ಬೆಳಗಾವಿ,ಮಾ.13-ಶ್ರೀಶೈಲಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತಪಟ್ಟವರನ್ನು ಬೆಳಗಾವಿ ಜಿಲ್ಲೆ ಕಾಗವಾಡದ ಚಂದ್ರವ್ವ (70) ಮತ್ತು ಕಾಮಪ್ಪ ಅವರಾದಿ (65) ಎಂದು ಗುರುತಿಸಲಾಗಿದೆ.ಬೆಳಗಾಗಿ ಜಿಲ್ಲೆ ಕಾಗವಾಡದಿಂದ ಶ್ರೀ ಶೈಲಕ್ಕೆ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದಾಗ ಇಂದು ಬೆಳಗ್ಗೆ 7.30 ರ ಸುಮಾರಿಗೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬಸವನಹಟ್ಟಿ ಕ್ರಾಸ್ ಬಳಿ ಅತೀ ವೇಗದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಸುದ್ದಿ ತಿಳಿದು ಬಸವನ ಬಾಗೇವಾಡಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
