Friday, November 22, 2024
Homeರಾಜ್ಯಬಡ್ಡಿ ದಂಧೆಗೆ ಕಡಿವಾಣ ಹಾಕಲು ಕ್ರಮ : ಗೃಹ ಸಚಿವ ಪರಮೇಶ್ವರ್

ಬಡ್ಡಿ ದಂಧೆಗೆ ಕಡಿವಾಣ ಹಾಕಲು ಕ್ರಮ : ಗೃಹ ಸಚಿವ ಪರಮೇಶ್ವರ್

ತುಮಕೂರು, ನ.27- ಬಡ್ಡಿದಂಧೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ವ್ಯವಹಾರಕ್ಕೆ ಕಡಿವಾಣ ಹಾಕಲು ಎಸ್‍ಪಿಗೆ ಸೂಚಿಸಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. ಸದಾಶಿವನಗರದಲ್ಲಿ ಮೂವರು ಮಕ್ಕಳನ್ನು ಸಾಯಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಬಂಧ ಇಂದು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಐದು ಮಂದಿಯ ಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಡಿಮೆ ಹಣಕ್ಕೆ ಐದು ಮಂದಿ ಸಾಯೋದು ಸಾಮಾನ್ಯ ವಿಷಯವಲ್ಲ. ಅಮಾಯಕರಿಗೆ ಸಾಲಕೊಟ್ಟು ಹೆಚ್ಚಿನ ಬಡ್ಡಿ ವಸೂಲಿ ಮಾಡುವುದಲ್ಲದೆ, ಕಿರುಕುಳ ನೀಡಿ ಅವರನ್ನು ನೋಯಿಸಿರುವುದು ಬೇಸರದ ಸಂಗತಿ ಎಂದರು.ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು, ಐದು ಮಂದಿ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು, ಮೀಟರ್ ಬಡ್ಡಿ ದಂಧೆಗೆ ಕಡಿವಾಣಹಾಕಬೇಕು ಎಂದರು.

ಎರಡು ಎಫ್‍ಐಆರ್ ದಾಖಲು: ಮೃತ ಗರೀಬ್‍ಸಾಬ್ ಅವರ ಸಹೋದರ ನೀಡಿದ ದೂರಿನ ಮೇರೆಗೆ ತಿಲಕ್‍ಪಾರ್ಕ್ ಠಾಣೆ ಪೊಲೀಸರು ಎರಡು ಪ್ರಕರಣ ದಾಖಲಿಸಿದ್ದಾರೆ. ಮೊದಲ ಎಫ್‍ಐಆರ್‍ನಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾದರೆ, ಎರಡನೇ ಎಫ್‍ಐಆರ್‍ನಲ್ಲಿ ಬಡ್ಡಿ ದಂಧೆ, ಕಿರುಕುಳ ಪ್ರಕರಣ ದಾಖಲಾಗಿದೆ. ಗರೀಬ್‍ಸಾಬ್ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ತನ್ನ ವ್ಯವಹಾರಕ್ಕಾಗಿ ನೆರೆಮನೆ ನಿವಾಸಿ ಕಲಂದರ್ ಹಾಗೂ ಇತರರು ನನಗೆ ಸಾಲ ಕೊಡಿಸಿ ಮೀಟರ್ ಬಡ್ಡಿ ವಸೂಲಿ ಮಾಡಿ ಕಿರುಕುಳ ನೀಡಿದ್ದಾರೆಂದು ಡೆತ್‍ನೋಟ್‍ನಲ್ಲಿ ಬರೆಯಲಾಗಿದೆ.

ನ್ಯೂಜಿಲ್ಯಾಂಡ್ ಪ್ರಧಾನಿಯಾದ ಕ್ರಿಸ್ಟೋಫರ್ ಲಕ್ಸನ್ ಪ್ರಮಾಣ

ವಶಕ್ಕೆ: ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‍ನೋಟ್‍ನಲ್ಲಿ ನಮೂದಾಗಿದ್ದ ಕಲಂದರ್, ಈತನ ಪುತ್ರ ಶಾಬಾಜ್, ನೆರೆಮನೆ ನಿವಾಸಿ ಶಬಾನಾ, ಈಕೆಯ ಪುತ್ರಿ ಸಾನಿಯಾಳನ್ನು ತಿಲಕ್‍ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಘಟನೆ ವಿವರ: ಮೂಲತಃ ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯವರಾದ ಗರೀಬ್‍ಸಾಬ್ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಮಕೂರಿಗೆ ಕುಟುಂಬದೊಂದಿಗೆ ಬಂದು ಸದಾಶಿವನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಗರೀಬ್‍ಸಾಬ್ ಅವರು ಸದಾಶಿವನಗರದಲ್ಲಿ ಜೀವನೋಪಾಯಕ್ಕಾಗಿ ಕಬಾಬ್ ಅಂಗಡಿ ನಡೆಸುತ್ತಿದ್ದರು. ವ್ಯವಹಾರಕ್ಕಾಗಿ ಈ ನಡುವೆ ಅವರು ಸಾಲ ಮಾಡಿಕೊಂಡಿದ್ದರು.

ಪಡೆದ ಸಾಲಕ್ಕೆ ಬಡ್ಡಿ ಕೊಡುತ್ತಿದ್ದರು, ಈ ನಡುವೆ ಇವರ ಮನೆ ಕೆಳಗೆ ವಾಸವಾಗಿದ್ದ ವ್ಯಕ್ತಿ ಗರೀಬ್ ಕುಟುಂಬದವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದರೆಂದು ಹೇಳಲಾಗಿದೆ. ಒಂದು ಕಡೆ ಸಾಲಬಾದೆ, ಮತ್ತೊಂದೆಡೆ ನೆರೆ ಮನೆಯವರ ಕಿರುಕುಳದಿಂದ ನೊಂದಿದ್ದ ಕುಟುಂಬ ನಿನ್ನೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ. ಅದರಂತೆ ಡೆತ್‍ನೋಟ್ ಹಾಗೂ ಮೊಬೈಲ್‍ನಲ್ಲಿ ವಿಡಿಯೋ ಮಾಡಿ ತಮಗಾಗಿರುವ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ.

ನಂತರ ಗರೀಬ್ ಸಾಬ್ (32), ಪತ್ನಿ ಸುಮಯ್ಯ (30) ರೊಂದಿಗೆ ಸೇರಿ ಮೊದಲು ಮಕ್ಕಳಾದ ಹಾಜೀರಾ (14), ಮಹಮ್ಮದ್ ಶುಬಾನ್(10) ಮತ್ತು ಮೊಹಮ್ಮದ್ ಮುನೀರ್(8)ನನ್ನು ಸಾಯಿಸಿ ನಂತರ ದಂಪತಿ ನೇಣಿಗೆ ಶರಣಾಗಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ತಿಲಕ್‍ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ಥಳದಲ್ಲಿ ದೊರೆತ ಡೆತ್‍ನೋಟ್ ಹಾಗೂ ಮೊಬೈಲ್ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮರಣೋತ್ತರ ಪರೀಕ್ಷೆ: ಇಂದು ಐದು ಮಂದಿಯ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ವಾರಸುದಾರರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು.

RELATED ARTICLES

Latest News