ಮುಂಬೈ, ಡಿ.8- ಕೆಲವು ದಿನಗಳಿಂದ ಹೊಟ್ಟೆನೋವಿನ ಕ್ಯಾನ್ಸರ್ನಿಂದ ಬಳಲುತ್ತಿರುವ ನಟ, ನಿರ್ಮಾಪಕ, ನಿರ್ದೇಶಕ ಜೂನಿಯರ್ ಮೆಹಮೂದ್ (67) ಅವರು ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ 2 ಗಂಟೆ ಸುಮಾರಿನಲ್ಲಿ ತಮ್ಮ ಮನೆಯಲ್ಲೇ ನಿಧನರಾಗಿದ್ದಾರೆ.
ಬಾಲನಟನಾಗಿ ಎಂಟ್ರಿ:
ನೊನಿಹಾಲ್ ಸಿನಿಮಾದ ಮೂಲಕ ಬಾಲನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದ ಮೆಹಮೂದ್ ಅವರು ನಂತರ ಮೊಹಬತ್ ಜಿಂದಗಿ ಹೈ, ಬ್ರಹ್ಮಚಾರಿ, ವಿಶ್ವಾಸ್, ದೋ ರಸ್ತೆ ಮುಂತಾದ ಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಗಮನ ಸೆಳೆದಿದ್ದರು. ಚಿತ್ರರಂಗದಲ್ಲಿ ಜೀವನ ಕಟ್ಟಿಕೊಳ್ಳಬೇಕೆಂದು ಬಯಸಿದ್ದ ಜೂನಿಯರ್ ಮೆಹಮೂದ್ ಅವರು ಹಿಂದಿ, ಮರಾಠಿ ಸೇರಿದಂತೆ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟ ಹಾಗೂ ಹಾಸ್ಯ ಕಲಾವಿದರಾಗಿ ಪ್ರೇಕ್ಷಕರ ಮನದಲ್ಲಿ ನೆಲೆಸಿದ್ದರು.
ಅಪ್ ಕಿ ಕಸಮ್,ದಾದಾಗಿರಿ, ಇಮಾಂದರ್, ಜವಾನಿ ಜಿಂದಾಬಾದ್, ಅಜ್ ಕ ಅರ್ಜುನ್, ಮಾಫಿಯಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಜೂನಿಯರ್ ಮೆಹಮೂದ್ , 2011ರಲ್ಲಿ ಬಿಡುಗಡೆಗೊಂಡಿದ್ದ ಜಾನಾ ಪೆಹಚನಾ ಸಿನಿಮಾದಲ್ಲಿ ಕೊನೆಯ ಬಾರಿ ಬಣ್ಣ ಹಚ್ಚಿದ್ದರು.
ಕಿರುತೆರೆಯಲ್ಲೂ ಮಿಂಚು:
ಹಿರಿತೆರೆ ಅಲ್ಲದೆ ಕಿರುತೆರೆಯಲ್ಲೂ ತಮ್ಮ ಅಭಿನಯದ ಝಲಕ್ ಪ್ರದರ್ಶಿಸಿದ್ದ ಜೂನಿಯರ್ ಮೆಹಮೂದ್ , ಪ್ಯಾರ್ ಕ ದರ್ದ್ ಹೈ ಮೆಹ್ತಾ ಮೆಹ್ತಾ ಪ್ಯಾರಾ ಪ್ಯಾರಾ, ಏಕ್ ರಿಸ್ತಾ ಸಾಜೆದಾರಿ ಕಾ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ಅವರಿಗೆ ತೆನಾಲಿ ರಾಮದ ಮೌಲಾ ನಸಿರುದ್ದೀನ್ ಪಾತ್ರವು ಸಾಕಷ್ಟು ಹೆಸರು ತಂದುಕೊಟ್ಟಿತ್ತು.
ಬಂಡವಾಳ ಹೂಡಿಕೆ ಸಮಾವೇಶಗಳಿಗಾಗಿ 88 ಕೋಟಿ ಖರ್ಚು
ಸ್ಟಾರ್ ನಟರುಗಳೊಂದಿಗೆ ನಟನೆ:
ಬಾಲಿವುಡ್‍ನ ಸೂಪರ್ ಸ್ಟಾರ್‍ಗಳಾದ ಅಮಿತ್‍ಬಾಬ್ ಬಚ್ಚನ್, ಧರ್ಮೇಂದ್ರ, ಜಿತೇಂದ್ರ, ಶಾರುಖ್‍ಖಾನ್, ಅಮೀರ್‍ಖಾನ್ ಸೇರಿದಂತೆ ಸ್ಟಾರ್ ನಟರುಗಳೊಂದಿಗೆ ನಟಿಸಿದ್ದ ಜೂನಿಯರ್ ಮೆಹಮೂದ್ ಪ್ರೇಕ್ಷಕರ ಹೃದಯ ಗೆದ್ದಿದ್ದರು.
ನಯೀಮ್ ಸಯೀದ್ ಎಂಬ ಮೂಲ ಹೆಸರನ್ನು ಹಿರಿಯ ಹಾಸ್ಯ ನಟ ಮೆಹಮೂದ್ ಅವರೇ ಜೂನಿಯರ್ ಮೆಹಮೂದ್ ಎಂದು ಬದಲಾಯಿಸಿದ್ದು ವಿಶೇಷವಾಗಿದ್ದು, ನಯೀಮ್ ಸಯೀದ್ ಅವರು 6 ಮರಾಠಿ ಸಿನಿಮಾಗಳನ್ನು ನಿರ್ದೇಶಿಸಿದ್ದಲ್ಲದೆ, ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಗಣ್ಯರಿಂದ ಆರೋಗ್ಯ ವಿಚಾರಣೆ:
ಜೂನಿಯರ್ ಮೆಹಮೂದ್ ಅವರು ಕೆಲವು ತಿಂಗಳುಗಳಿಂದ ಹೊಟ್ಟೆನೋವಿನ ಕ್ಯಾನ್ಸರ್ನಿಂದ ಬಳಲುತ್ತಿರುವ ಸುದ್ದಿ ತಿಳಿದ ಹಿರಿಯ ನಟರಾದ ಜಿತೇಂದ್ರ, ಜಾನಿ ಲಿವರ್ ಸೇರಿದಂತೆ ಹಲವರು ಜೂನಿಯರ್ ಮೆಹಬೂಬ್ ಅವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.
ಬಣ್ಣದ ಲೋಕದ ನಂಟು ಕಳಚಿದ ಜೂ.ಮೆಹಮೂದ್:
ಮೆಹಮೂದ್ ಕಿರಿಯ ಪುತ್ರ ಹಸ್ನೈನ್ ಸುದ್ದಿಗಾರರೊಂದಿಗೆ ಮಾತನಾಡಿ,` ನಮ್ಮ ತಂದೆ 4ನೇ ಹಂತದ ಹೊಟ್ಟೆಯ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. ಕಳೆದ 17 ದಿನಗಳಿಂದ ಅವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿತ್ತು. ಒಂದು ತಿಂಗಳಲ್ಲಿ 35-40 ಕೆಜಿ ತೂಕ ಕಳೆದುಕೊಂಡಿದ್ದರು’ ಎಂದು ಹೇಳಿದ್ದಾರೆ.
ಮುಂಬೈ ಸಾಂತಾಕ್ರೂಜ್ ಪಶ್ಚಿಮದಲ್ಲಿರುವ ಜುಹು ಮುಸ್ಲಿಂ ಸ್ಮಶಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಜೂನಿಯರ್ ಮೆಹಮೂದ್ ಅವರ ಅಂತ್ಯಕ್ರಿಯೆಯು ನೆರವೇರಿದೆ.