ಬೆಂಗಳೂರು,ಫೆ.26- ಹಣದ ವಿಚಾರವಾಗಿ ಮನಸ್ತಾಪಗೊಂಡು ಚಲನಚಿತ್ರ ನಿರ್ದೇಶಕರೊಬ್ಬರನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿ ಹಣ ಆಭರಣ ದೋಚಿದ್ದ ಕಿರುತೆರೆ ನಟಿ ಸೇರಿದಂತೆ 11 ಮಂದಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಲನಚಿತ್ರ ನಿರ್ದೇಶಕ ರೊಬ್ಬರು ಹೊಸ ಚಲನಚಿತ್ರ ನಿರ್ದೇಶಿಸಿದ್ದು ಅದು ಇನ್ನೂ ತೆರೆಕಂಡಿಲ್ಲ. ಈ ಚಲನಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದ ವ್ಯಕ್ತಿ ಹಾಗೂ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿ ಹಣದ ವಿಚಾರವಾಗಿ ನಿರ್ದೇಶಕನ ಜೊತೆ ಮನಸ್ಥಾಪ ಮಾಡಿಕೊಂಡಿದ್ದಾರೆ.
ಈ ನಡುವೆ ಕಳೆದ ಎರಡು ತಿಂಗಳ ಹಿಂದೆ ನಿರ್ದೇಶಕ, ತಮಿಳುನಾಡು ಮೂಲದ ಅನೀಶ್ ಮುಂಬೈಗೆ ತೆರಳಿದ್ದರು.ತಮ ಕಾರನ್ನು ಅವರು ಮಾರಾಟ ಮಾಡುತ್ತಿದ್ದಾರೆಂದು ಇಂದಿರಾ ನಗರದಲ್ಲಿ ನೆಲೆಸಿರುವ ನಟಿಗೆ ತಿಳಿಸಿದ್ದಾರೆ.
ಆ ನಟಿ ಕಾರನ್ನು ಮಾರಾಟ ಮಾಡಿಸಿ ಕೊಡುವುದಾಗಿ ಅನೀಶ್‌ಗೆ ತಿಳಿಸಿ ಮುಂಬೈನಿಂದ ಫೆ.9 ರಂದು ನಗರಕ್ಕೆ ಕರೆಸಿಕೊಂಡಿದ್ದು, ಸ್ಥಳವೊಂದರ ಬಳಿ ಬರುವಂತೆ ಹೇಳಿದ್ದಾರೆ. ಅಂದು ರಾತ್ರಿ ಅವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ಐದಾರು ಮಂದಿ ಸೇರಿಕೊಂಡು ಅವರಿಗೆ ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ್ದಲ್ಲದೇ ಅವರ ಬಳಿ ಇದ್ದ ಹಣ ಹಾಗೂ ಧರಿಸಿದ್ದ ಒಡವೆಗಳನ್ನು ಕಿತ್ತುಕೊಂಡಿದ್ದಾರೆ.
ತದ ನಂತರ ಕಾರಿನಲ್ಲಿ ಮತ್ತೆ ಅವರನ್ನು ಕರೆದುಕೊಂಡು ತುಮಕೂರು ಜಿಲ್ಲೆ ಪಂಡಿತನಹಳ್ಳಿ ಮಂದಾರಗಿರಿ ಬೆಟ್ಟದ ಬಳಿ ಹೋಗಿದ್ದು ಅಲ್ಲಿ ಇನ್ನಿಬ್ಬರು ಸೇರಿಕೊಂಡು ಮತ್ತೆ ಅವರ ಮೇಲೆ ಹಲ್ಲೆ ನಡೆಸಿ ಅವರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು.
ಈ ಬಗ್ಗೆ ಅನೀಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಖಚಿತ ಮಾಹಿತಿ ಮೇರೆಗೆ ಕಿರುತೆರೆ ನಟಿ ಸೇರಿದಂತೆ 11 ಮಂದಿಯನ್ನು ಬಂದಿಸಿ ವಿಚಾರಣೆ ನಡೆಸಿದ್ದಾರೆ.
ಆರೋಪಿಗಳಿಂದ 6 ಮೊಬೈಲ್‌ಗಳು, ಚಿನ್ನದ ಒಡವೆಗಳು, ಕಾರು ಮತ್ತು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ರವಿಕುಮಾರ್ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದು, ಈ ತಂಡದ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಶ್ಲಾಘಿಸಿದ್ದಾರೆ.
