Homeರಾಜ್ಯಅಣೆಕಟ್ಟುಗಳು ರಾಷ್ಟ್ರದ ಸಮೃದ್ಧಿ ಸ್ತಂಭಗಳು, ಅವುಗಳ ಸುರಕ್ಷತೆಗೆ ಸಂಘಟಿತ ಕ್ರಮ ಅಗತ್ಯ: ಸಿಎಂ

ಅಣೆಕಟ್ಟುಗಳು ರಾಷ್ಟ್ರದ ಸಮೃದ್ಧಿ ಸ್ತಂಭಗಳು, ಅವುಗಳ ಸುರಕ್ಷತೆಗೆ ಸಂಘಟಿತ ಕ್ರಮ ಅಗತ್ಯ: ಸಿಎಂ

Dams are pillars of the nation's prosperity : CM

ಬೆಂಗಳೂರು, ಫೆ.12- ನೀರಿನ ನಿರ್ಣಾಯಕ ಮೂಲಸೌಕರ್ಯಗಳು, ಭಯೋತ್ಪಾದನೆ ಮತ್ತು ಕಾರ್ಯತಂತ್ರದ ವಿಧ್ವಂಸಕತೆಗೆ ತುತ್ತಾಗುವ ಸಾಧ್ಯತೆ ಇರುವುದರಿಂದ, ಅದನ್ನು ತಡೆಯಲು ನಿರಂತರ ಎಚ್ಚರಿಕೆ ಮತ್ತು ಸಂಘಟಿತ ಗುಪ್ತಚರ ಕಾರ್ಯವಿಧಾನಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಜೆ.ಟಾಟಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜಲಾಶಯಗಳಿಂದ ಮೀಥೇನ್‌ ಅನಿಲ ಹೊರಬರುತ್ತಿರುವುದನ್ನು ಗಮನಿಸಿ, ಸುಸ್ಥಿರ ಮತ್ತು ಪರಿಸರ ಹಾನಿಯಾಗದಂತಹ ಜವಾಬ್ದಾರಿಯುತ ವ್ಯವಸ್ಥೆಯನ್ನು ಭವಿಷ್ಯದ ಅಣೆಕಟ್ಟು ಯೋಜನೆಗಳಲ್ಲಿ ಅಗತ್ಯವಾಗಿ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.

ಬೃಹತ್‌ ಯೋಜನೆಗಳಿಂದಾಗಿ ಜನರ ಸ್ಥಳಾಂತರ ಅನಿವಾರ್ಯವಾದ ಕಾರಣ, ಸಾಮಾಜಿಕ ಸಮಾನತೆಯನ್ನು ಆಧರಿಸಿದ ಪಾರದರ್ಶಕ, ಮಾನವೀಯ ಮತ್ತು ನ್ಯಾಯಯುತವಾದ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಪ್ರಪಂಚದೆಲ್ಲೆಡೆ ನೀರಿನ ಕೊರತೆ ಹೆಚ್ಚಿರುವ ಸಂದರ್ಭದಲ್ಲಿ, ಅಂತರ್‌ ರಾಜ್ಯ ಮತ್ತು ಅಂತರ್‌ ದೇಶೀಯ ನದಿ ನಿರ್ವಹಣೆಯಲ್ಲಿ ಸಹಕಾರ, ಮಾಹಿತಿ ಹಂಚಿಕೆ ಮತ್ತು ರಾಜತಾಂತ್ರಿಕವಾಗಿ ಪೂರಕವಾದ ಕ್ರಮಗಳು ತುಂಬಾ ಅಗತ್ಯವಾಗಿವೆ ಎಂದಿದ್ದಾರೆ.

ವಿವಿಧ ಆಯಾಮಗಳಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ನಾವು ವೈಜ್ಞಾನಿಕವಾದ, ಸಂಸ್ಥೆಗಳ ಬಲವರ್ಧನೆಯಿಂದ ರೂಪುಗೊಂಡ ಸಮಗ್ರ ಪರಿಹಾರವನ್ನು ರೂಪಿಸಬೇಕು ಮತ್ತು ಅವುಗಳು ಸುರಕ್ಷತೆ, ಸುಸ್ಥಿರತೆ ಮತ್ತು ಹಂಚಿಕೊಂಡ ಹೊಣೆಗಾರಿಕೆಯ ದೂರದೃಷ್ಟಿಯನ್ನು ಹೊಂದಿರಬೇಕು ಎಂದು ಪ್ರತಿಪಾದಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯಮಗಳ ಪಾಲನೆಗೆ ಸೀಮಿತವಾಗಿಸಿಕೊಳ್ಳದೇ, ನಿಯಮಿತ ತಪಾಸಣೆ, ಸುರಕ್ಷತಾ ಲೆಕ್ಕಪರಿಶೋಧನೆ, ತುರ್ತು ಕ್ರಿಯಾ ಯೋಜನೆಗಳನ್ನು ಅಪಾಯ ನಿರ್ವಹಣೆಯ ಸಾಧನಗಳಂತೆ ಬಳಸುವ ಸಮಗ್ರ ಸಂಸ್ಕೃತಿಯನ್ನು ರೂಪಿಸಬೇಕು. ನಿಯಂತ್ರಣಾ ಮತ್ತು ತಾಂತ್ರಿಕ ಸಂಸ್ಥೆಗಳು ಅಪಾಯಗಳನ್ನಾಧರಿಸಿದ ನಿರ್ಣಯಿಸುವ ವ್ಯವಸ್ಥೆಗಳನ್ನು ಸ್ಥಾಪಿಸಬೇಕು.

ಪಕರಣಗಳ ವ್ಯವಸ್ಥೆಗಳು, ದೂರಸಂವೇದಿ ತಂತ್ರಜ್ಞಾನ, ರಚನೆಗಳ ಸ್ಥಿತಿಗಳನ್ನು ಸೂಚಿಸುವ ವ್ಯವಸ್ಥೆಗಳಿಂದ ಬರುವ ದತ್ತಾಂಶವನ್ನು ನೈಜ ಸಮಯದ ಮಾಹಿತಿ ಫಲಕಗಳಲ್ಲಿ ಅಳವಡಿಸಿಕೊಳ್ಳಬೇಕು. ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು, ಸಂಯೋಜಿತ ವ್ಯವಸ್ಥೆಗಳ ಮೂಲಕ ಹವಾಮಾನ ವೈಪರೀತ್ಯ ಮತ್ತು ಹಳೆಯ ಮೂಲಸೌಕರ್ಯದಿಂದ ಉದ್ಭವಿಸುವ ಸಂಕೀರ್ಣ ಅಪಾಯಗಳನ್ನು ಮುಂಚಿತವಾಗಿಯೇ ಗುರುತಿಸಬೇಕು. ನಾಲ್ಕನೆಯದಾಗಿ, ಹಣಕಾಸು ಸಂಸ್ಥೆಗಳು ಮತ್ತು ಅಭಿವೃದ್ಧಿ ಪಾಲುದಾರರು, ಸಾಂದರ್ಭಿಕ ದುರಸ್ತಿಕಾರ್ಯ ಕೈಗೊಳ್ಳುವುದರ ಬದಲು ದೀರ್ಘಾವಧಿಯ, ಆಧುನಿಕ, ಸುಸ್ಥಿರತೆ, ಹೂಳು ನಿರ್ವಹಣೆ ಯನ್ನೊಳಗೊಂಡ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಸ್ಥಳೀಯ ಆಡಳಿತಗಳು ಮತ್ತು ಸಮುದಾಯಗಳಿಗೆ ಜಾಗೃತ ಹಾಗೂ ಸನ್ನದ್ಧರಾಗಿರಲು ಶಕ್ತಿ ತುಂಬಬೇಕು ಎಂದು ಐದು ಸಲಹೆಗಳನ್ನು ಮುಖ್ಯಮಂತ್ರಿಯವರು ನೀಡಿದ್ದಾರೆ.

ನೀತಿ, ವಿಜ್ಞಾನ, ಎಂಜಿನಿಯರಿಂಗ್‌, ಹಣಕಾಸು ಮತ್ತು ಸಮುದಾಯದ ಪಾಲುದಾರಿಕೆಗಳು ಸಮೀಕರಿಸಿದಾಗ ನಮ್ಮ ಅಣೆಕಟ್ಟುಗಳು ದುರ್ಬಲತೆಯ ಮೂಲಗಳಾಗಿರದೆ, ರಾಷ್ಟ್ರದ ಸಮೃದ್ಧಿ ಮತ್ತು ವಿಶ್ವಾಸಾರ್ಹ ಸ್ತಂಭಗಳಾಗಿ ಉಳಿಯುತ್ತವೆ ಎಂಬ ಭರವಸೆಯಿದೆ. ಪ್ರಗತಿಪರ ಭಾರತವನ್ನು ನಿರ್ಮಿಸುವ ನಮ ಆಶಯದತ್ತ ಮುನ್ನಡೆಯುತ್ತಾ, ಜಲ ನಿರ್ವಹಣೆಯಲ್ಲಿ ಸಹಕಾರ ನೀಡಲು ಕರ್ನಾಟಕ ಬದ್ಧವಾಗಿದೆ. ನೀರು ರಾಜಕೀಯ ಗಡಿಗಳನ್ನು ಗುರುತಿಸುವುದಿಲ್ಲ ಅಂತೆಯೇ ಸುರಕ್ಷತಾ ಮಾನದಂಡಗಳೂ ಗಡಿಗಳನ್ನು ಗುರುತಿಸಬಾರದು. ನೀರಿನ ವಿಷಯದಲ್ಲಿ ರಾಜಕಾರಣಕ್ಕೂ ಮೀರಿದ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವ ಬದ್ಧತೆಯನ್ನು ಪ್ರದರ್ಶಿಸಬೇಕಿದೆ ಎಂದಿದ್ದಾರೆ.
ನಾವೆಷ್ಟು ಎತ್ತರದ ರಚನೆಗಳನ್ನು ನಿರ್ಮಿಸಿದ್ದೇವೆ ಎಂಬುದು ಮುಖ್ಯವಲ್ಲ. ನಾವು ಎಷ್ಟು ಸುರಕ್ಷಿತವಾಗಿ ಅದನ್ನು ಉಳಿಸಿಕೊಂಡಿದ್ದೇವೆ ಎಂಬುದು ಅಭಿವೃದ್ಧಿಯ ಅಳತೆಗೋಲಾಗುತ್ತದೆ. ಈ ವಿಚಾರಗಳೊಂದಿಗೆ, ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತೆ ಸಮೇಳನ 2026 ಅನ್ನು ಉದ್ಘಾಟಿಸಿರುವುದಾಗಿ ಹೇಳಿದರು.

ಸುರಕ್ಷಿತ, ಭದ್ರ, ಸ್ಥಿತಿಸ್ಥಾಪಕವಾದ ನೀರಿನ ಮೂಲಸೌಕರ್ಯದತ್ತ ನಮ ಸಾಮೂಹಿಕ ಪ್ರಯತ್ನದಲ್ಲಿ ಇದು ಒಂದು ಮೈಲಿಗಲ್ಲಾಗಲಿದೆ. ಸಮೃದ್ಧ, ಸಮಾನ ಮತ್ತು ಅಭಿವೃದ್ಧಿ ಹೊಂದಿದ ಭಾರತದತ್ತ ನಮ ಪ್ರಯಾಣದಲ್ಲಿ ಇದು ದಿಕ್ಸೂಚಿಯಾಗಲಿ ಎಂದು ಆಶಿಸಿದ್ದಾರೆ.
ಅಣೆಕಟ್ಟುಗಳು ಕೇವಲ ಕಾಂಕ್ರೀಟ್‌ ಮತ್ತು ಉಕ್ಕಿನ ರಚನೆಗಳಲ್ಲ. ಭಾರತದ ಮೊದಲ ಮತ್ತು ದಾರ್ಶನಿಕ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ಅವರು ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಬಣ್ಣಿಸಿದರು. ಅವು ಸಾಮೂಹಿಕ ಆಕಾಂಕ್ಷೆಯ ಸಾಕಾರರೂಪಗಳಾಗಿವೆ. ಅವು ಕೃಷಿ ಸಮೃದ್ಧಿ ಮತ್ತು ಕೈಗಾರಿಕಾ ಪ್ರಗತಿಯ ಜೀವನಾಡಿಗಳಾಗಿವೆ. ದೇಶದಲ್ಲಿ 6,628 ನಿರ್ದಿಷ್ಟ ಅಣೆಕಟ್ಟೆಗಳಿದ್ದು, ವಿಶ್ವದ ಮೂರನೇ ಅತಿಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿ 231 ಅಣೆಕಟ್ಟೆಗಳಿದ್ದು ದೇಶದಲ್ಲಿ ಆರನೇ ಸ್ಥಾನ ಹೊಂದಿದೆ.

ಮೈಸೂರು ಮಹಾರಾಜರು, ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ನೀರಾವರಿಗೆ ಹೆಚ್ಚಿನ ಬೆಂಬಲ ನೀಡಿದ್ದರು. ಅನಂತರ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಹಾಗೂ ಇತರರು ಭೌಗೋಳಿಕ ಅಭಿವೃದ್ಧಿಗಾಗಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಅಣೆಕಟ್ಟೆಗಳು ನೀರಾವರಿ ಮೂಲವಷ್ಟೆ ಆಗಿಲ್ಲ. ರಾಜ್ಯದಲ್ಲಿ 4800 ಮೇಗಾವ್ಯಾಟ್‌ ಜಲ ವಿದ್ಯುತ್‌ ಸಾಮರ್ಥ್ಯವನ್ನು ಹೊಂದಿವೆ. ನಗರ ಮತ್ತು ಗ್ರಾಮೀಣ ಭಾಗಕ್ಕೆ ಅಗತ್ಯ ನೀರು ಪೂರೈಸುವ ಸಂಗ್ರಹಾಗಾರಗಳಾಗಿವೆ ಎಂದು ವಿವರಿಸಿದರು.

ಕೃಷ್ಣಾ, ಕಾವೇರಿ ಮತ್ತಿತರ ನದಿಗಳು ಅಲ್ಲಿನ ಜಿಲ್ಲೆಗಳಲ್ಲಿ ಕೃಷಿ , ನೀರಿನ ಅಗತ್ಯಗಳು ಮತ್ತು ಜನಜೀವನವನ್ನು ಸುಸ್ಥಿರಗೊಳಿಸಿವೆ. ರಾಜ್ಯದಲ್ಲಿರುವ ಅಣೆಕಟ್ಟೆಗಳಲ್ಲಿ ಶೇಕಡಾ 70ರಷ್ಟು 25 ವರ್ಷಗಳಿಗಿಂತ ಹಳೆಯವಾಗಿವೆ. ಇವುಗಳ ವ್ಯವಸ್ಥಿತ ಸುರಕ್ಷತಾ ಮೌಲ್ಯಮಾಪನ ಆಧುನೀಕರಣ ಮತ್ತು ಅಪಾಯ ಮುನ್ಸೂಚನೆಗಳನ್ನು ಒಳಗೊಂಡ ಕಾರ್ಯಾಚರಣೆಯನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಹವಾಮಾನ ಬದಲಾವಣೆಯಿಂದ ಉಂಟಾಗುವ ನೀರಿನ ವೈಪರೀತ್ಯಗಳು ಎದುರಾಗುತ್ತಿವೆ. ಭೂಕಂಪನದ ಅಪಾಯಗಳು, ಜಲಾಶಯಗಳಲ್ಲಿ ಹೂಳು ಶೇಖರಣೆ, ಹಳೆಯ ಕಟ್ಟಡಗಳ ಮೇಲಿನ ಒತ್ತಡದಂತಹ ಸಂಕೀರ್ಣ ಮತ್ತು ಪರಸ್ಪರ ಸಂಬಂಧಿತ ಅಪಾಯಗಳು ಸೃಷ್ಟಿಯಾಗಿವೆ. ಅಣೆಕಟ್ಟು ಸುರಕ್ಷತೆ ರಾಷ್ಟ್ರೀಯ ಭದ್ರತೆಯ ಅನಿವಾರ್ಯತೆಯಾಗಿದೆ. ಇದು ಒಂದು ಇಲಾಖೆಯ ಜವಾಬ್ದಾರಿ ಎಂಬ ಸೀಮಿತ ಅಭಿಪ್ರಾಯ ಬೇಡ. ಎಲ್ಲರೂ ಪಾಲಿಸಬೇಕಾದ ರಾಷ್ಟ್ರೀಯ ಕರ್ತವ್ಯವಾಗಿದೆ. ಎಲ್ಲಾ ಸಂಸ್ಥೆಗಳು ಸಂಘಟಿತವಾಗಿ ಕೈಜೋಡಿಸಬೇಕಿದೆ ಎಂದಿದ್ದಾರೆ.

ಹವಾಮಾನ ಬದಲಾವಣೆ, ಪ್ರವಾಹಗಳು, ದೀರ್ಘಕಾಲದ ಬರಗಾಲ, ಅನಿರೀಕ್ಷಿತ ನೀರಿನ ಹರಿವು ಸವಾಲುಗಳು ಹಳೆಯ ವಿನ್ಯಾಸವನ್ನು ಪರಿಷ್ಕರಿಸುವಂತೆ ಮಾಡಿವೆ. ಹೂಳು ಶೇಖರಣೆ, ಪರಿಸರದ ಅವನತಿ, ಜಲಾಶಯಗಳಿಂದ ಉಂಟಾಗುವ ಪರಿಸರ ಬದಲಾವಣೆಗಳು ದೀರ್ಘಾವಧಿಯ ನೀರು ಸಂಗ್ರಹ ಸಾಮರ್ಥ್ಯಕ್ಕೆ ಮತ್ತು ನದಿಗಳ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತಿವೆ ಎಂದಿದ್ದಾರೆ.
ಅಣೆಕಟ್ಟೆಗಳನ್ನು ರಾಷ್ಟ್ರೀಯ ಮೂಲಸೌಕರ್ಯ ಭದ್ರತೆಯ ಪ್ರಮುಖ ಅಂಶಗಳಾಗಿ ಪರಿಗಣಿಸಬೇಕಾಗಿದ್ದು, ಡಿಜಿಟಲ್‌ ವ್ಯವಸ್ಥೆ ರಕ್ಷಣೆಯ ಜೊತೆಗೆ ಸೈಬರ್‌ ಸುರಕ್ಷತೆ ಮತ್ತು ತಾಂತ್ರಿಕ ವಿಧ್ವಂಸಕತೆಯಿಂದ ರಕ್ಷಣೆ ಒದಗಿಸುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಅಣೆಕಟ್ಟೆಗಳ ಸುರಕ್ಷೆ ಇಂದು ಜಾಗತಿಕ ಸವಾಲಾಗಿದೆ. ಅನಿರೀಕ್ಷಿತ ಮಳೆ ಮತ್ತು ಪ್ರವಾಹಗಳು ಪರಿಸ್ಥಿತಿಯನ್ನು ಬದಲಾಯಿಸಿವೆ. ಅಣೆಕಟ್ಟೆಯ ಸುರಕ್ಷತೆಭಾರತದಲ್ಲಿ ಶೇ.40ರಷ್ಟು ಕೃಷಿ ಕಾರ್ಮಿಕರು ನೀರಾವರಿ ಸೌಲಭ್ಯಗಳನ್ನು ಅವಲಂಭಿತರಾಗಿದ್ದಾರೆ.ಭಾರತ ಅಣೆಕಟ್ಟೆ ಸುರಕ್ಷತೆಯ ವಿಷಯದಲ್ಲಿ ಜಗತ್ತಿಗೆ ಬೆಳಕಿನ ಮನೆಯಾಗಿದೆ. ವಿಶ್ವಬ್ಯಾಂಕ್‌ ಅಣೆಕಟ್ಟೆ ಸುರಕ್ಷತೆಗೆ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶಿ ತಜ್ಞರೊಂದಿಗೆ ಕೈ ಕುಲುಕಿ ಶುಭ ಹಾರೈಸಿದರು.

RELATED ARTICLES

Latest News