ಬೆಂಗಳೂರು, ಮಾ.6- ಈವರೆಗೂ 16 ಬಜೆಟ್ಗಳನ್ನು ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸುವ ಸಲುವಾಗಿ ವಿಧಾನಸೌಧವನ್ನು ಮದುವಣಗಿತ್ತಿಯಂತೆ ಶೃಂಗರಿಸಲಾಗಿದ್ದು ಮತ್ತು ಸುತ್ತಮುತ್ತಲು ಭದ್ರತೆಯ ಅಭೇದ್ಯ ಕೋಟೆಯನ್ನೇ ನಿರ್ಮಿಸಲಾಗಿತ್ತು.
17ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ವಿಧಾನಸೌಧದ ಪ್ರವೇಶ ದ್ವಾರದ ಹೆಬ್ಬಾಗಿಲಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡನೆ ಎಂದು ಹೂವಿನ ಅಲಂಕಾರದ ಫಲಕ ಅಳವಡಿಸಲಾಗಿದೆ. ವಿಧಾನಸೌಧದ ವಿಧಾನಸಭೆಯ ಸಭಾಂಗಣಕ್ಕೆ ಪ್ರವೇಶ ಕಲ್ಪಿಸುವ ಮೆಟ್ಟಿಲುಗಳಿಗೆ ಎಂದಿನಂತೆ ಕೆಂಪು ಹಾಸು ಅಳವಡಿಸಲಾಗಿದೆ. ವಿವಿಧ ಸಂಘಟನೆಗಳು ಹಲವಾರು ರೀತಿಯ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಗೆ ಕರೆ ನೀಡಿವೆ.
ಈ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ವ್ಯಾಪಕ ಭದ್ರತೆಯನ್ನು ಆಯೋಜಿಸಲಾಗಿದೆ. ಬಜೆಟ್ ಮಂಡನೆ ವೇಳೆ ಯಾವುದೇ ಅಹಿತಕರ ಘಟನೆಗಳಾಗಬಾರದು, ಗಮನ ಬೇರೆಡೆಗೆ ಸೆಳೆಯುವ ಚಟುವಟಿಕೆಗಳಿಗೆ ಆಸ್ಪದ ಇರಬಾರದು ಎಂಬ ಕಾರಣಕ್ಕೆ ಪೊಲೀಸರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಸಮವಸ್ತ್ರ ಹಾಗೂ ಮಫ್ತಿಯಲ್ಲಿ ಮೂಲೆ ಮೂಲೆಯಲ್ಲಿ ಕಾದುನಿಂತಿರುವ ಪೊಲೀಸರು ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಿದ್ದರು.
ವಿಧಾನ ಸಭೆಯ ಸಭಾಂಗಣದಲ್ಲಿ ಸಚಿವಾಲಯದ ಸಿಬ್ಬಂದಿಗಳು ಬಜೆಟ್ ಮಂಡನೆಗೂ ಪೂರ್ವಭಾವಿಯಾಗಿ ಧ್ವನಿವರ್ಧಕ-ಬೆಳಕು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಪದೇಪದೇ ಪರಿಶೀಲನೆ ನಡೆಸಿದರು. ಸಿದ್ದರಾಮಯ್ಯ ಅವರ 17ನೇ ಬಜೆಟ್ ರಾಷ್ಟ್ರಮಟ್ಟದಲ್ಲಿ ಪ್ರಚಾರಗೊಳ್ಳಬೇಕು ಎಂಬ ನಿಟ್ಟಿನಲ್ಲಿ ನಾನಾ ರೀತಿಯ ಚಟುವಟಿಕೆಗಳನ್ನು ಹಮಿಕೊಳ್ಳಲಾಗಿದೆ.
ಇದೇ ಮೊದಲ ಬಾರಿಗೆ ಬಜೆಟ್ ಮಂಡನೆ ಮತ್ತು ಅದರ ಕುರಿತು ವಿವರಣೆ ನೀಡುವ ಮುಖ್ಯಮಂತ್ರಿ ಅವರ ಪತ್ರಿಕಾಗೋಷ್ಠಿಯನ್ನು ಎಲ್ಲಾ ಮಾಧ್ಯಮಗಳಲ್ಲೂ ನೇರ ಪ್ರಸಾರ ಮಾಡಿಸಲಾಗುತ್ತಿದ್ದು, ಬಸ್ ನಿಲ್ದಾಣಗಳಲ್ಲೂ ಏಕಕಾಲಕ್ಕೆ ಪ್ರಸಾರವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.
ಬಿಜೆಪಿಯ ಮಾದರಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ ಕೆಲಸಕ್ಕೆ ತಕ್ಕ ಪ್ರಚಾರ ಪಡೆಯುವ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ ಎಂಬಂತೆ ಭಾಸವಾಗುತ್ತಿದೆ.
ಬೆಳಗ್ಗೆ ಬಜೆಟ್ ಮಂಡನೆಗೆ ಆಗಮಿಸುವ ಮುನ್ನ, ಸಿದ್ದರಾಮಯ್ಯ ಅವರ ನಿವಾಸ ಚಟುವಟಿಕೆಗಳ ಕೇಂದ್ರ ಬಿಂದುವಾಗಿದ್ದು ಸಂಪುಟದ ಬಹುತೇಕ ಸಚಿವರು, ಶಾಸಕರು ಮುಖ್ಯಮಂತ್ರಿ ಅವರ ಮನೆಗೆ ಭೇಟಿ ನೀಡಿದರು. ಅಲ್ಲಿಂದ ಸಚಿವ ಸಂಪುಟ ಸಭೆಗೆ ಸಾಲು ಸಾಲು ವಾಹನಗಳಲ್ಲಿ ಆಗಮಿಸಿದರು.ನಂತರ ಸಂಗಡಿಗರೊಂದಿಗೆ ವಿಧಾನ ಸಭೆಯ ಸಭಾಂಗಣಕ್ಕೆ ಮುಖ್ಯಮಂತ್ರಿ ಆಗಮಿಸಿದ್ದು ವಿಶೇಷವಾಗಿತ್ತು.
