ಬೆಂಗಳೂರು,ಫೆ.17-ನಿರ್ಧಯಿ ತಾಯಿಯೊಬ್ಬಳು ಆಗ ತಾನೇ ಜನಿಸಿದ ಕರುಳ ಕುಡಿಯನ್ನು ಕಸದ ಗುಡ್ಡೆಗೆ ಬಿಸಾಕಿ ಹೋಗಿದ್ದು, ನವಜಾತು ಶಿಶು ಮೃತಪಟ್ಟಿರುವ ಘಟನೆ ಸುಬ್ರಹಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ಸಂಜೆ 7.50 ರ ಸುಮಾರಿನಲ್ಲಿ ಉತ್ತರಹಳ್ಳಿ ಪೂರ್ಣಪ್ರಜ್ಞಾ ಲೇಔಟ್ ಅಪಾರ್ಟ್‌ಮೆಂಟ್ ಹಿಂಭಾಗದ ಖಾಲಿ ಜಾಗದ ಮೈದಾನದಲ್ಲಿ ಮೂರ್ನಾಲ್ಕು ಮಂದಿ ಹುಡುಗರು ಆಟವಾಡುತ್ತಿದ್ದರು. ಆ ಸಂದರ್ಭದಲ್ಲಿ ಮೈದಾನಲ್ಲಿದ್ದ ಕಸದ ಗುಡ್ಡೆ ಬಳಿ ಮಗು ಸತ್ತಿರುವುದನ್ನು ನೋಡಿ ತಕ್ಷಣ ಸ್ಥಳದಲ್ಲಿದ್ದ ಈಶಾ (22) ಎಂಬ ಯುವಕನಿಗೆ ಹುಡುಗರು ತಿಳಿಸಿದ್ದಾರೆ. ಆತ ನೋಡಿ 112ಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.
ತಕ್ಷಣ ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ನವಜಾತ ಶಿಶು ಮೃತಪಟ್ಟಿರುವುದು ಕಂಡು ಬಂದಿದೆ.ನವಜಾತ ಶಿಶುವನ್ನು ಬಿಸಾಡಿ ಹೋಗಿರುವ ಪೋಷಕರನ್ನು ಪತ್ತೆ ಮಾಡಿ ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆ ಯುವಕ ಸುಬ್ರಹಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನವಜಾತ ಶಿಶುವಿನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಸಬ್‌ಇನ್‌್ಸಪೆಕ್ಟರ್ ಪ್ರಸನ್ನ ಅವರು ಶಿಶುವಿನ ಪೋಷಕರಿಗಾಗಿ ಶೋಧ ಕೈಗೊಂಡಿದ್ದಾರೆ.
