ಬೆಂಗಳೂರು, ಫೆ.19- ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪಾಲಿಕೆಗಳ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಾಗಿರುವ ಗಂಭೀರ ಲೋಪಗಳನ್ನು ಸರಿಪಡಿಸುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಮುಖೇನ ಆಗ್ರಹಿಸಿದ್ದಾರೆ.
ಎರಡು ದಿನಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರು ಖುದ್ದಾಗಿ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದ್ದರು. ಮುಂದುವರೆದ ಭಾಗವಾಗಿ ಪತ್ರ ಬರೆದಿರುವ ಅವರು ಮತದಾರರ ಪಟ್ಟಿಯನ್ನು ಕ್ರಮಬದ್ಧವಾಗಿ ಬೀದಿ, ಮನೆ ಮತ್ತು ಮತದಾರರವಾರು ನಕ್ಷೀಕರಣ (ಮ್ಯಾಪಿಂಗ್) ಮಾಡುವಂತೆ ಒತ್ತಾಯಿಸಿದ್ದಾರೆ. ಜೊತೆಯಲ್ಲಿ ಈ ಮೊದಲು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪಗಳಿಗೆ ಸಂಬಂಧಪಟ್ಟವರನ್ನು ಹೊಣೆ ಮಾಡುವಂತೆಯೂ ಆಗ್ರಹಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಗಂಭೀರವಾದ ಹಾಗೂ ವ್ಯಾಪಕವಾದ ಲೋಪಗಳು ನಡೆದಿರುವುದು ತಮ ಗಮನಕ್ಕೆ ಬಂದಿದೆ. ಒಂದೇ ಕುಟುಂಬದ ಮತದಾರರನ್ನು ಬೇರೆ ಬೇರೆ ಮತಗಟ್ಟೆಗಳಿಗೆ ಮತ್ತು ವಾರ್ಡ್‌ಗಳಿಗೆ ಸೇರಿಸಲಾಗಿದೆ. ಮನೆಗಳ ಸಂಖ್ಯೆಯಲ್ಲಿ ಹಾಗೂ ಬೀದಿಗಳ ಹೆಸರುಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಕೆಲವು ಕಡೆ ನಕಲಿ ಹೆಸರುಗಳನ್ನು ಸೇರಿಸಲಾಗಿದೆ. ಇನ್ನೂ ಕೆಲವು ಕಡೆ ಮತದಾರರ ಹೆಸರುಗಳೇ ನಾಪತ್ತೆಯಾಗಿವೆ.
ದೀರ್ಘಕಾಲದಿಂದಲೂ ಒಂದೇ ಕಡೆ ನೆಲೆಸಿರುವವರ ಹೆಸರುಗಳು ಮತದಾರರ ಪಟ್ಟಿಯಿಂದ ತಪ್ಪಿ ಹೋಗಿವೆ. ಇನ್ನು ಕೆಲವು ಕಡೆ ಬೇರೆ ವಾರ್ಡ್‌ಗಳಿಗೆ ತಪ್ಪಾಗಿ ಮತದಾರರ ಹೆಸರನ್ನು ಸ್ಥಳಾಂತರಿಸಲಾಗಿದೆ ಎಂದು ದೂರಿದ್ದಾರೆ.
ಕೆಲವು ಮತದಾರರು ಬೇರೆ ಕಡೆ ಸ್ಥಳಾಂತರಗೊಂಡಿದ್ದರೂ ಹಿಂದೆ ಅವರು ವಾಸಿಸುತ್ತಿದ್ದ ಸ್ಥಳದಲ್ಲಿಯೇ ಮುಂದುವರೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ. ಇದು ಚುನಾವಣೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ. ಪಾರದರ್ಶಕ ಹಾಗೂ ಖಾಯಂ ಕ್ರಮಗಳನ್ನು ತೆಗೆದುಕೊಂಡು ಮತದಾರರ ಪಟ್ಟಿಯನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಮತಗಟ್ಟೆವಾರು ಬೀದಿಯನ್ನು ನಿರ್ದಿಷ್ಟವಾಗಿ ಗುರುತಿಸಬೇಕು. ಪ್ರತಿಯೊಂದು ಬೀದಿಗೂ ಸೀಮಿತ ಚೌಕಟ್ಟಿನಲ್ಲಿ ಮನೆಗಳನ್ನು ಸೇರಿಸಬೇಕು. ಪ್ರತಿ ಒಂದು ಮನೆಗೂ ಮತದಾರರನ್ನು ಸ್ಪಷ್ಟವಾಗಿ ಸೇರಿಸಬೇಕು. ಮತದಾರರ ಪಟ್ಟಿಯನ್ನು ನಿರ್ದಿಷ್ಟವಾಗಿ ಗುರುತಿಸಿ ನಕ್ಷೀಕರಣ ಮಾಡಬೇಕು. ನಕಲುಗಳನ್ನು ತಡೆಯಬೇಕು.
ಹಾಗೆಯೇ ಏಕ ಪಕ್ಷಿಯವಾಗಿ ಮತದಾರರ ಹೆಸರುಗಳನ್ನು ಸ್ಥಳಾಂತರಿಸುವುದನ್ನು ತಡೆಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಆಯೋಗ ವಿಶೇಷ ಮತದಾರರ ಪರಿಷ್ಕರಣೆ ಆಂದೋಲನವನ್ನು ಕೈಗೆತ್ತಿಕೊಂಡು ಮತದಾರರಿಗೆ ಸಾಂವಿಧಾನಿಕ ಹಕ್ಕು ವಂಚನೆ ಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ವಿವರಿಸಿದ್ದಾರೆ.
ಬಿಬಿಎಂಪಿ ಬದಲಾವಣೆಯಾಗಿ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಹೊಸದಾಗಿ 5 ಪಾಲಿಕೆಗಳು ರಚನೆಯಾಗಿವೆ. ಅವುಗಳಲ್ಲಿ ವಾರ್ಡ್‌ಗಳ ವಿಂಗಡಣೆ ಹೊಸದಾಗಿ ನಡೆದಿದೆ ಎಂದು ತಿಳಿಸಿದ್ದಾರೆ.
ಕೆಲವು ಕಡೆ ಮತದಾರರ ಪಟ್ಟಿಯಲ್ಲಿ ಒಟ್ಟಾರೆ ಬೀದಿ ಹಾಗೂ ಒಟ್ಟು ರಸ್ತೆಯ ನಿವಾಸಿಗಳ ಹೆಸರುಗಳನ್ನೇ ಕೈ ಬಿಡಲಾಗಿದೆ. ಆಧಾರ್ ಕಾರ್ಡ್ ನಲ್ಲಿರುವ ಫೋಟೋಗಳನ್ನೇ ಮತದಾರರ ಪಟ್ಟಿಗೂ ಎರವಲು ಪಡೆದಿರುವುದು ನಿಯಮ ಉಲ್ಲಂಘನೆಯಾಗಿದೆ. ಇನ್ನೂ ಕೆಲವು ಕಡೆ ಪ್ರಮುಖವಾಗಿ ಮತದಾರರ ಹೆಸರನ್ನು ಬೇರೆ ವಾರ್ಡಿಗೆ ಸ್ಥಳಾಂತರಿಸಲಾಗಿದೆ. ಒಬ್ಬ ಭಿನ್ನ ಲಿಂಗ ನಮೂದಿಸಿ ಒಬ್ಬ ವ್ಯಕ್ತಿಯ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಹೆಸರು ಮತ್ತು ವಾರ್ಡ್ ನಂಬರ್ ಗಳನ್ನು ತಪ್ಪಾಗಿ ನಮೂದಿಸಿರುವ ಹಲವು ಉದಾರಣೆಗಳಿವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
