Tuesday, April 21, 2026
Homeರಾಜ್ಯಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

Passengers flock to Kempegowda Airport

ಬೆಂಗಳೂರು,ಮಾ.2- ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷವು ತಾರಕಕ್ಕೇರಿರುವ ಬೆನ್ನಲ್ಲೇ, ಮಧ್ಯಪ್ರಾಚ್ಯ ರಾಷ್ಟ್ರಗಳ ಆಕಾಶ ಮಾರ್ಗದಲ್ಲಿ ಭದ್ರತಾ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್‌ ಸಿಟಿಯ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ-ಬರಬೇಕಿದ್ದ

ಸುಮಾರು 22 ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ತುರ್ತಾಗಿ ರದ್ದುಗೊಳಿಸಲಾಗಿದೆ.
ಮಧ್ಯಪ್ರಾಚ್ಯದ ಪ್ರಮುಖ ವಾಣಿಜ್ಯ ಮತ್ತು ಪ್ರವಾಸಿ ಕೇಂದ್ರಗಳಾದ ದುಬೈ, ಅಬುಧಾಬಿ, ದೋಹಾ ಮತ್ತು ಜಿನ್ಹಾ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು ರದ್ದಾಗಿವೆ. ಯುದ್ಧದ ಭೀತಿಯಿಂದಾಗಿ ಈ ಭಾಗದ ವಾಯುಪ್ರದೇಶವನ್ನು ಬಳಸಲು ವಿಮಾನಯಾನ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಭಾರತದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ಸಾವಿರಾರು ಪ್ರಯಾಣಿಕರ ಯೋಜನೆಗಳು ಅಸ್ತವ್ಯಸ್ತಗೊಂಡಿವೆ.

ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್‌ ಇಂಡಿಯಾ , ಎಮಿರೇಟ್‌್ಸ, ಇಂಡಿಗೋ ಮತ್ತು ಕತಾರ್‌ ಏರ್‌ವೇಸ್‌‍ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ ಅಥವಾ ವಿಮಾನಗಳನ್ನು ಬೇರೆ ಮಾರ್ಗಕ್ಕೆ ವರ್ಗಾಯಿಸಿವೆ. ಸಂಘರ್ಷ ಪೀಡಿತ ಪ್ರದೇಶಗಳ ಮೇಲೆ ಹಾರಾಟ ನಡೆಸುವುದು ಅಪಾಯಕಾರಿ ಎಂಬ ಕಾರಣಕ್ಕೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಪ್ರಯಾಣಿಕರು ಹೈರಾಣ: ಮುನ್ಸೂಚನೆ ಇಲ್ಲದೆಯೇ ವಿಮಾನಗಳು ರದ್ದಾದ ಕಾರಣ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಅತಂತ್ರರಾಗಿದ್ದಾರೆ. ಉದ್ಯೋಗ ನಿಮಿತ್ತ ಮತ್ತು ತುರ್ತು ಕೆಲಸಗಳಿಗಾಗಿ ವಿದೇಶಕ್ಕೆ ತೆರಳಬೇಕಿದ್ದವರು ವಿಮಾನ ನಿಲ್ದಾಣದ ಕೌಂಟರ್‌ಗಳ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡುಬಂದವು. ವಿದೇಶದಿಂದ ಬರಬೇಕಿದ್ದವರ ಸಂಬಂಧಿಕರೂ ಸಹ ನಿಲ್ದಾಣದಲ್ಲಿ ಕಾಯುವಂತಾಗಿದೆ.

ತೊಂದರೆಗೊಳಗಾದ ಪ್ರಯಾಣಿಕರಿಗೆ ನೆರವಾಗಲು ವಿಮಾನಯಾನ ಸಂಸ್ಥೆಗಳು ಎರಡು ಪ್ರಮುಖ ಆಯ್ಕೆಗಳನ್ನು ನೀಡಿವೆ.ಮರುಹಂಚಿಕೆ: ಪ್ರಯಾಣಿಕರು ತಮ ಪ್ರಯಾಣದ ದಿನಾಂಕವನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ (ಅಥವಾ ಲಭ್ಯತೆಗೆ ಅನುಗುಣವಾಗಿ) ಮುಂದಿನ ದಿನಗಳಿಗೆ ಬದಲಾಯಿಸಿಕೊಳ್ಳಬಹುದು.

ಪೂರ್ಣ ರಿಫಂಡ್‌: ಪ್ರಯಾಣ ಬೇಡವೆನ್ನುವವರಿಗೆ ಟಿಕೆಟ್‌ ಹಣವನ್ನು ಪೂರ್ಣವಾಗಿ ವಾಪಸ್‌‍ ನೀಡಲಾಗುವುದು ಅಥವಾ ಆ ಮೊತ್ತವನ್ನು ಕ್ರೆಡಿಟ್‌ ಶೆಲ್‌ ರೂಪದಲ್ಲಿ ಮುಂದಿನ ಪ್ರಯಾಣಕ್ಕೆ ಬಳಸಲು ಅವಕಾಶ ನೀಡಲಾಗುವುದು.

ಮುನ್ನೆಚ್ಚರಿಕೆ ಕ್ರಮಗಳು
ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಇರುವುದರಿಂದ, ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸುವವರು ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ಈ ಕೆಳಗಿನ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ, ಅದರಂತೆ ಆಯಾ ವಿಮಾನಯಾನ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಅಥವಾ ಮೊಬೈಲ್‌ ಆ್ಯಪ್‌ ಮೂಲಕ ಫ್ಲೈಟ್‌ ಸ್ಟೇಟಸ್‌‍ ಪರೀಕ್ಷಿಸಿ.

ವಿಮಾನಯಾನ ಸಂಸ್ಥೆಗಳಿಂದ ಬರುವ ಎಸ್‌‍ಎಂಎಸ್‌‍ ಅಥವಾ ಇಮೇಲ್‌ ಸಂವಹನಗಳನ್ನು ಗಮನಿಸಿ. ತುರ್ತು ಸಂದರ್ಭದಲ್ಲಿ ವಿಮಾನ ನಿಲ್ದಾಣದ ಸಹಾಯವಾಣಿಯನ್ನು ಸಂಪರ್ಕಿಸಿ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಾಗುವವರೆಗೂ ಈ ವಿಮಾನ ಸಂಚಾರದ ವ್ಯತ್ಯಯ ಮುಂದುವರಿಯುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

Latest News