ಬೆಂಗಳೂರು, ನ.28- ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಶಿಶುಗಳ ಮಾರಾಟ ಕರಾಳ ದಂಧೆ ಜಾಲವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ಹಣಕಾಸಿನ ತೊಂದರೆ ಮತ್ತು ಮಗುವನ್ನು ಸಾಕಲು ಕಷ್ಟವೆಂದು ಭಾವಿಸಿ ಮಗುವನ್ನು ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಬರುವ ಅಮಾಯಕ ಹೆಂಗಸರನ್ನು ಹಾಗೂ ದುಡಿಮೆ ಇಲ್ಲದ ಹೆಂಗಸ ರನ್ನು ಪುಸಲಾಯಿಸಿ ಗರ್ಭ ಧಾರಣೆಗೆ ಪ್ರಚೋದಿಸಿ ಹೆರುವ ದಂಧೆ ಬೆಳಕಿಗೆ ಬಂದಿದೆ.
ಮದ್ಯವ್ಯಸನಿಯೊಬ್ಬ ಹೇಳಿದ ಸುಳಿವನ್ನಾಧರಿಸಿ ಸಿಸಿಬಿ ಪೊಲೀಸರು ಫೀಲ್ಡ್‍ಗಿಳಿದು ತನಿಖೆ ಕೈಗೊಂಡಾಗ ಶಿಶು ಮಾರಾಟ ಜಾಲದಲ್ಲಿ ವೈದ್ಯರು ಕಿಂಗ್‍ಫಿನ್ ಎನ್ನುವುದು ಗೊತ್ತಾಗಿ ಶಾಕ್ ಆಗಿದ್ದಾರೆ. ಅಸಹಾಯಕ ಮಹಿಳೆಯರಿಂದ ಹುಟ್ಟಿದ ಮಗುವನ್ನು 25ರಿಂದ 30 ಸಾವಿರ ನೀಡಿ ಕಡಿಮೆ ದರಕ್ಕೆ ಖರೀದಿಸಿ ಅವರಿಂದ ಮಗು ಪಡೆದು ಮಕ್ಕಳಿಲ್ಲದ ಶ್ರೀಮಂತ ಕುಟುಂಬಗಳಿಗೆ 8ರಿಂದ 10 ಲಕ್ಷಕ್ಕೆ ಮಗು ಮಾರಾಟ ಮಾಡಿರುವುದು ಸಿಸಿಬಿ ತನಿಖೆಯಿಂದ ಗೊತ್ತಾಗಿದೆ.
ಶಿಶು ಮಾರಾಟ ದಂಧೆಯಲ್ಲಿ ಮಹಿಳೆಯೊಬ್ಬರ ಕೈವಾಡವಿರುವುದು ಪತ್ತೆಯಾಗಿದ್ದು, ಆಕೆ ಅಪಹರಿಸಿದ್ದ 20 ದಿನದ ಗಂಡು ಮಗುವನ್ನು ರಕ್ಷಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಡ ಮಹಿಳೆಯರಿಗೆ ಗರ್ಭಧಾರಣೆ ಮಾಡಿಸಿ ಮಗು ಮಾರಾಟ ಮಾಡುತ್ತಿರುವ ಜಾಲ ನಗರದಲ್ಲಿದೆ ಎಂಬ ಬಗ್ಗೆ ಮದ್ಯವೆಸನಿಯೊಬ್ಬ ಹೇಳಿದ ಸುಳಿವನ್ನಾಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆಗಿಳಿದು 20 ದಿನದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಬಿಜೆಪಿ ಅಸಮಾಧಾನಿತರೊಂದಿಗೆ ವರಿಷ್ಠರ ಸಮಾಲೋಚನೆ
ಗಂಡು ಮಗು ರಕ್ಷಣೆ:
ರಾಜರಾಜೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ದೇವಸ್ಥಾನದ ಬಳಿ ತಮಿಳುನಾಡು ಮೂಲದವರು ಒಂದು ಗಂಡು ಮಗುವನ್ನು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆದರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ದೇವಸ್ಥಾನದ ಬಳಿ ನಿಂತಿದ್ದ ಕೆಂಪು ಬಣ್ಣದ ಸಿಫ್ಟ್ ಕಾರನ್ನು ಪರಿಶೀಲಿಸಿ ಕಾರಿನಲ್ಲಿದ್ದ ತಮಿಳುನಾಡು ಮೂಲದ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 20 ದಿನದ ಗಂಡು ಮಗುವನ್ನು ರಕ್ಷಿಸಿದ್ದಾರೆ.
ಎಂಟು ಮಂದಿ ವಶಕ್ಕೆ:
ಈ ಆರೋಪಿಗಳ ವಿರುದ್ಧ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಳ್ಳಸಾಗಣಿಕೆ ಪ್ರಕರಣ ದಾಖಲಾಗಿರುತ್ತದೆ. ತನಿಖೆ ಮುಂದುವರೆಸಿದ ಸಿಸಿಬಿ ಪೊಲೀಸರು ಪ್ರಕರಣದ ಕಿಂಗ್‍ಫಿನ್ ಆದ ತಮಿಳುನಾಡು ಮೂಲದ ಒಬ್ಬ ಮಹಿಳೆ ಸೇರಿದಂತೆ ಇದುವರೆಗೆ ಎಂಟು ಜನರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದೂವರೆಗೂ 10 ಮಕ್ಕಳನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಅಂಡಾಣು ಮಾರಾಟ:
ಆರೋಪಿಗಳನ್ನು ಕೂಲಂಕುಶವಾಗಿ ವಿಚಾರಣೆ ಮಾಡಿದಾಗ ಇವರು ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಅಕ್ರಮವಾಗಿ ತಮ್ಮ ಅಂಡಾಣುಗಳನ್ನು ಮಾರಾಟ ಮಾಡಿ ಹಣ ಸಂಪಾದಿಸಿರುತ್ತಾರೆ. ಈ ತಂಡದವರು ಬಡ ಮಹಿಳೆಯರನ್ನು ಪುಸಲಾಯಿಸಿ ಅಂಡಾಣು ಮಾರಾಟ ಮಾಡಿಸುವ ಏಜೆಂಟ್‍ಗಳಾಗಿ ಸಹ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಆಸ್ಪತ್ರೆಗಳು ಭಾಗಿ:
ಈ ಮಗು ಮಾರಾಟ ಜಾಲದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಪ್ರತಿಷ್ಠಿತ ವೈದ್ಯರು ಮತ್ತು ಪ್ರತಿಷ್ಠಿತ ಆಸ್ಪತ್ರೆಗಳು ಭಾಗಿಯಾಗಿರುವುದು ತಿಳಿದುಬಂದಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ತಮಿಳುನಾಡಿನ ನಾಲ್ಕು ಆಸ್ಪತ್ರೆಗಳಲ್ಲಿ ಈ ಕೃತ್ಯವೆಸಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ.
ಅಮೆರಿಕ ನೆಲೆಗಳ ಛಾಯಾಚಿತ್ರ ತೆಗೆದಿದೆಯಂತೆ ಉತ್ತರ ಕೊರಿಯಾ ಉಪಗ್ರಹ
ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ಅಪರಾಧ-2 ಉಪಪೊಲೀಸ್ ಆಯುಕ್ತರಾದ ಶ್ರೀನಿವಾಸ್ ಗೌಡ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಧರ್ಮೇಂದ್ರ ಮತ್ತು ಇನ್ಸ್‍ಪೆಕ್ಟರ್‍ಗಳಾದ ಮಹದೇವಸ್ವಾಮಿ, ನಯಾಜ್ ಅಹಮ್ಮದ್ ಅವರನ್ನೊಳಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.