನರ ಜೊತೆ ಹಂಚಿಕೊಳ್ಳುತ್ತೆವೆ ಎಂದರು.
ಶಾಸಕರ ವಿದೇಶ ಪ್ರವಾಸದ ಕುರಿತು ನಾನೇನೂ ವರದಿ ತೆಗೆದುಕೊಂಡಿಲ್ಲ. ತಿಳಿದುಕೊಳ್ಳಲು ಪ್ರಯತ್ನವನ್ನು ಪಟ್ಟಿಲ್ಲ. ಈ ಬಗ್ಗೆ ಹೈಕಮಾಂಡ್ ನನ್ನ ಜೊತೆ ಮಾತನಾಡಿಲ್ಲ. ಹೋಗುವವರು ಮಾತನಾಡಿಲ್ಲ, ಕಳುಹಿಸುತ್ತಿರುವವರೂ ಮಾತನಾಡಿಲ್ಲ ಎಂದು ಹೇಳಿದರು.
