ಬೆಂಗಳೂರು,ಫೆ.18- ಸಂವಿಧಾನದ ನಾಲ್ಕನೇ ಅಂಗ ಎನಿಸಿದ ಮಾಧ್ಯಮವನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರದಿಂದ ನಡೆದಿದೆಯೇ ಎಂಬ ಗುಮಾನಿ ಎದ್ದಿದೆ.ಏಕೆಂದರೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಹೊರಡಿಸಿರುವ ವಿವಾದಾತಕ ಅಧಿಸೂಚನೆ ಇಂತಹ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಆರ್.ಯದು ಕುಮಾರ್ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ಇನ್ನು ಮುಂದೆ ಮಾಧ್ಯಮದವರು ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಕಟ್ಟಡದಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಮಾತ್ರ ಸಂಬಂಧಪಟ್ಟವರಿಂದ ಸಂದರ್ಶನ ಪಡೆಯಬೇಕೆಂಬ ಸೂಚನೆ ಹೊರಡಿಸಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಯವರು ವಾರ್ತಾ ಇಲಾಖೆಯ ನಿರ್ದೇಶಕರಿಗೆ ಪತ್ರ ರವಾನಿಸಿದೆ. ಈ ಪತ್ರವನ್ನು ವಿಧಾನಸೌಧದ ಉಪ ಪೊಲೀಸ್ ಆಯುಕ್ತರು(ಎಸಿಪಿ) ಕಳುಹಿಸಿಕೊಡಲಾಗಿದ್ದು, ಇನ್ನು ಮುಂದೆ ವಿಧಾನಸೌಧದಲ್ಲಿ ನಿಗದಿಪಡಿಸಿದ ಕಡೆ ಮಾತ್ರ ಸಂಬಂಧಪಟ್ಟವರಿಂದ ಸಂದರ್ಶನ/ಬೈಟ್ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ವಾರ್ತಾ ಮತ್ತು ಪ್ರಚಾರ ಇಲಾಖೆಯು ಶಿಫಾರಸ್ಸು ಮಾಡಿರುವ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ವಿಧಾನಸೌಧದಲ್ಲಿ ಗುರುತಿನ ಚೀಟಿ ವಿತರಿಸಲಾಗುತ್ತದೆ. ಈ ರೀತಿ ಗುರುತಿನ ಚೀಟಿ ಹೊಂದಿರುವ ಎಲ್ಲಾ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳಿಗೆ ಭದ್ರತೆಯ ಹಿತದೃಷ್ಟಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ನಿಗದಿಪಡಿಸಲಾಗಿರುವ ಸ್ಥಳದಲ್ಲಿ ಮಾತ್ರ ಬೈಟ್ ತೆಗೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.
ವಿಧಾನಸೌಧದ ಒಳಪ್ರವೇಶಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಗಣ್ಯ ವ್ಯಕ್ತಿಗಳು ಸೇರಿದಂತೆ ಮತ್ತಿತರರಿಂದ ಮಾಧ್ಯಮದವರು ಬೈಟ್ ತೆಗೆದುಕೊಳ್ಳಲು ಹಿಂಬಾಲಿಸದಂತೆ ಸೂಚನೆ ಕೊಟ್ಟಿದ್ದಾರೆ.
ಎಡೆಮಾಡಿಕೊಟ್ಟ ವಿವಾದ :
ವಾರ್ತಾ ಮತ್ತು ಪ್ರಚಾರ ಇಲಾಖೆಯು ಹೊರಡಿಸಿರುವ ಈ ಪ್ರಕಟಣೆ ಪರೋಕ್ಷವಾಗಿ ಮಾಧ್ಯಮಗಳನ್ನು ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹುನ್ನಾರ ಎಂಬ ಆರೋಪ ಕೇಳಿಬಂದಿದೆ.ಕೆಲ ದಿನಗಳ ಹಿಂದೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲೇ ಕಳ್ಳತನ ನಡೆದಿದ್ದು, ಸರ್ಕಾರಕ್ಕೆ ತೀವ್ರ ಇರಿಸುಮುರಿಸು ಉಂಟು ಮಾಡಿತ್ತು.
ಭಾರೀ ಬಿಗಿಭದ್ರತೆ ಇರುವ ಶಕ್ತಿ ಕೇಂದ್ರದಲ್ಲೇ ಕಳ್ಳತನ ನಡೆದಿದ್ದು, ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಈಗ ಭದ್ರತೆಯ ನೆಪದಲ್ಲಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ವಾರ್ತಾ ಇಲಾಖೆಯ ಮೂಲಕ ಮಾಧ್ಯಮವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿದೆ ಎಂಬ ಆರೋಪ ಕೇಳಿಬಂದಿದೆ.
ಸಾಮಾನ್ಯವಾಗಿ ವಿಧಾನಸೌಧದಲ್ಲಿ ಮಾಧ್ಯಮದವರು ಕೆಂಗಲ್ ಹನುಮಂತಯ್ಯ ಗೇಟ್, ಸಮಿತಿ ಕೊಠಡಿ, ಸಮೇಳನ ಸಭಾಂಗಣ, ಸಚಿವರ ಕೊಠಡಿ ಸೇರಿದಂತೆ ಲಭ್ಯವಿರುವ ಕಡೆ ಸಿಎಂ, ಡಿಸಿಎಂ, ಸಚಿವರು ಹಾಗೂ ಶಾಸಕರು ಸೇರಿದಂತೆ ಮತ್ತಿತರರಿಂದ ಬೈಟ್‌ಗಳನ್ನು ತೆಗೆದುಕೊಳ್ಳುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಹಿಂದೆಯೂ ಹೊರಡಿಸಿದ್ದ ಅಧಿಸೂಚನೆ :
ಸಿದ್ದರಾಮಯ್ಯ ಅವರು ಈ ಹಿಂದೆ 2013-2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆಯೂ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಧಿಸೂಚನೆಯನ್ನು ಹೊರಡಿಸಿದ್ದರು. ವಿಧಾನಸೌಧದ ಬದಲು ವಾರ್ತಾ ಇಲಾಖೆಯಲ್ಲಿ ಸಚಿವರ ಮತ್ತು ಸಂಬಂಧಪಟ್ಟವರು ಪತ್ರಿಕಾಗೋಷ್ಠಿ ನಡೆಸುವಂತೆ ಸೂಚನೆ ಕೊಟ್ಟಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿದ್ದರಿಂದ ಕೊನೆಗೆ ಅಧಿಸೂಚನೆಯನ್ನೇ ಹಿಂಪಡೆಯಲಾಗಿತ್ತು.
ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಮಾತ್ರ ಇಂತಹ ಶಿಷ್ಟಾಚಾರ ಇದೆ. ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅಧಿಕಾರವಧಿಯಲ್ಲಿ ಮಾತ್ರ ವಿಧಾನಸೌಧದಲ್ಲಿ ಮಾಧ್ಯಮದವರು ಬೈಟ್ ತೆಗೆದುಕೊಳ್ಳದಂತೆ ಸಂಪೂರ್ಣವಾಗಿ ನಿರ್ಬಂಧ ಹಾಕಲಾಗಿತ್ತು. ಸಚಿವರ ಪತ್ರಿಕಾಗೋಷ್ಠಿಗಳನ್ನು ವಾರ್ತಾ ಇಲಾಖೆ ಕಚೇರಿಯಲ್ಲಿ ನಡೆಸಲಾಗುತ್ತಿತ್ತು. ಸಂಬಂಧಪಟ್ಟ ಕೆಲಸವಿದ್ದಾಗ ಮಾತ್ರ ಮಾಧ್ಯಮದವರು ವಿಧಾನಸೌಧಕ್ಕೆ ಬರಬೇಕಿತ್ತೇ ಹೊರತು ಕಾರಣವಿಲ್ಲದೆ ಬಾರದಂತೆ ಕಡಿವಾಣ ಹಾಕಲಾಗಿತ್ತು.
