ಬೆಂಗಳೂರು,ಫೆ.17- ಸುಮಾರು ಒಂದೂವರೆ ಕಿಲೋ ಮೀಟರ್ ಬೆನ್ನಟ್ಟಿ ಸರಗಳ್ಳನನ್ನು ಹಿಡಿದ ಪೊಲೀಸ್ ಕಾನ್ಸ್ ಸ್ಟೇಬಲ್ ಹಣಮಂತ ಪುಟಾಣಿ ಅವರ ಕಾರ್ಯಕ್ಷಮತೆಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಶ್ಲಾಘಿಸಿ ಪ್ರಶಂಸನಾ ಪತ್ರ ನೀಡಿದ್ದಾರೆ.
ಫೆ.5 ರಂದು ಸಂಜೆ 7.20 ರ ಸುಮಾರಿನಲ್ಲಿ ದಾಕ್ಷಾಯಿಣಿ ಎಂಬ ಮಹಿಳೆ ಕೆಲಸ ಮುಗಿಸಿಕೊಂಡು ವಿಜಯನಗರದ ಹಂಪಿ ನಗರ 8ನೇ ಮುಖ್ಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು.
ಆ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ಸರಗಳ್ಳ ಅವರ ಕೊರಳಿಗೆ ಕೈಹಾಕಿ 40 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದನು.
ತಕ್ಷಣ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅದೇ ಸಮಯಕ್ಕೆ ಮನೆಯಿಂದ ಕರ್ತವ್ಯಕ್ಕೆ ಹೋಗುತ್ತಿದ್ದ ಸಿಎಆರ್ ಕಾನ್ಸ್ ಸ್ಟೇಬಲ್ ಹಣಮಂತ ಪುಟಾಣಿ ಎಂಬುವವರು ಗಮನಿಸಿ ಸರಗಳ್ಳನ ಬೆನ್ನಟ್ಟಿದ್ದಾರೆ.ಸುಮಾರು ಒಂದೂವರೆ ಕಿಲೋ ಮೀಟರ್ ದೂರದವರೆಗೂ ಚೇಸ್ ಮಾಡಿ ಸರಗಳ್ಳನನ್ನು ಹಿಡಿದು 6 ಲಕ್ಷ ಮೌಲ್ಯದ 40 ಗ್ರಾಂ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ಯಾಮಣ್ಣ ಗಾರ್ಡನ್ ನಿವಾಸಿ ಯಾಗಿರುವ ಆರೋಪಿ ಸೈಯದ್ ಜಾಫರ್ ಅಲಿಯಾಸ್ ಜಾಫರ್ (20) ಎಂಬಾತನನ್ನು ಬಂಧಿಸಿರುವ ಕಾನ್ಸ್ ಸ್ಟೇಬಲ್ ಹಣಮಂತ ಪುಟಾಣಿ ಕಾರ್ಯವನ್ನು ಪತ್ರಿಕಾ ಗೋಷ್ಠಿಯಲ್ಲಿಂದು ಆಯುಕ್ತರು ಶ್ಲಾಘಿಸಿ ಅವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
