Thursday, May 2, 2024
Homeರಾಜ್ಯಗ್ಯಾರಂಟಿ ಯೋಜನೆಗಳಿಗೆ SC-ST ಅನುದಾನ ಬಳಕೆ : ಮೇಲ್ಮನೆಯಲ್ಲಿ ಕೋಲಾಹಲ

ಗ್ಯಾರಂಟಿ ಯೋಜನೆಗಳಿಗೆ SC-ST ಅನುದಾನ ಬಳಕೆ : ಮೇಲ್ಮನೆಯಲ್ಲಿ ಕೋಲಾಹಲ

ಬೆಳಗಾವಿ,ಡಿ.8-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕಾಗಿ ಮೀಸಲಿಟ್ಟ ಎಸ್‍ಸಿ-ಎಸ್‍ಪಿ/ಟಿಎಸ್‍ಪಿ ಅನುದಾನವನ್ನು ರಾಜ್ಯ ಸರ್ಕಾರವು ತನ್ನ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಸಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಗದ್ದಲ ಎಬ್ಬಿಸಿದ ಪರಿಣಾಮ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮೇಲ್ಮನೆಯಲ್ಲಿ ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪ ನಡೆದು ಸದನವನ್ನು ಕೆಲಕಾಲ ಮುಂದೂಡಿದ ಪ್ರಸಂಗ ಜರುಗಿತು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರು, ಎಸ್‍ಸಿಎಸ್‍ಪಿ ಟಿಎಸ್‍ಪಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಬಳಕೆ ಮಾಡಿರುವ ಅನುದಾನದ ಕುರಿತು ಪ್ರಶ್ನೆ ಕೇಳಿದ್ದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ನೀಡಿದ ಉತ್ತರಕ್ಕೆ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಸಚಿವ ಎಚ್.ಸಿ.ಮಹದೇವಪ್ಪನವರು ಎಸ್‍ಸಿಎಸ್‍ಪಿ ಟಿಎಸ್‍ಪಿ ಅಧಿನಿಯಮ 2013ರ ಅನ್ವಯ ಸೆಕ್ಷನ್ ಎ, ಬಿ ಸಿ, ಡಿ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ನೇರವಾಗಿ ಪ್ರಯೋಜನವಾಗುವ ವೈಯಕ್ತಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಈ ಅನುದಾನವನ್ನು ಅನ್ಯ ಕಾರ್ಯಕ್ರಮಗಳಿಗೆ ವರ್ಗಾವಣೆ ಮಾಡಲು ಬರುವುದಿಲ್ಲ ಎಂದು ಸಮರ್ಥಿಸಿಕೊಂಡರು.

ಸೆಕ್ಷನ್ 7 ಎ ಪ್ರಕಾರ ನೇರ ಫಲಾನುಭವಿಗಳು, ಸೆಕ್ಷನ್ 7ಬಿ ಪ್ರಕಾರ ಕಾಲೇಜುಗಳು, ಶಿಕ್ಷಣ ಸಂಸ್ಥೆ, ಅಭಿವೃದ್ಧಿ, ಸೆಕ್ಷನ್ 7 ಸಿ ಆರೋಗ್ಯ, ಶಿಕ್ಷಣ , ಸಮುದಾಯ ಭವನ ಹಾಗೂ 7ಡಿ ಅಭಿವೃದ್ಧಿ ಬಳಕೆ ಬಿಟ್ಟು ಅನ್ಯ ಯೋಜನೆಗಳಿಗೆ ಬಳಸುವಂತಿಲ್ಲ ಎಂದು ಕಾಯ್ದೆಯಲ್ಲಿವೆ.

ಇದು ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಮುಂತಾದ ಸಾಮಾನ್ಯ ಸಾಮಾಜಿಕ ವಲಯದ ಯೋಜನೆಗಳನ್ನು ಎಸ್‍ಸಿಎಸ್‍ಪಿ-ಟಿಎಸ್‍ಪಿ ಕಾಯ್ದೆಯಡಿ ಸೇರಿಸಲು ಅವಕಾಶವಿರುತ್ತದೆ. ಹಾಗಾಗಿ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಅನುದಾನ ಹಂಚಿಕೆ ಆಗಿಲ್ಲ ಎಂದು ವಿವರಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಾರಾಯಣಸ್ವಾಮಿ, ನಿಮಗೆ ನೀಡಿರುವ ಲಿಖಿತ ಉತ್ತರದಲ್ಲಿ ಗೃಹ ಲಕ್ಷ್ಮೀ, ಅನ್ನಭಾಗ್ಯ, ಗೃಹ ಜ್ಯೋತಿ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳಿಗೆ ಒಟ್ಟು 10 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿ ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಇದು ಮರೆಮಾಚುವ ಪ್ರಯತ್ನ ಎಂದರು.

ಸಚಿವರ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಇದು ದಲಿತ ವಿರೋಧ ಸರ್ಕಾರ, ಚುನಾವಣೆಯಲ್ಲಿ ಎಲ್ಲರಿಗೂ ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿ ಈಗ ಎಸ್‍ಸಿಎಸ್‍ಪಿ-ಟಿಎಸ್‍ಪಿ ಮೀಸಲಿಟ್ಟ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಆಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶಿಸಿ, ಈ ಯೋಜನೆಯಡಿ ಮೀಸಲಿಟ್ಟ ಯೋಜನೆಗಳನ್ನು ಅನ್ಯ ಯೋಜನೆಗಳಿಗೆ ಬಳಸಿಕೊಳ್ಳುವಂತಿಲ್ಲ ಎಂದು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ನಾವು ಫಲಾನುಭವಿಗಳನ್ನು ಗುರುತಿಸಿ ಹಂಚಿಕೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಅಲ್ಲಿ ಗೂಳಿಹಟ್ಟಿ ಶೇಖರ್ ಅವರನ್ನು ಒಳಗೆ ಬಿಡುವುದಿಲ್ಲ. ಇಲ್ಲಿ ಬಿಜೆಪಿಯವರು ಧರಣಿ ಮಾಡುತ್ತಾರೆ ಎಂದು ತಿರುಗೇಟು ನೀಡಿದರು. ಗೂಳಿಹಟ್ಟಿ ಶೇಖರ್ ಅವರ ಪ್ರಕರಣವನ್ನು ವಿಷಯಾಂತರ ಮಾಡಲು ಇಲ್ಲಿ ಧರಣಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಆಗ ಆರೋಪ-ಪ್ರತ್ಯಾರೋಪಗಳು ಮುಂದುವರೆದ ಕಾರಣ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು.

ಪುನಃ ಸದನ ಸೇರಿದಾಗ ಪ್ರತಿಪಕ್ಷದವರು ಸದನದ ಬಾವಿಗಿಳಿದು ತಮ್ಮ ಧರಣಿಯನ್ನು ಮುಂದುವರೆಸಿದರು. ಈ ವೇಳೆ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿಯವರು, ಸದಸ್ಯರು ನೀವು ನೀಡಿರುವ ಉತ್ತರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಧ್ಯವಾದರೆ ಇನ್ನೊಮ್ಮೆ ಉತ್ತರ ಕೊಡಿ ಎಂದು ಸಚಿವ ಮಹದೇವಪ್ಪ ಅವರಿಗೆ ಸೂಚಿಸಿದರು.

ಬಂಡವಾಳ ಹೂಡಿಕೆ ಸಮಾವೇಶಗಳಿಗಾಗಿ 88 ಕೋಟಿ ಖರ್ಚು

ಆಗ ಮಹದೇವಪ್ಪನರು ಈ ಕಾಯ್ದೆಯಡಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರೂ ಇಬ್ಬರು ಕೆಲಸ ಮಾಡಿದ್ದೇವೆ. ಈ ಕಾಯ್ದೆ ಪ್ರಕಾರ ಎಸ್‍ಸಿ-ಎಸ್‍ಟಿ/ಟಿಎಸ್‍ಪಿ ಅಭಿವೃದ್ಧಿಗಾಗಿಯೇ ಈ ಹಣವನ್ನು ಮೀಸಲಿಡಲಾಗಿದೆ. ಬೇರೆ ಉದ್ದೇಶಗಳಿಗೆ ಇದನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡರು.

ಆಗ ಛಲವಾದಿ ನಾರಾಯಣಸ್ವಾಮಿ ಹಾಗಾದರೆ ಈ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಏಕೆ ಕೊಟ್ಟಿದ್ದೀರಿ, ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ ಎಂದು ನೀವೇ ಹೇಳುತ್ತಿದ್ದೀರಿ, ಆದರೆ 11 ಸಾವಿರ ಕೋಟಿ ಹಣವನ್ನು ನಿಮ್ಮ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದೀರಿ. ದಲಿತರ ಹಣ ದಲಿತರ ಅಭಿವೃದ್ಧಿಗೇ ಮೀಸಲಿಡಬೇಕು. ಕೇವಲ ಸಿಮೆಂಟ್ ರಸ್ತೆ, ಸಮುದಾಯಭವನ, ಚರಂಡಿ ನಿರ್ಮಾಣ ಮಾಡಿದರೆ ಸಾಲದು, ಶಿಕ್ಷಣ ಅದಕ್ಕೆ ಬೇಕಾದ ಹಣ ಒದಗಿಸಿದರೆ ದಲಿತರ ಉದ್ದಾರವಾಗುತ್ತದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಈ ಹಂತದಲ್ಲಿ ಗದ್ದಲ ಜೋರಾದಾಗ ಸಭಾಪತಿಯವರು ಮತ್ತೆ ಸದನವನ್ನು ಮುಂದೂಡಿದರು. ಸದನ 2ನೇ ಬಾರಿಗೆ ಸೇರಿದಾಗ ಹಿಂದಿನ ಸರ್ಕಾರದ ಅವಧಿಯಲ್ಲೇ 10 ಸಾವಿರ ಕೋಟಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈಗ ನಾವು ಕಾಯ್ದೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ.

ಯಾವ ಯೋಜನೆಗೆ ಹಣ ಮೀಸಲಿಡಲಾಗಿದೆಯೋ ಅದಕ್ಕಷ್ಟೇ ಬಳಸಿಕೊಳ್ಳಬೇಕು. ಇವರಿಗೆ ದಲಿತರ ಉದ್ದಾರವಾಗಬೇಕಿಲ್ಲ. ಎಲ್ಲರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಯಲ್ಲೇ 7800 ಕೋಟಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂದು ಸದನದಲ್ಲೇ ಉತ್ತರ ಕೊಟ್ಟಿದ್ದಾರೆ. ಈಗ ದಲಿತರ ಬಗ್ಗೆ ಮಾತನಾಡುತ್ತಾರೆ. ನಾಚಿಕೆಯಾಗುವುದಿಲ್ಲವೇ ಎಂದು ಕಿಡಿಕಾರಿದರು.

ಆಗ ಸಚಿವ ಮುನಿಯಪ್ಪ ಅವರು ಅಧಿವೇಶನದಲ್ಲಿ ಮುಖ್ಯವಾಗಿ ಉತ್ತರ ಕರ್ನಾಟಕದ ಅಭಿವೃದ್ದಿ ಬಗ್ಗೆ ಚರ್ಚೆಯಾಗಬೇಕಿದೆ. ಇನ್ನು ಸಮಸ್ಯೆಗಳು ಏನೇ ಇದ್ದರೂ ಸರ್ಕಾರ ಉತ್ತರ ಕೊಡಲು ಸಿದ್ದವಿದೆ. ದಯವಿಟ್ಟು ಎಲ್ಲಾ ಸದಸ್ಯರು ಸಹಕರಿಸಿ ಎಂದು ಮನವಿ ಮಾಡಿದರು.

ಮುನಿಯಪ್ಪನವರ ಮಾತಿಗೂ ಬಿಜೆಪಿ ಸದಸ್ಯರು ಕಿವಿಕೊಡದಿದ್ದಾಗ ಆಕ್ರೋಶಗೊಂಡ ಸಭಾಪತಿ ಬಸವರಾಜ ಹೊರಟ್ಟಿಯವರು ಪೀಠದಿಂದ ಎದ್ದುನಿಂತು, ನಾನು 43 ವರ್ಷಗಳಿಂದ ಈ ಸದನವನ್ನು ನೋಡಿದ್ದೇನೆ. ಸದನ ನಡೆಸಲು ನಾನು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಹಂತದಲ್ಲಿ ತೇಜಸ್ವಿನಿ ಗೌಡ, ತಿಪ್ಪೇಸ್ವಾಮಿ ಅವರುಗಳು ಮಾತನಾಡಿ, ಅನ್ಯ ಉದ್ದೇಶಗಳಿಗೆ ಸರ್ಕಾರ ಹಣ ವರ್ಗಾವಣೆ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ನಮ್ಮ ಸರ್ಕಾರ, ನಿಮ್ಮ ಸರ್ಕಾರ ಎನ್ನಬೇಡಿ. ತಪ್ಪು ಯಾರೇ ಮಾಡಿದರೂ ತಪ್ಪೇ. ಸರ್ಕಾರಕ್ಕೆ ಸಮರ್ಪಕವಾದ ಮಾಹಿತಿ ನೀಡಲು ಸೂಚಿಸಬೇಕೆಂದು ಮನವಿ ಮಾಡಿದರು.

ಬಂಡವಾಳ ಹೂಡಿಕೆ ಸಮಾವೇಶಗಳಿಗಾಗಿ 88 ಕೋಟಿ ಖರ್ಚು

ಆಗ ಸಭಾಪತಿಯವರು ಹಣ ಬಳಕೆ ವಿಚಾರದ ವಿಷಯವನ್ನು ಸೋಮವಾರಕ್ಕೆ ತೆಗೆದುಕೊಳ್ಳುತ್ತೇನೆ ಎಂದಾಗ, ಇದಕ್ಕೆ ಒಪ್ಪದ ವಿಪಕ್ಷ ಸದಸ್ಯರರು 330ಕ್ಕೆ ಕೊಡಿ ಎಂದು ಪಟ್ಟು ಹಿಡಿದರು. ಸದನದ ಸಮಯ ಹಾಳು ಮಾಡಲು ಹೀಗೆ ಮಾತಾಡ್ತಾಯಿದ್ದೀರಿ ಎಂದು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಿದ್ದಂತೆ, ಬಿಜೆಪಿಯ ಸದಸ್ಯ ರವಿಕುಮಾರ್ ಅವರು ನೀವು ಆ ಕೆಲಸ ಮಾಡಿದ್ದು ಎಂದಾಗ ಸದನದಲ್ಲಿ ಗದ್ದಲ ಮತ್ತಷ್ಟು ಹೆಚ್ಚಾಯಿತು.

ಸಭಾಪತಿ ಬಸವರಾಜ ಹೊರಟ್ಟಿ ಅವರು ಮಧ್ಯಪ್ರವೇಶಿಸಿ, ಹೀಗೆ ಮುಂದುವರೆದರೆ ಸದನ ನಡೆಸಲು ಕಷ್ಟವಾಗುತ್ತದೆ. ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಗರಮ್ಮಾದರು. ಬಳಿಕ ಸೋಮವಾರ ಚರ್ಚೆಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಧರಣಿಯನ್ನು ಕೈ ಬಿಟ್ಟರು.

RELATED ARTICLES

Latest News