ಬೆಂಗಳೂರು,ನ.24- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲಿನ ಸಿಬಿಐ ತನಿಖೆ ಹಿಂಪಡೆದಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ನ್ಯಾಯಲಯದಲ್ಲಿ ಪ್ರಶ್ನೆ ಮಾಡುತ್ತೇನೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್‍ಗೆ ಎರಡು ಪುಟಗಳ ಪತ್ರ ಬರೆದಿರುವ ಯತ್ನಾಳ್, ಸಚಿವ ಸಂಪುಟ ಸಭೆಯಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿರುವ ಕ್ರಮವನ್ನು ವಾಪಸ್ ಪಡೆದಿರುವುದು ಕಾನೂನುಬಾಹಿರ ಎಂದು ಕಿಡಿಕಾರಿದ್ದಾರೆ. ಶಿವಕುಮಾರ್ ಅವರು ಈ ಹಿಂದೆ ಸಿಬಿಐ ತನಿಖೆ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಈಗಾಗಲೇ ವಜಾಗೊಳಿಸಿದೆ. ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, 90 ದಿನದೊಳಗೆ ತನಿಖೆಯನ್ನು ಪೂರ್ಣಗೊಳಿಸಿ ವರದಿ ನೀಡುವಂತೆ ಹೈಕೋರ್ಟ್ ಸೂಚನೆ ಕೊಟ್ಟಿದೆ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ಅವರ ಮೇಲಿನ ಆದಾಯಕ್ಕಿಂತ ಮೀರಿದ ಆಸ್ತಿ ಪ್ರಕರಣದ ಅರ್ಜಿ ವಿಚಾರಣೆಯನ್ನು ಇದೇ 29ರಂದು ಹೈಕೋರ್ಟ್ ದ್ವಿಸದಸ್ಯ ಪೀಠ ವಿಚಾರಣೆ ನಡೆಸಲಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಹಂತದಲ್ಲಿರುವ ಸರ್ಕಾರ ಮೂಗು ತೂರಿಸುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ವಿಷಪೂರಿತ ಹಾವು ಬಿಟ್ಟು ಪತ್ನಿ-ಮಗಳನ್ನು ಕೊಂದ ಕೀಚಕ
ರಾಜ್ಯ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಸರ್ಕಾರದ ಪರವಾಗಿ ವರದಿಯನ್ನು ನೀಡಿದ್ದಾರೆ. ಲೋಕಾಯುಕ್ತ ಇಲ್ಲವೇ ಸ್ಥಳೀಯ ಪೊಲೀಸರಿಂದ ಇದನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವೇ ಇಲ್ಲ. ಏಕೆಂದರೆ ಶಿವಕುಮಾರ್ ಓರ್ವ ಪ್ರಭಾವಿ ರಾಜಕಾರಣಿ. ಹೀಗಾಗಿ ತನಿಖಾಕಾರಿಗಳ ಮೇಲೆ ಡಿ.ಕೆ.ಶಿವಕುಮಾರ್ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರ ಅವರನ್ನು ಸಂಪೂರ್ಣವಾಗಿ ರಕ್ಷಣೆ ಮಾಡುವ ಉದ್ದೇಶದಿಂದ ಕೂಡಿದೆ. ಹೀಗಾಗಿ ನಾನು ನ್ಯಾಯಾಲಯದಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಲಿದ್ದೇನೆ ಎಂದು ಹೇಳಿದರು.
ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಯತ್ನಾಳ್ ಮನವಿ ಮಾಡಿದ್ದಾರೆ.