Saturday, May 11, 2024
Homeರಾಜ್ಯಡಿ.1ರಂದು ಬಿ.ವೈ.ವಿಜಯೇಂದ್ರ ದೆಹಲಿ ಪ್ರವಾಸ

ಡಿ.1ರಂದು ಬಿ.ವೈ.ವಿಜಯೇಂದ್ರ ದೆಹಲಿ ಪ್ರವಾಸ

ಬೆಂಗಳೂರು,ನ.27- ಪಕ್ಷದೊಳಗೆ ಉಂಟಾಗಿರುವ ಅಸಮಾಧಾನವನ್ನು ಹೋಗಲಾಡಿಸಲು ಮುಂದಾಗಿರುವ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಡಿ.1ರಂದು ದೆಹಲಿಗೆ ತೆರಳಲಿದ್ದಾರೆ. ವಿಜಯೇಂದ್ರ ಜೊತೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕೂಡ ತೆರಳುತ್ತಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತಿತರರನ್ನು ಭೇಟಿಯಾಗಲಿದ್ದಾರೆ.

ವಿಶೇಷವೆಂದರೆ ಡಿ.7ರಂದು ಬಿಜೆಪಿಯ ಅಸಮಾಧಾನಿತ ಒಂದು ಬಣ ದೆಹಲಿಗೆ ತೆರಳಿ ಕೆಲವು ಬಿಜೆಪಿ ನಾಯಕರ ವಿರುದ್ಧ ದೂರು ನೀಡಲು ಮುಂದಾಗಿರುವ ಬೆನ್ನಲ್ಲೇ ಅದಕ್ಕೂ ಮುನ್ನವೇ ವಿಜಯೇಂದ್ರ ವರಿಷ್ಠರನ್ನು ಭೇಟಿ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

ಮೇಲ್ನೋಟಕ್ಕೆ ಇದೊಂದು ಸೌಹಾರ್ದಯುತ ಭೇಟಿ ಎಂದು ಹೇಳಲಾಗುತ್ತಿದ್ದರೂ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಯ್ಕೆಯಾದ ನಂತರ ಬಿಜೆಪಿಯ ಒಂದು ಬಣ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದೆ.

ಇದು ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಭಿನ್ನಮತವನ್ನು ಪ್ರಾರಂಭದಲ್ಲೇ ಚಿವುಟಿ ಹಾಕಲು ವಿಜಯೇಂದ್ರ ಶತಪ್ರಯತ್ನ ನಡೆಸಿದ್ದಾರೆ. ಅಸಮಾಧಾನಗೊಂಡಿರುವವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸುವ ಪ್ರಯತ್ನ ಮಾಡುತ್ತಿದ್ದರಾದರೂ ಅದು ಕೈಗೂಡಿಲ್ಲ. ಸದ್ಯಕ್ಕೆ ರಮೇಶ್ ಜಾರಕಿಹೊಳಿ, ಅರವಿಂದ ಬೆಲ್ಲದ್ ಮೌನಕ್ಕೆ ಜಾರಿದ್ದರೆ ಸೋಮಣ್ಣ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಸೆಡ್ಡು ಹೊಡೆದಿದ್ದಾರೆ.

ಇದು ಪಕ್ಷದ ಸಂಘಟನೆಗೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಭಿನ್ನಮತೀಯರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕೆಂದು ವರಿಷ್ಠರ ಬಳಿ ಖುದ್ದು ವಿಜಯೇಂದ್ರ ಮನವಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ. ಬಿವೈ ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ತೀವ್ರ ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ, ಅತೃಪ್ತಗೊಂಡಿರುವ ನಾಯಕರ ಒಗ್ಗೂಡಿಸಲು ಮುಂದಾಗಿದ್ದಾರೆ.

ನ್ಯೂಜಿಲ್ಯಾಂಡ್ ಪ್ರಧಾನಿಯಾದ ಕ್ರಿಸ್ಟೋಫರ್ ಲಕ್ಸನ್ ಪ್ರಮಾಣ

ಡಿಸೆಂಬರ್ 7 ಮತ್ತು 9ರ ನಡುವೆ ಯಾವುದೇ ಸಮಯದಲ್ಲಿ ಹೈಕಮಾಂಡ್ ತಮ್ಮನ್ನು ಕರೆಸಿ, ಮಾತುಕತೆ ನಡೆಸುವ ಸಾಧ್ಯತೆಗಳಿರುವುದರಿಂದ ಈ ಸಂದರ್ಭದಲ್ಲಿ ಅತೃಪ್ತ ನಾಯಕರನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಅರವಿಂದ ಲಿಂಬಾವಳಿ, ರಮೇಶ ಜಾರಕಿಹೊಳಿ ಅವರೊಂದಿಗೆ ಹೈಕಮಾಂಡ್ ನಾಯಕರ ಭೇಟಿ ಮಾಡುತ್ತೇನೆ ಎಂದಿದ್ದರು.

ಡಿಸೆಂಬರ್ 6ರಂದು ಗುರುಭವನ ಉದ್ಘಾಟನೆ ಬೆನ್ನಲ್ಲೇ ಮಠದ ಬಳಿ ಸೋಮಣ್ಣ ಅವರು ರ್ಯಾಲಿ ನಡೆಸುತ್ತಿದ್ದಾರೆ. ಈ ವೇಳೆ ವಿಜಯೇಂದ್ರ ನೇಮಕದ ಬಗ್ಗೆ ಮೌನ ಮುರಿಯುತ್ತೇನೆ ಎಂದು ತಿಳಿಸಿದ್ದಾರೆ. ಈ ನಡುವೆ ಸೋಮಣ್ಣ ಅವರಿಗೆ ಹಳೆ ಮೈಸೂರು ಭಾಗದ ವೀರಶೈವ-ಲಿಂಗಾಯತ ನಾಯಕ, ತುಮಕೂರು ಸಂಸದ ಜಿ.ಎಸ್.ಬಸವರಾಜ್ ಅವರ ಬೆಂಬಲವೂ ದೊರೆತಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ತುಮಕೂರಿನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಗೆಲುವು ಸಾಸಲು ಸೋಮಣ್ಣ ನನಗೆ ಸಹಾಯ ಮಾಡಿದ್ದರು. 2024ರಲ್ಲಿ ತುಮಕೂರಿನಿಂದ ಸ್ರ್ಪಧಿಸಲು ಹೈಕಮಾಂಡ್ ಅವರಿಗೆ ಟಿಕೆಟ್ ನೀಡಿದರೆ ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ಈ ನಡುವೆ ಧಾರ್ಮಿಕ ಮುಖಂಡರ ಮೂಲಕ ಬಿಜೆಪಿ ತೊರೆಯದಂತೆ ಸೋಮಣ್ಣ ಅವರ ಮನಸ್ಸು ಪರಿವರ್ತಿಸಲು ವಿರೋಧ ಪಕ್ಷದ ನಾಯಕರಾಗಿರುವ ಆರ್.ಅಶೋಕ್ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಲೋಕಸಭೆ ಚುನಾವಣೆಗೂ ಮುನ್ನಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

RELATED ARTICLES

Latest News