ಬೆಂಗಳೂರು, ಡಿ.9- ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಾಕತ್ತಿದ್ದರೆ ಧಾರ್ಮಿಕ ಮುಖಂಡರಾದ ತನ್ವಿರ್ ಅಸ್ಮಿ ಅವರ ವಿರುದ್ಧ ಎನ್‍ಐಎ ತನಿಖೆ ನಡೆಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಅದರ ಬಳಿಕ ಯತ್ನಾಳ್ ಆರೋಪ ಮಾಡಿ ಸಮಾವೇಶದಲ್ಲಿದ್ದ ವಿಜಯಪುರ ಮೂಲದವರಾದ ತನ್ವೀರ್ ಅಸ್ಮಿಗೆ ಐಸಿಸ್ ಉಗ್ರರ ನಂಟಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವಿದೆ. ಬಸನಗೌಡ ಯತ್ನಾಳ್ ಅವರು ಎನ್‍ಐಎ ಮೂಲಕ ತನಿಖೆ ಮಾಡಿಸಿ ತಮ್ಮ ಆರೋಪವನ್ನು ಸಾಬೀತುಪಡಿಸಬೇಕು ಎಂದರು. ತಾವು ಯಾವುದೇ ತನಿಖೆಗಾದರೂ ಸಿದ್ಧ ಎಂದು ತನ್ವೀರ್ ಅಸ್ಮಿ ಹೇಳಿದ್ದಾರೆ. ತಮ್ಮ ಮೇಲಿನ ಆರೋಪ ಸಾಬೀತಾದರೆ ದೇಶ ತೊರೆಯುವುದಾಗಿ ಸವಾಲು ಹಾಕಿದ್ದಾರೆ. ಒಂದು ವೇಳೆ ಆರೋಪ ಸಾಬೀತುಪಡಿಸುವಲ್ಲಿ ಯತ್ನಾಳ್ ವಿಫಲರಾದರೆ ಯಾವ ಕ್ರಮಕ್ಕೆ ಒಳಗಾಗುತ್ತಾರೆ ಎಂದು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.
ಕೋಟಿ ಕೋಟಿ ಹಣ ಪತ್ತೆಯಾದ ಕಾಂಗ್ರೆಸ್ ಸಂಸದನ ಬಂಧನಕ್ಕೆ ಮರಾಂಡಿ ಒತ್ತಾಯ
ಉಗ್ರಗಾಮಿಗಳ ವಿಚಾರ ಬರುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ ಸ್ವಯಂ ವಿಚಾರಣೆಗೆ ಧಾವಿಸಲಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಪರ್ಕಗಳಿರುವುದರಿಂದ ಉಗ್ರಗಾಮಿಗಳ ವಿಚಾರವನ್ನು ರಾಜ್ಯದ ಪೊಲೀಸರು ತನಿಖೆ ಮಾಡಲಾಗುವುದಿಲ್ಲ. ಯತ್ನಾಳ್ ಅವರು ಮೊದಲು ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಎನ್‍ಐಎ ತನಿಖೆಗೆ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.