Thursday, May 2, 2024
Homeರಾಜ್ಯಆಡಳಿತ-ಪ್ರತಿಪಕ್ಷಗಳ ವಾಕ್ಸಮರಕ್ಕೆ ಸುವರ್ಣಸೌಧ ಸಜ್ಜು

ಆಡಳಿತ-ಪ್ರತಿಪಕ್ಷಗಳ ವಾಕ್ಸಮರಕ್ಕೆ ಸುವರ್ಣಸೌಧ ಸಜ್ಜು

ಬೆಂಗಳೂರು, ಡಿ. 2- ಸೋಮವಾರದಿಂದ ಬೆಳಗಾವಿಯ ಸುವರ್ಣ ವಿಕಾಸ ಸೌಧದದಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷದ ಮೇಲೆ ಮುಗಿಬೀಳಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸಜ್ಜಾಗಿದ್ದರೆ ಇನ್ನು ಸದನದಲ್ಲೇ ಪ್ರತಿಪಕ್ಷಗಳನ್ನು ಉತ್ತರದ ಮೂಲಕ ಕಟ್ಟಿಹಾಕಲು ಕಾಂಗ್ರೆಸ್ ಕೂಡ ಸಿದ್ಧತೆ ಮಾಡಿಕೊಂಡಿದೆ. ಚಳಿಗಾಲದಲ್ಲೂ ಸರ್ಕಾರವನ್ನು ಚಳಿ ಬಿಡಿಸಲು ಪ್ರತಿಪಕ್ಷಗಳು ಸಜ್ಜಾಗಿದ್ದರೆ ಸದನದಲ್ಲಿ ಪ್ರತ್ಯುತ್ತರ ನೀಡಲು ಸರ್ಕಾರ ಸಜ್ಜಾಗಿದೆ.

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿಯಾದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿರುವುದರಿಂದ ಸರ್ಕಾರದ ವಿರುದ್ಧ ಸದನದಲ್ಲಿ ಉಭಯ ಪಕ್ಷಗಳು ಜಂಟಿ ಹೋರಾಟ ನಡೆಸಲು ಮುಂದಾಗಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಡೆದ ಎರಡು ಅಧಿವೇಶನಗಳಿಗೆ ಪ್ರತಿಪಕ್ಷದ ನಾಯಕರು ಇರಲಿಲ್ಲ. ಇದನ್ನೇ ಅಸ್ತ್ರ ಮಾಡಿಕೊಂಡಿದ್ದ ಸರ್ಕಾರ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದವರು ನಮಗೇನು ಹೇಳುತ್ತೀರಿ ಎಂದು ತಿರುಗೇಟು ನೀಡುತ್ತಿದ್ದರು.

ಕಿಂಗ್ ಚಾಲ್ರ್ಸ್ ಪರಿಸರ ಸಂರಕ್ಷಣೆ ಕಾರ್ಯ ಶ್ಲಾಘನೀಯ; ಮೋದಿ

ಇದೀಗ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಸತತ ಏಳು ಬಾರಿ ಗೆದ್ದಿರುವ ಆರ್.ಅಶೋಕ್ ಅವರು ನೇಮಕವಾಗಿದ್ದಾರೆ. ಮೊದಲ ಬಾರಿಗೆ ಅವರು ಪ್ರತಿಪಕ್ಷದ ನಾಯಕರಾಗಿ ಕಲಾಪದಲ್ಲಿ ಭಾಗಿಯಾಗುತ್ತಿರುವುದರಿಂದ ಸರ್ಕಾರದ ವಿರುದ್ಧ ಚಾಟಿ ಬೀಸುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ. ವಿಧಾನಪರಿಷತ್‍ಗೆ ನಾಳೆ ಸಂಜೆಯೊಳಗೆ ಪ್ರತಿಪಕ್ಷದ ನಾಯಕ, ಉಪನಾಯಕ, ಮುಖ್ಯ ಸಚೇತಕ ನೇಮಕವಾಗುವ ಸಾಧ್ಯತೆಯಿದೆ.

ಇನ್ನು ಈ ಬಾರಿಯ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳಿಗೆ ಸಾಕಷ್ಟು ಅಸ್ತ್ರಗಳು ಸಿಕ್ಕಿವೆ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ರಾಜ್ಯಸರ್ಕಾರ ಬರನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ದೂರುತ್ತಲೇ ಬಂದಿವೆ. ಸದನದಲ್ಲಿ ಇದನ್ನು ಚರ್ಚಿಸಲು ಆರ್.ಅಶೋಕ್ ಅವರು ಮುಂದಾಗಿದ್ದಾರೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ರೈತರಿಗೆ ನಿರಂತರವಾಗಿ ಆರು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡದಿರುವುದು ಸೇರಿದಂತೆ ಕೆಲವು ಪ್ರಚಲಿತ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ಸಜ್ಜಾಗಿವೆ.

ಸದನದಲ್ಲಿ ಚರ್ಚಿಸುವ ವಿಷಯಗಳ ಕುರಿತು ಶುಕ್ರವಾರವಷ್ಟೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಸೇರಿದಂತೆ ಹಲವು ರಹಸ್ಯ ಸಭೆ ನಡೆಸಿದ್ದರು. ಸದನದಲ್ಲಿ ಈ ಬಾರಿ ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡದೇ ನಾಡಿನ ಪ್ರಚಲಿತ ಸಮಸ್ಯೆಗಳ ಬಗ್ಗೆ ಧ್ವನಿಯಾಗಬೇಕೆಂಬ ತೀರ್ಮಾನಕ್ಕೆ ಪ್ರತಿಪಕ್ಷಗಳು ಬಂದಿವೆ.

ಎರಡು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಗಾಲದಿಂದ ತತ್ತರಿಸಿರುವ ರೈತರಿಗೆ ಸರ್ಕಾರದ ವತಿಯಿಂದ ಕನಿಷ್ಠ 1 ಸಾವಿರದಿಂದ ಗರಿಷ್ಠ 2 ಸಾವಿರ ಹಣ ನೀಡುವುದಾಗಿ ಘೋಷಣೆ ಮಾಡಿದ್ದರು. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಸಂಕಷ್ಟದಲ್ಲಿರುವ ರೈತರ ಪ್ರತಿ ಹೆಕ್ಟೇರ್‍ಗೆ 25 ಸಾವಿರ ರೂ. ಹಣವನ್ನು ಪರಿಹಾರ ಧನ ಬಿಡುಗಡೆ ಮಾಡಬೇಕೆಂದು ಹೋರಾಟ ನಡೆಸಲು ಪ್ರತಿಪಕ್ಷಗಳು ತೀರ್ಮಾನಿಸಿವೆ.

ಬಲವಂತದ ಮತಾಂತರ : 42 ಜನರ ವಿರುದ್ಧ ಎಫ್‍ಐಆರ್, 9 ಮಂದಿ ಬಂಧನ

ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸಿ ರಾಜ್ಯಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಬೇಡ. ಮೊದಲು ರಾಜ್ಯಸರ್ಕಾರ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಲಿ. ಕೇಂದ್ರಕ್ಕೆ ಆರ್ಥಿಕ ನೆರವು ನೀಡಲು ನಾವು ಕೂಡ ಮನವಿ ಮಾಡುತ್ತೇವೆ ಎಂದು ಉತ್ತರಿಸಲು ಸಿದ್ಧರಾಗಿದ್ದಾರೆ.
ಸದನದಲ್ಲಿ ಇತ್ತೀಚೆಗೆ ಶಾಸಕ ಬಿ.ಆರ್.ಪಾಟೀಲ್ ಅವರು ಸಚಿವರಾದ ಕೃಷ್ಣಭೈರೇಗೌಡ ಮತ್ತು ಪ್ರಿಯಾಂಕ ಖರ್ಗೆ ವಿರುದ್ಧ ಮುಖ್ಯಮಂತ್ರಿಗೆ ಬರೆದ ಪತ್ರದ ಬಗ್ಗೆಯೂ ಪ್ರಸ್ತಾಪಿಸಲು ಪ್ರತಿಪಕ್ಷಗಳು ತೀರ್ಮಾನಿಸಿವೆ.

ಜಮೀರ್ ವಿರುದ್ಧ ಹಕ್ಕುಚ್ಯುತಿ:
ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ವಿಧಾನಸಭೆಯ ಸ್ಪೀಕರ್ ಸ್ಥಾನಮಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ವಸತಿ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಪ್ರತಿಪಕ್ಷಗಳು ತೀರ್ಮಾನಿಸಿವೆ. ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿರುವ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗಿದ್ದು, ಸದನದಲ್ಲಿ ಹೋರಾಟಕ್ಕೂ ಮುಂದಾಗಿವೆ.

ಒಟ್ಟಿನಲ್ಲಿ 2 ವಾರಗಳ ಕಾಲ ನಡೆಯಲಿರುವ ಈ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತಾರಕಕ್ಕೇರಿದ ಚರ್ಚೆ ನಡೆಯಲಿದೆ.

RELATED ARTICLES

Latest News