ಬೆಂಗಳೂರು,ಫೆ.21- ನಗರದಲ್ಲಿ ಪತ್ತೆಯಾದ ಗ್ರೆನೇಡ್ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಅರ್ಷದ್ ಖಾನ್ ಎಂಬಾತನನ್ನು ಎನ್‌ಐಎ ಪೊಲೀಸರು ಬಂಧಿಸಿದ್ದಾರೆ.
2023 ರ ಗ್ರೆನೇಡ್ ಪತ್ತೆ ಪ್ರಕರಣದಲ್ಲಿ ಬಂಧಿತನಾಗಿರುವ ಈತ ಶಂಕಿತ ಉಗ್ರ ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಜುನೈದ್ ಅಹದ್‌ನ ಸ್ನೇಹಿತ. ಸಿಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ ಶಂಕೆ ಮೇರೆಗೆ ಅರ್ಷದ್ ಖಾನ್ ಬಂಧಿಸಿದ್ದರು. ನಂತರ ಆತ ಜಾಮೀನು ಪಡೆದು ಹೊರಗಿದ್ದನು.
ಬಳಿಕ ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿದೆ. ಜಾಮೀನು ಪಡೆದು ಹೊರಗೆ ಬಂದಿದ್ದ ಅರ್ಷದ್ ಖಾನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹಾಗಾಗಿ ಆತನ ಮೇಲೆ ಪ್ರೊಕ್ಲೋಮೇಷನ್ ಜಾರಿಯಾಗಿತ್ತು. ಇದೀಗ ಎನ್‌ಐಎ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ವಿಚಾರಣೆಗೊಳಪಡಿಸಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಈ ನಡುವೆ ಈ ಪ್ರಕರಣದಲ್ಲಿ ಶಂಕಿತ ಉಗ್ರ ಜುನೈದ್ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದು, ಈತನನ್ನು ಹುಡುಕಿಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ ಎನ್‌ಐಎ 5 ಲಕ್ಷ ರೂ. ಬಹುಮಾನ ಘೋಷಿಸಿ ನಗರದ ಹಲವು ಕಡೆಗಳಲ್ಲಿ ಭಿತ್ತಿಪತ್ರಗಳನ್ನು ಲಗತ್ತಿಸಲಾಗಿದೆ.
