Saturday, April 18, 2026
Homeರಾಜಕೀಯಹೊಸ ಚರ್ಚೆ ಹುಟ್ಟುಹಾಕಿದ ರಾಜಣ್ಣ : ಅಲ್ಪಸಂಖ್ಯಾತರು- ದಲಿತರಿಗೆ ಸಿಎಂ ಸ್ಥಾನ ನೀಡುವಂತೆ ಬೇಡಿಕೆ

ಹೊಸ ಚರ್ಚೆ ಹುಟ್ಟುಹಾಕಿದ ರಾಜಣ್ಣ : ಅಲ್ಪಸಂಖ್ಯಾತರು- ದಲಿತರಿಗೆ ಸಿಎಂ ಸ್ಥಾನ ನೀಡುವಂತೆ ಬೇಡಿಕೆ

K.N. Rajanna demands CM post for minorities and Dalits

ಬೆಂಗಳೂರು, ಫೆ.19- ಅಧಿಕಾರ ಹಂಚಿಕೆಯ ಗೊಂದಲಗಳ ಏರಿಳಿತದ ನಡುವೆ ಮಾಜಿ ಸಚಿವ ಕೆ.ಎನ್‌. ರಾಜಣ್ಣ, ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌‍ ನಲ್ಲಿ ಅವಕಾಶ ನೀಡಬೇಕು ಎಂಬ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.

ರಾಜಣ್ಣ ನೀಡುವ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಕಾಲಕಾಲಕ್ಕೆ ಸಂಚಲನ ಮೂಡಿಸಿವೆ. ಅವರ ಮಾತುಗಳು ಹಲವಾರು ಬಾರಿ ತಿಂಗಳುಗಟ್ಟಲೆ ಚರ್ಚೆಗೆ ಕಾರಣವಾಗಿವೆ. ಈ ಹಿಂದೆ ಜಾತಿವಾರು ಮೂರು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾಗಬೇಕು ಎಂದು ರಾಜಣ್ಣ ಹೇಳಿದ್ದರು. ಅದು ಸುಮಾರು ಆರು ಏಳು ತಿಂಗಳ ಕಾಲ ಚರ್ಚೆಗೆ ಗ್ರಾಸವಾಗಿತ್ತು. ಸೆಪ್ಟೆಂಬರ್‌ ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ ಎಂಬ ಹೇಳಿಕೆ ಈವರೆಗೂ ವಾದ-ಪ್ರತಿವಾದಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ರಾಜಣ್ಣ ಅವರ ಹೇಳಿಕೆಗಳನ್ನು, ಸಿದ್ದರಾಮಯ್ಯ ಅವರ ಅಭಿಪ್ರಾಯಗಳು ಎಂದೇ ಭಾವಿಸಲಾಗುತ್ತಿದೆ. ಸಿದ್ದರಾಮಯ್ಯ ಅವರು ಹೇಳಲಾಗದೆ ಇರುವ ಮಾತುಗಳನ್ನು ರಾಜಣ್ಣ ಮೂಲಕ ಹೇಳಿಸುತ್ತಾರೆ ಎಂಬ ಪ್ರತೀತಿಯೂ ಇದೆ.

ಇತ್ತೀಚಿಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗಂಭೀರ ಚರ್ಚೆ ನಡೆಯುತ್ತಿವೆ. ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡಲು ತಯಾರಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡ ಬಿಟ್ಟು ಕೊಡಲು ಸಿದ್ದರಿಲ್ಲ. 2023 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಗೆಲುವಿಗೆ ತಮ ಪಾತ್ರ ದೊಡ್ಡದಿದೆ ಎಂದು ಪ್ರತಿಪಾದಿಸುತ್ತಿರುವ ಡಿ.ಕೆ.ಶಿವಕುಮಾರ್‌ ಬಾಕಿ ಉಳಿದ ಅವಧಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹೈಕಮಾಂಡ್‌ ಮುಂದೆ ಪಟ್ಟು ಹಿಡಿದಿದ್ದಾರೆ. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಡಿ.ಕೆ.ಶಿವಕುಮಾರ್‌ ಅಸ್ಸಾಂ ವಿಧಾನಸಭೆ ಚುನಾವಣೆಯ ಉಸ್ತುವಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸದ್ಯಕ್ಕೆ ಅಧಿಕಾರ ಹಂಚಿಕೆಯ ಗೊಂದಲಗಳಿಗೆ ತಾತ್ಕಾಲಿಕ ವಿರಾಮ ದೊರೆತಿದೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಅನಿವಾರ್ಯತೆ ಎದುರಾದರೆ ಪರಿಶಿಷ್ಟ ಸಮುದಾಯದ ಮುಖಂಡರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ಸಿದ್ದು ಬೆಂಬಲಿಗರ ಪ್ರತಿಪಾದನೆ. ಹೇಗಾದರೂ ಮಾಡಿ ಡಿ.ಕೆ.ಶಿವಕುಮಾರ್‌ ಅವರಿಗೆ ಅಧಿಕಾರ ತಪ್ಪಿಸುವ ಮೂಲಕ ಪರೋಕ್ಷವಾಗಿ ರಾಜಕೀಯ ಸೇಡು ತೀರಿಸಿಕೊಳ್ಳಲುಒಂದು ಬಣ ಹವಣಿಸುತ್ತಿದೆ. ಅದರ ಆಂತರ್ಯದ ಭಾಗವಾಗಿಯೇ ರಾಜಣ್ಣ ಮತ್ತೆ ಅಖಾಡ ಪ್ರವೇಶಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯಲ್ಲಿ ರಾಜಣ್ಣ, ದಲಿತರು ಮತ್ತು ಅಲ್ಪಸಂಖ್ಯಾತರು ರಾಜ್ಯದಲ್ಲಿ ಅವಕಾಶ ವಂಚಿತರಾಗಿದ್ದಾರೆ ಎಂದು ಹೇಳಿದ್ದಾರೆ.ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯದವರಿಗೆ ಮುಖ್ಯಮಂತ್ರಿಯಾಗುವ ಅವಕಾಶಗಳುಲ ಸಿಕ್ಕಿವೆ. ಹೆಚ್ಚಿನ ಜನಸಂಖ್ಯೆ ಹೊಂದಿರುವ ದಲಿತ ಹಾಗೂ ಅಲ್ಪಸಂಖ್ಯಾತರಿಗೆ ಈವರೆಗೂ ಅವಕಾಶಗಳು ಸಿಕ್ಕಿಲ್ಲ. ಆ ಸಮುದಾಯಗಳು ರಾಜಕೀಯ ಭ್ರಮ ನಿರಶನಕ್ಕೆ ಒಳಗಾದರೆ ಕಾಂಗ್ರೆಸ್‌‍ ಪಕ್ಷಕ್ಕೆ ನಷ್ಟವಾಗಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌‍ ಪಕ್ಷ ಶೋಷಿತರಿಗೆ ಮೊದಲಿನಿಂದಲೂ ಅವಕಾಶ ನೀಡುತ್ತಲೇ ಬಂದಿದೆ. ದೇವರಾಜ್‌ ಅರಸು ಮುಖ್ಯಮಂತ್ರಿಯಾಗುವಾಗ ಅವರ ಹೆಸರನ್ನು ಸೂಚಿಸಲು ವಿಧಾನಸಭೆಯಲ್ಲಿ ಅದೇ ಸಮುದಾಯದ ಮತ್ತೊಬ್ಬ ಶಾಸಕ ಇರಲಿಲ್ಲ. ವೀರಪ್ಪ ಮೊಯ್ಲಿ, ಬಂಗಾರಪ್ಪ ಸೇರಿದಂತೆ ಅತಿ ಹಿಂದುಳಿದ ವರ್ಗಗಳ ಹಲವಾರು ನಾಯಕರಿಗೆ ಕಾಂಗ್ರೆಸ್‌‍ ನಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ ಎಂದಿದ್ದಾರೆ.

ನಾನು ಕಾಂಗ್ರೆಸ್‌‍ ಪಕ್ಷವನ್ನು ಆ ಒಂದು ಸಿಟ್ಟಿನ ಕಾರಣಕ್ಕೆ ಟೀಕೆ ಮಾಡುತ್ತೇನೆ. ಆದರೆ ಸಾಮಾಜಿಕ ನ್ಯಾಯದ ವಿಷಯದಲ್ಲಿ ಕಾಂಗ್ರೆಸ್‌‍ ನಂತೆ ಬದ್ಧತೆ ಬೇರೆ ಯಾವ ಪಕ್ಷಗಳಿಗೂ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಲಿಂಗಾಯಿತರು, ಜೆಡಿಎಸ್‌‍ ಅಧಿಕಾರಕ್ಕೆ ಬಂದರೆ ಒಕ್ಕಲಿಗರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಸಂಪ್ರದಾಯವಿದೆ. ಉಳಿದ ಸಮುದಾಯಗಳು ಏನು ಮಾಡಬೇಕು ಎಂದು ಅಲ್ಪಸಂಖ್ಯಾತರು, ದಲಿತರು, ಬಲಿಜರು ಹಾಗೂ ಕುರುಬ ಸಮುದಾಯದಷ್ಟೇ ಜನಸಂಖ್ಯೆ ಹೊಂದಿರುವ ವಾಲೀಕಿ ಸಮುದಾಯದವರು ಮುಖ್ಯಮಂತ್ರಿ ಏಕೆ ಆಗಬಾರದು ಎಂದು ಪ್ರಶ್ನಿಸಿದ್ದಾರೆ.

ವಾಲ್ಮೀಕಿಗಳು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾರೆ. ಅದು ಬೇರೆ ಮಾತು. ಆದರೆ ಅವರಿಗೂ ಅವಕಾಶಗಳು ಬೇಕು ಎಂದು ರಾಜಣ್ಣ ಹೇಳಿದ್ದಾರೆ.ನಾಯಕತ್ವ ಬದಲಾವಣೆಯ ನಡುವೆ ರಾಜಣ್ಣ ಅವರ ಈ ಹೇಳಿಕೆ ಬಾರಿ ಚರ್ಚೆಗೆ ಕಾರಣವಾಗಿವೆ ಎಂದು ಹೇಳಿದ್ದಾರೆ.

RELATED ARTICLES

Latest News