ಬೆಂಗಳೂರು,ಫೆ.28-ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳೆಂದು ಹೇಳಿ ಹೆದರಿಸಿ ಹಣ ಸುಲಿಗೆ ಮಾಡಿದ್ದ ಒಂಬತ್ತು ಮಂದಿಯ ಗ್ಯಾಂಗನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿ 14.60 ಲಕ್ಷ ನಗದು ಸೇರಿದಂತೆ 24 ಲಕ್ಷ ಮೌಲ್ಯದ ಎರಡು ಕಾರು ಹಾಗೂ 13 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿನ್ನಗಾನಹಳ್ಳಿಯ ನಿವಾಸಿಯೊಬ್ಬರಿಗೆ ಪರಿಚಯವಾಗಿದ್ದ ಇಬ್ಬರು ವ್ಯಕ್ತಿಗಳು ಭೇಟಿ ಮಾಡಿ ನಮ ಬಳಿ ಒಂದೇ ಕ್ರಮಸಂಖ್ಯೆಯ ಹೆಚ್ಚಿನ ಹಣವಿದ್ದು, ಆ ಹಣವನ್ನು ವಹಿವಾಟು ಮಾಡಲು ಸಾಧ್ಯವಾಗಿಲ್ಲ, ನೀವು ನಮಗೆ 30 ಲಕ್ಷ ಹಣ ನೀಡಿದರೆ ನಿಮಗೆ ನಾವು 90 ಲಕ್ಷ ಹಣ ನೀಡುವುದಾಗಿ ಆಮಿಷವೊಡ್ಡಿದ್ದಾರೆ.
ಇವರ ಮಾತನ್ನು ನಂಬಿ ತಮ ಬಳಿ ಇದ್ದ ಚಿನ್ನಾಭರಣಗಳನ್ನು ಅಡವಿಟ್ಟು ಹಣ ಪಡೆದುಕೊಂಡಿದ್ದಲ್ಲದೇ ಕೈ ಸಾಲ ಮಾಡಿ 24 ಲಕ್ಷ ಹಣವನ್ನು ಹೊಂದಿಸಿಕೊಂಡಿದ್ದಾರೆ. ಫೆ.13 ರಂದು ದೇವನಹಳ್ಳಿ ಪಟ್ಟಣದ ಪ್ರಸನ್ನಳ್ಳಿ ರಸ್ತೆಯಲ್ಲಿರುವ ಆಸ್ಪತ್ರೆ ಮುಂಭಾಗ ಹಣ ತೆಗೆದುಕೊಂಡು ಬರುವಂತೆ ಇಬ್ಬರು ವ್ಯಕ್ತಿಗಳು ತಿಳಿಸಿದ್ದರಿಂದ 24 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ.
ಆ ಸಂದರ್ಭದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಎಂಬ ನಾಮ ಫಲಕ ಅಳವಡಿಸಿದ್ದ ಕಾರೊಂದು ಬಂದಿದ್ದು, ಅದರಲ್ಲಿದ್ದ ಮೂವರು ವ್ಯಕ್ತಿಗಳು ನಾವು ಅಧಿಕಾರಿಗಳೆಂದು ನಕಲಿ ಐಡಿ ಕಾರ್ಡ್‌ಗಳನ್ನು ತೋರಿಸಿ ಹೆದರಿಸಿ ಅವರ ಬಳಿ ಇದ್ದ 24 ಲಕ್ಷವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು.
ತಾವು ಮೋಸ ಹೋಗಿರುವುದನ್ನು ಅರಿತು ಕೆಲವೇ ನಿಮಿಷಗಳಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಮಾಹಿತಿಗಳನ್ನು ಕಲೆಹಾಕಿ, ಖಚಿತ ಮಾಹಿತಿ ಮೇರೆಗೆ ಕೆಲವೇ ಗಂಟೆಗಳಲ್ಲಿ ಯಲಹಂಕದ ರೈತರ ಸಂತೆ ಹಾಗೂ ಸೂಲಿಬೆಲೆ ಬಸ್ ನಿಲ್ದಾಣದ ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣದಲ್ಲಿ ಇನ್ನೂ ಹತ್ತು ಮಂದಿ ಸಹಚರರು ಭಾಗಿಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಾಗೇಪಲ್ಲಿ ಗಂಗಮ ದೇವಸ್ಥಾನದ ಬಳಿ ಐವರು ಸಹಚರರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಕಾರು ಹಾಗೂ 5.30 ಲಕ್ಷ ಹಣ ಹಾಗೂ 6 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತನಿಖೆ ಮುಂದುವರೆಸಿದ ಪೊಲೀಸರು ವೈಟ್‌ಫೀಲ್ಡ್ ಬಸ್ ನಿಲ್ದಾಣದ ಬಳಿ ಮತ್ತಿಬ್ಬರು ಸಹಚರರನ್ನು ವಶಕ್ಕೆ ಪಡೆದು 1 ಕಾರು, 6.30 ಲಕ್ಷ ನಗದು, 2 ಮೊಬೈಲ್‌ಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ನಂತರ ಸುಲಿಗೆ ಮಾಡಿದ್ದ ಹಣದ ಪೈಕಿ ಆರೋಪಿಯೊಬ್ಬನ ವಾಸದ ಮನೆಯಲ್ಲಿಟ್ಟಿದ್ದ 3 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.
ಒಟ್ಟಾರೆ ಈ ಪ್ರಕರಣದಲ್ಲಿ ಒಂಬತ್ತು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 14.60 ಲಕ್ಷ ನಗದು,2 ಕಾರು, 13 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ರಾಕೇಶ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಇನ್ನೂ ಮೂವರ ಪತ್ತೆಕಾರ್ಯ ಮುಂದುವರೆದಿದೆ.
