ಬೆಂಗಳೂರು,ನ.28- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲಿನ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಪೂರ್ವಾನುಮತಿಯನ್ನು ಹಿಂಪಡೆದಿರುವ ರಾಜ್ಯ ಸಚಿವ ಸಂಪುಟದ ತೀರ್ಮಾನವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೈಕೋರ್ಟ್‍ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ವಿಶೇಷವೆಂದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಹೈಕೋರ್ಟ್‍ನ ಮುಖ್ಯನ್ಯಾಯಮೂರ್ತಿ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಇದರ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಸಚಿವ ಸಂಪುಟದಲ್ಲಿ ಡಿ.ಕೆ.ಶಿವಕುಮಾರ್ ಮೇಲಿನ ಅಕ್ರಮ ಆಸ್ತಿ ಪ್ರಕರಣವನ್ನು ಸಿಬಿಐ ತನಿಖೆ ವಾಪಸ್ ಪಡೆದಿರುವುದು ಸರ್ಕಾರದ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ತಮ್ಮ ಅರ್ಜಿಯನ್ನು ಸೀಮಿತವಾಗಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿರುವ ಯತ್ನಾಳ್, ಈಗಾಗಲೇ ಪ್ರಕರಣವು ಅಂತಿಮ ಹಂತದಲ್ಲಿದೆ. ಸ್ವತಃ ಸಿಬಿಐ ತನಿಖಾ ತಂಡ 80ರಿಂದ 90ರಷ್ಟು ವಿಚಾರಣೆ ಮುಗಿದಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ಕೊಟ್ಟಿದೆ. ಆದರೆ, ಸಚಿವ ಸಂಪುಟವು ವಿಚಾರಣೆ ಮುಕ್ತಾಯ ಹಂತದಲ್ಲಿರುವಾಗ ಪೂರ್ವಾನುಮತಿಯನ್ನು ವಾಪಸ್‍ಪಡೆದಿರುವುದು ವಿಚಾರಣೆಯನ್ನು ನಿಷಲಗೊಳಿಸುವ ಯತ್ನವಾಗಿದೆ. ಇದು ಕಾನೂನು ಬಾಹಿರವಾಗಿದ್ದು, ತಮ್ಮ ಮೇಲ್ಮನವಿ ಅರ್ಜಿಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.
ಬಿಜೆಪಿ ಅಸಮಾಧಾನಿತರೊಂದಿಗೆ ವರಿಷ್ಠರ ಸಮಾಲೋಚನೆ
ಸಂಪುಟದ ತೀರ್ಮಾನವನ್ನು ನೋಡಿದರೆ ಪ್ರಕರಣವನ್ನು ಮೊಟಕುಗೊಳಿಸುವ ದುರುದ್ದೇಶ ಹೊಂದಿದೆ. ಒಂದು ಬಾರಿ ತನಿಖಾ ಸಂಸ್ಥೆಗೆ ರಾಜ್ಯ ಸರ್ಕಾರ ವಹಿಸಿದ ಮೇಲೆ ಅದನ್ನು ಹಿಂಪಡೆಯುವ ಅಧಿಕಾರ ಯಾವುದೇ ಸರ್ಕಾರಕ್ಕೆ ಇರುವುದಿಲ್ಲ. ಸರ್ಕಾರದ ನಡೆ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಮೇಲ್ಮನವಿಯಲ್ಲಿ ಸಿಕ್ಕಿಂ ಪ್ರಕರಣವನ್ನು ಉಲ್ಲೇಖ ಮಾಡಿರುವ ಯತ್ನಾಳ್, ಅಂದು ಅಲ್ಲಿನ ಸರ್ಕಾರ ಮುಖ್ಯಮಂತ್ರಿ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಬಳಿಕ ಮತ್ತೊಂದು ಸರ್ಕಾರ ಬಂದಾಗ ಪ್ರಕರಣವನ್ನು ಹಿಂಪಡೆಯಿತು.
ಅಂತಿಮವಾಗಿ ಸುಪ್ರೀಂಕೋರ್ಟ್ ಒಂದು ಬಾರಿ ವಿಚಾರಣೆಗೆ ಆದೇಶ ನೀಡಿದ ನಂತರ ಹಿಂಪಡೆಯಲು ಯಾವುದೇ ಸರ್ಕಾರಗಳಿಗೆ ಅವಕಾಶವಿಲ್ಲ ಎಂದು ತೀರ್ಪು ಕೊಟ್ಟಿದೆ. ಇದು ಕೂಡ ಅಕ್ರಮ ಆಸ್ತಿ ಪ್ರಕರಣವಾಗಿರುವುದರಿಂದ ಸಂಪುಟದ ತೀರ್ಮಾನವು ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾಗಿದೆ. ತಮ್ಮ ಮನವಿಯನ್ನು ನ್ಯಾಯಾಲಯ ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ಅವರು ಮನವಿ ಮಾಡಿದ್ದಾರೆ.