Tuesday, April 14, 2026
Homeರಾಜ್ಯಹೆಚ್ಚಿದ ಬಿಸಿಲಿನ ಬೇಗೆ : ಎಳನೀರು ಸೇರಿದಂತೆ ತಂಪು ಪಾನೀಯಗಳಿಗೆ ಫುಲ್ ಡಿಮ್ಯಾಂಡ್

ಹೆಚ್ಚಿದ ಬಿಸಿಲಿನ ಬೇಗೆ : ಎಳನೀರು ಸೇರಿದಂತೆ ತಂಪು ಪಾನೀಯಗಳಿಗೆ ಫುಲ್ ಡಿಮ್ಯಾಂಡ್

Increased temperature : Full demand for cold drinks including coconut water

ಬೆಂಗಳೂರು,ಮಾ.13- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ಎಳನೀರು ಕುಡಿಯೋಣ ಎಂದು ಹೋದವರ ಜೇಬಿಗೆ ಕತ್ತರಿ ಬೀಳುತ್ತಿದೆ.

ಬಿಸಿಲಿನ ತಾಪಕ್ಕೆ ಜನರು ಎಳನೀರು, ಕಲ್ಲಂಗಡಿ, ಕರಬೂಜ ಹಣ್ಣಿನ ಮೊರೆ ಹೋಗುತ್ತಿದ್ದು, ಡಿಮ್ಯಾಂಡ್‌ ಹೆಚ್ಚಾಗಿದೆ. ಆದರೆ ಬೆಲೆ ಹೆಚ್ಚಳದಿಂದ ಖರೀದಿ ಮಾಡುವುದಕ್ಕೆ ಹಿಂದೆಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿ ಬಿಸಿಲಿನ ಪ್ರಮಾಣ ಜೋರಾಗಿಯೇ ಇದೆ. ಬೆಂಗಳೂರಿನಲ್ಲಿಂದು 27 ಡಿಗ್ರಿ ಸೆಲ್ಸಿಯಸ್‌‍ವರೆಗೂ ಉಷ್ಣಾಂಶ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ.

ಈ ಮಧ್ಯೆ ದೇಹವನ್ನು ತಂಪಾಗಿಸಿರಿಸಿಕೊಳ್ಳಲು ಪೋಷಕಾಂಶಭರಿತ ನೈಸರ್ಗಿಕ ಪಾನೀಯ ಎಳನೀರು ಅಥವಾ ಸೀಯಾಳದ ಮೊರೆ ಹೋಗುತ್ತಿದ್ದಾರೆ. ಆದರೆ ಬೆಲೆ ನೋಡಿದರೆ ಬಿಸಿಲಿನಂತೆ ಜೇಬೂ ಕೂಡ ಸುಡುವಂತಾಗಿದೆ.

ಕಳೆದ ಎರಡು ವರ್ಷದಿಂದ ಎಳನೀರು ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡು ಬಂದಿದ್ದು, ಈಗ ಗುಣಮಟ್ಟದ ಎಳನೀರು 60 ರಿಂದ 70 ರೂ.ಗೆ ಮಾರಾಟವಾಗುತ್ತಿದೆ.

ಎಳನೀರಿಗೇಕೆ ಬೇಡಿಕೆ :
ಆರೋಗ್ಯದ ದೃಷ್ಟಿಯಿಂದ ಜನರು ಹೆಚ್ಚಾಗಿ ಎಳನೀರು ಸೇವಿಸುತ್ತಾರೆ. ಎಳನೀರಿನಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಪೋಷಕಾಂಶ ಭರಿತ, ಕಲಬೆರಿಕೆಯಿಲ್ಲದಂತೆ ಸಿಗುವಂತಹ ಏಕೈಕ ಪಾನೀಯ ಎಂದರೆ ತಪ್ಪಾಗಲಾರದು. ಹೀಗಾಗಿ ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ಎಳನೀರನ್ನು ಸೇವಿಸುತ್ತಾರೆ.

ನಿರ್ಜಲೀಕರಣ, ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ರಕ್ತದೊತ್ತಡ ನಿಯಂತ್ರಣ, ಜೀರ್ಣ ಕ್ರಿಯೆ, ತೂಕ ಇಳಿಕೆ, ಕಿಡ್ನಿ ಕಲ್ಲು ಕರಗಿಸುವಂತಹ ಹಲವಾರು ಔಷಧೀಯ ಗುಣಗಳನ್ನು ಎಳನೀರು ಹೊಂದಿದೆ.

ಬೆಂಗಳೂರಿಗೆ ಮಂಡ್ಯ, ಮದ್ದೂರು, ಮೈಸೂರು, ಬೆಂಗಳೂರು ಗ್ರಾಮಾಂತರ, ತುಮಕೂರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಸರಬರಾಜಾಗುತ್ತದೆ.ದೇಶದಲ್ಲೇ ಅತೀ ದೊಡ್ಡ ಮಾರುಕಟ್ಟೆಯಾದ ಮದ್ದೂರಿನಲ್ಲಿ ಎಳನೀರು ನಿರೀಕ್ಷಿತ ಪ್ರಮಾಣದಲ್ಲಿ ಬಾರದಿರುವುದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಹವಾಮಾನ ವೈಪರೀತ್ಯ, ನುಸಿಪೀಡೆ, ಮಳೆಯ ಕೊರತೆ ಕಾರಣಗಳಿಂದ ಇಳುವರಿ ಕುಂಠಿತವಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.ಹಣ ಕೊಟ್ಟರೂ ಗುಣಮಟ್ಟದ ಎಳನೀರು ಸಿಗುತ್ತಿಲ್ಲ. ನಾವು ಮದ್ದೂರಿನಿಂದ ಇಲ್ಲಿ ತಂದು ಮಾರಲು ಸಾಗಾಟ ವೆಚ್ಚ, ಕೂಲಿ, ಅಂಗಡಿ ಬಾಡಿಗೆ ಎಲ್ಲವನ್ನೂ ಲೆಕ್ಕ ಹಾಕಿ ಮಾರಾಟ ಮಾಡುವಂತಾಗಿದೆ. ಹಾಗಾಗಿ ಸದ್ಯ 60 ರಿಂದ 65 ರೂ.ಗೆ ಮಾರಾಟ ಮಾಡುತ್ತಿದ್ದೇವೆ ಎಂದು ಉಲ್ಲಾಳದ ಎಳನೀರು ವ್ಯಾಪಾರಿ ಸಿದ್ದಲಿಂಗಯ್ಯ ತಿಳಿಸಿದ್ದಾರೆ.

RELATED ARTICLES

Latest News