Homeರಾಜ್ಯ6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿ ಗುರಿ : ಕೆ.ಎಚ್‌.ಮುನಿಯಪ್ಪ

6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿ ಗುರಿ : ಕೆ.ಎಚ್‌.ಮುನಿಯಪ್ಪ

6 lakh metric tonnes of millet procurement target: K.H. Muniyappa

ದೇವನಹಳ್ಳಿ, ಫೆ. 13- `ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಅಂದಾಜು 6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಸುವ ಗುರಿ ಹೊಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ದೇವನಹಳ್ಳಿ ಟೌನ್‌ನ ಕುರುಬರದೊಡ್ಡಿ ರಸ್ತೆಯಲ್ಲಿರುವ ಅಕ್ಷರ ದಾಸೋಹ ಕೇಂದ್ರದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ವತಿಯಿಂದ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿ ಖರೀದಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

`ಪ್ರಸಕ್ತ ವರ್ಷ ಒಳ್ಳೆಯ ಬೆಲೆಯನ್ನು ಸರ್ಕಾರ ನಿಗದಿ ಪಡಿಸಿ ರಾಗಿ ಖರೀದಿಸುತ್ತಿದೆ. ರೈತರಿಂದ ನೇರವಾಗಿ ಖರೀದಿಸಿ ಅದರ ಹಣವನ್ನು ಯಾವುದೇ ಮಧ್ಯವರ್ತಿಗೆ ಆಸ್ಪದ ನೀಡದೇ ರೈತರ ಬ್ಯಾಂಕ್‌ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಸಂದಾಯ ಮಾಡಲಾಗುತ್ತದೆ. ಗುಣಮಟ್ಟದ ರಾಗಿ ಪೂರೈಕೆ ಆದಲ್ಲಿ ಮುಂದಿನ ವರ್ಷದಲ್ಲಿ 8 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಸುವ ಗುರಿ ಇಟ್ಟುಕೊಂಡಿದೆ’ ಎಂದರು.

2025-26 ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಪ್ರತಿ ಕ್ವಿಂಟಾಲ್‌ ರಾಗಿಗೆ 4886 ರೂ. ನಿಗದಿ ಪಡಿಸಲಾಗಿದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್‌ ನಂತೆ ಗರಿಷ್ಟ 50 ಕ್ವಿಂಟಾಲ್‌ಗಳನ್ನು ಮೀರದಂತೆ ಉತ್ತಮ ಗುಣಮಟ್ಟದ ರಾಗಿ ಖರೀದಿಸಲಾಗುವುದು. ಪ್ರಸಕ್ತ ಸಾಲಿನ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಎರಡು ಬಾರಿ ಬಯೋಮೆಟ್ರಿಕ್‌ ಬಳಕೆಯಾಗುತ್ತದೆ. ಒಂದು ಬಾರಿ ನೋಂದಣಿ ಸಂದರ್ಭದಲ್ಲಿ ಇನ್ನೊಂದು ರಾಗಿ ಖರೀದಿ ವೇಳೆಯಲ್ಲಿ ಹಾಗಾಗಿ ನೋಂದಾಯಿತ ರೈತರೇ ರಾಗಿ ಖರೀದಿ ಕೇಂದ್ರಗಳಿಗೆ ರಾಗಿ ತರುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.

ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್‌ ಮಾತನಾಡಿ, `ರಾಗಿ ಬೆಳೆ ರೈತರ ಪಾಲಿನ ಸಂಜೀವಿನಿ ಇದ್ದಂತೆ, ರಾಗಿ ಬೆಳೆ ಕಡಿಮೆ ನೀರಿನಲ್ಲೂ ಉತ್ತಮವಾಗಿ ಬೆಳೆಯಬಹುದು. ರೈತರು ರಾಗಿ ಖರೀದಿ ಕೇಂದ್ರಕ್ಕೆ ಗುಣಮಟ್ಟದ ರಾಗಿ ಸರಬರಾಜು ಮಾಡಲು ಆದ್ಯತೆ ನೀಡಬೇಕು’ ಎಂದು ಹೇಳಿದರು.

ಜಿಲ್ಲಾ ಪೋಲಿಸ್‌‍ ವರಿಷ್ಠಾಧಿಕಾರಿ ಚಂದ್ರಕಾಂತ್‌, ತಹಶೀಲ್ದಾರ್‌ ಅನಿಲ್‌, ತಾ.ಪಂ. ಇಒ ಶ್ರೀನಾಥ್‌ಗೌಡ, ಗ್ಯಾರಂಟಿ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಜಗನ್ನಾಥ, ಮುಖಂಡರಾದ ಮಂಜಣ್ಣ, ಪ್ರಸನ್ನ ಉಪಸ್ಥಿತರಿದ್ದರು.

RELATED ARTICLES

Latest News