ಹೈದ್ರಾಬಾದ್, ಡಿ. 2- ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ರಾಜಕೀಯವಾಗಿ ಸಂಚಲನಗಳು ಸುದ್ದಿಯಾಗಿದ್ದು, ಆಪರೇಷನ್ ಕಮಲದ ಸದ್ದು ಜೋರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟದ ಇಬ್ಬರು ಸಚಿವರನ್ನು ಹೈಕಮಾಂಡ್ ತುರ್ತು ಕರೆಯ ಮೇರೆಗೆ ಹೈದ್ರಾಬಾದ್‍ಗೆ ಕಳುಹಿಸಿದೆ.
ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಅವರನ್ನು ಹೈದ್ರಾಬಾದ್‍ಗೆ ಕರೆಸಿಕೊಳ್ಳಲಾಗಿದ್ದು, ಫಲಿತಾಂಶದ ನಂತರದ ಬೆಳವಣಿಗೆಗಳ ಮೇಲೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಬಿಜೆಪಿ ಹಾಗೂ ಬಿಆರ್‍ಎಸ್ ಪಕ್ಷದ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದು, ಒಂದು ವೇಳೆ ಫಲಿತಾಂಶದಲ್ಲಿ ಏರುಪೇರಾದರೆ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಆಡಳಿತ-ಪ್ರತಿಪಕ್ಷಗಳ ವಾಕ್ಸಮರಕ್ಕೆ ಸುವರ್ಣಸೌಧ ಸಜ್ಜು
ಚುನಾವಣೋತ್ತರ ಸಮೀಕ್ಷೆ ಹಾಗೂ ಪಕ್ಷದ ನಾಯಕರ ನಿರೀಕ್ಷೆಯ ಪ್ರಕಾರ ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯುವ ನಿರೀಕ್ಷೆಗಳಿವೆ. ಆದರೆ ಬಿಆರ್‍ಎಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರ ರೂಪಿಸಿದ್ದು, ಕಾಂಗ್ರೆಸ್ ಶಾಸಕರನ್ನು ಸೆಳೆದು ತಮ್ಮ ಸರ್ಕಾರವನ್ನು ರಚಿಸುವ ರಣತಂತ್ರ ರೂಪಿಸಿದ್ದಾರೆ.
ಇದನ್ನು ತಡೆಯಲು ಕಾಂಗ್ರೆಸ್ ಸಜ್ಜಾಗಿದೆ. ಉಪಮುಖ್ಯಮಂತ್ರಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಸಂಜೆ ಹೈದ್ರಾಬಾದ್‍ಗೆ ತೆರಳುತ್ತಿದ್ದಾರೆ. ಅವರಿಗೂ ಮುನ್ನವೇ ಜಮೀರ್ ಹಾಗೂ ನಾಗೇಂದ್ರ ಅವರನ್ನು ಹೈಕಮಾಂಡ್ ಕರೆಸಿಕೊಂಡಿದೆ. ಫಲಿತಾಂಶಕ್ಕೂ ಮುನ್ನವೇ ತೆಲಂಗಾಣ ರಾಜಕೀಯ ರಂಗುಪಡೆದಿದೆ.