ನವದೆಹಲಿ, ಸೆ.25- ಹಾಲಿನಿಂದ ತಯಾರಿಸದ ಪನೀರ್ನಂತಹ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕೆ ದೇಶಾದ್ಯಂತ ನಿರ್ಬಂಧ ವಿಧಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರಸ್ತಾವನೆ ಮುಂದಿಟ್ಟಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧ) ನಿಯಮಾವಳಿ, 2011ಕ್ಕೆ ತಿದ್ದುಪಡಿ ತರಲು ಪ್ರಾಧಿಕಾರ ಕರಡು ಅಧಿಸೂಚನೆ ಹೊರಡಿಸಿದೆ.ಇದರ ಪ್ರಕಾರ, ಹಾಲಿನಿಂದ ಪಡೆದ ಘಟಕಗಳಿಂದ ತಯಾರಿಸದ ಪನೀರ್ ಅನ್ನು ಪನೀರ್ ಎಂದು ಹೆಸರಿಸುವುದು, ಅದರ ಲೇಬಲ್ನಲ್ಲಿ ಪನೀರ್ ಎಂಬ ಪದ ಬಳಸುವುದು ಅಥವಾ ಪನೀರ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರುವುದಕ್ಕೆ ನಿರ್ಬಂಧ ವಿಧಿಸುವ ಪ್ರಸ್ತಾವನೆ ಇದೆ.
ಹಾಲಿನ ಉತ್ಪನ್ನಗಳ ಅನುಕರಣೆ ವಿಭಾಗದಡಿ ಈಗಾಗಲೇ ಅನುಮತಿ ಅಥವಾ ನೋಂದಣಿ ಪಡೆದಿರುವ ಉತ್ಪನ್ನಗಳೂ ತಮ ಹೆಸರು, ಲೇಬಲ್ ಅಥವಾ ಮಾರುಕಟ್ಟೆ ಪ್ರಚಾರದಲ್ಲಿ ಪನೀರ್ ಎಂಬ ಪದ ಬಳಕೆಯನ್ನು ನಿಲ್ಲಿಸಬೇಕಾಗುತ್ತದೆ. ಗ್ರಾಹಕರಿಗೆ ಉತ್ಪನ್ನದ ಸ್ವರೂಪ ಹಾಗೂ ಅದರಲ್ಲಿರುವ ಘಟಕಗಳ ಬಗ್ಗೆ ತಪ್ಪು ಮಾಹಿತಿ ಹೋಗದಂತೆ ತಡೆಯುವುದು ಈ ತಿದ್ದುಪಡಿಯ ಉದ್ದೇಶವಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ತಿಳಿಸಿದೆ.
ಈ ಕರಡು ನಿಯಮಾವಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅಧಿಸೂಚನೆ ಪ್ರಕಟವಾದ ದಿನದಿಂದ 60 ದಿನಗಳ ಅವಧಿಯಲ್ಲಿ ಸಲ್ಲಿಕೆಯಾಗುವ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು.
